ಅಂಗವಿಕಲರಿಗೆ ಸಾಧನ-ಸಲಕರಣೆಗಳ ವಿತರಣೆ : ಶಾಸಕ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ: ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ನಗರದಲ್ಲಿಂದು ಚಾಮರಾಜನಗರ ತಾಲೂಕಿನ 10 ಮಂದಿ ವಿಕಲಚೇತನ ಫಲಾನುಭವಿಗಳಿಗೆ ಸಾಧನ, ಸಲಕರಣೆಗಳನ್ನು ವಿತರಿಸಿದರು.

  ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ವ್ಯಾಪ್ತಿಯ ವಿಶೇಷಚೇತನರಿಗೆ ಒಟ್ಟು 3,86,310 ರೂ. ವೆಚ್ಚದ ತ್ರಿಚಕ್ರ ವಾಹನ, ಹೊಲಿಗೆಯಂತ್ರ, ಬ್ಯಾಟರಿ ಚಾಲಿತ ವೀಲ್ ಚೇರ್, ಕೈಗಡಿಯಾರ, ಇನ್ನಿತರ ಸಾಧನ ಸಲಕರಣೆಗಳನ್ನು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ವಿತರಣೆ ಮಾಡಿದರು.  

  ಇದೇ ವೇಳೆ ಮಾತನಾಡಿದ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ 3 ಲಕ್ಷ ರೂ.ಗಳಿಗೂ ಹೆಚ್ಚಿನ ಮೊತ್ತದ ಸಾಧನ ಸಲಕರಣೆಗಳನ್ನು ಅವಶ್ಯವಿರುವ 10 ಜನರಿಗೆ ಇಂದು ವಿತರಿಸಲಾಗಿದೆ. ವಿವಿಧ ಇಲಾಖೆಗಳು, ಸಚಿವರು, ಶಾಸಕರು, ಸಂಸದರು, ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡುವ ಅನುದಾನದಲ್ಲಿ ವಿಶೇಷಚೇತನರಿಗಾಗಿಯೇ ಶೇ.5ರಷ್ಟು ಅನುದಾನವನ್ನು ಸರ್ಕಾರ ಮೀಸಲಿರಿಸಿದೆ. ಅಂಗವಿಕಲರು ಇದರ ಸದುಪಯೋಗ ಪಡೆಯಬೇಕು ಎಂದರು.

  ಸಾಧನ, ಸಲಕರಣೆಯಿಂದ ವಿಕಲಚೇತನರು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿದೆ. ಅಂಗವಿಕಲರಿಗೆ ಕೇವಲ ಅನುಕಂಪ ತೋರುವುದು ಬೇಡ, ಅವರ ಶ್ರೇಯೋಭಿವೃದ್ಧಿಗಾಗಿ ನಿಗದಿಯಾಗಿರುವ ಅನುದಾನದಲ್ಲಿ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಿದರೆ ಸಾಕು, ಅಂಗವಿಕಲರ ಬದುಕು ಹಸನಾಗಲಿದೆ. ಸಮಾಜದಲ್ಲಿ ಅವರು ಸಹ ಇತರರಂತೆ ನೆಮ್ಮದಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

  ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸಯ್ಯದ್ ರಫೀ, ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೂಪೇಶ್, ಇತರರು ಇದೇ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *