ಪುಣಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 174 ಫಲಾನುಭವಿಗಳಿಗೆ ಶಾಸಕರಿಂದ ಮನೆ ನಿರ್ಮಾಣಕ್ಕೆ ಮಂಜೂರಾತಿ ಆದೇಶ ಪತ್ರ ವಿತರಣೆ

ಚಾಮರಾಜನಗರ: ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ತಾಲೂಕಿನ ಪುಣಜನೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದ ಆಶ್ರಯ ಮನೆ ಯೋಜನೆಯಡಿ ಮಂಜೂರಾತಿ ಆದೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 174 ಫಲಾನುಭವಿಗಳಿಗೆ ವಿವಿಧ ವಸತಿ ಯೋಜನೆಯಡಿಯಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಿಕೊಳ್ಳಲು ಮಂಜೂರಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಯೋಜನೆಯಡಿ 140 ಹಾಗೂ ಬಸವ ವಸತಿ ಯೋಜನೆಯಡಿಯಲ್ಲಿ 34 ಒಟ್ಟು 174 ಮನೆಗಳ ಮಂಜೂರಾತಿ ಆದೇಶ ಪತ್ರ ಪಡೆದ ಫಲಾನುಭವಿಗಳ ಖಾತೆಗಳಿಗೆ ಸರ್ಕಾರದಿಂದ ನೇರವಾಗಿ ಹಣ ಜಮಾವಾಗಲಿದ್ದು, ನಿಗಧಿತ ಅವಧಿಯೊಳಗೆ ಮನೆಗಳನ್ನು ನಿರ್ಮಿಸಿಕೊಳ್ಳಬೇಕು.

ಯಾವುದೇ ಕಾರಣಕ್ಕೂ ಕೂಡಾ ಅರ್ಧಂಬರ್ಧ ಕಾಮಗಾರಿ ಮಾಡಬೇಡಿ, ಮನೆಯನ್ನು ಪೂರ್ಣವಾಗಿ ಕಟ್ಟಿಕೊಳ್ಳುವ ಮೂಲಕ ಉತ್ತಮ ರೀತಿಯಲ್ಲಿ ಜೀವನ ಸಾಗಿಸಬೇಕು ಎಂದರು.

ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ, ನಮ್ಮ ಕ್ಷೇತ್ರಕ್ಕೆ ಸಾಕಷ್ಟು ಆಶ್ರಯ ಮನೆಗಳನ್ನು ನೀಡಲಾಗಿತ್ತು. ಈ ಬಾರಿಯೂ ಕೂಡಾ ಸಿದ್ದರಾಮಯ್ಯನವರ ಸರ್ಕಾರ ಇರುವುದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆಶ್ರಯ ಯೋಜನೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೀಡಲಾಗುವುದು ಎಂದರು.

ಕೂಸಿನ ಮನೆ ಉದ್ಘಾಟನೆ: ಕೂಸಿನ ಮನೆಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸರ್ಕಾರದಿಂದ ನರೇಗ ಯೋಜನೆಯಲ್ಲಿ ಉದ್ಯೋಗವನ್ನು ಹೆಚ್ಚು ಮಾಡಲಿದ್ದು, ಅಂತಹ ಫಲಾನುಭವಿಗಳು ತಮ್ಮ ಮಕ್ಕಳನ್ನು ಈ ಕೂಸಿನ ಮನೆಯಲ್ಲಿ ಬಿಟ್ಟು ತಮ್ಮ ಕೆಲಸ ನಿರ್ವಹಣೆ ಮಾಡಲು ಅನುಕೂಲವಾಗಲಿದೆ. ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಇದಕ್ಕಾಗಿಯೇ ನಾಲ್ವರಿಗೆ ತರಬೇತಿಯನ್ನು ನೀಡಲಾಗಿದ್ದು, ಅವರು ತಮ್ಮ ಮಕ್ಕಳನ್ನು ಉತ್ತಮ ರೀತಿಯಲ್ಲಿ ಹಾರೈಕೆ ಮಾಡಲಿದ್ದಾರೆ. ಇದರಿಂದ ಫಲಾನುಭವಿಗಳು ಆರ್ಥಿಕವಾಗಿ ಮುಂದೆ ಬರಲು ಸಹಕಾರಿಯಾಗಲಿದೆ ಎಂದರು.

ನಮ್ಮ ಸರ್ಕಾರದಿಂದ 5 ಗ್ಯಾರೆಂಟಿ ಯೋಜನೆಗಳನ್ನು ರೂಪಿಸಲಾಗಿದ್ದು, ಪ್ರತಿಯೊಬ್ಬರೂ ಇದು ತಲುಪುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಇದರಿಂದ ಸಾಕಷ್ಟು ಬಡ ಕುಟುಂಬಗಳಿಗೆ ಅನುಕೂಲವಾಗುತ್ತಿದೆ. ಹಣ ತಮ್ಮ ಖಾತೆಗೆ ಜಮಾ ಆಗದೆ ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಅದನ್ನು ಗ್ರಾಮ ಸಭೆಯ ಮೂಲಕ ಅಧಿಕಾರಿಗಳು ಸರಿಪಡಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಆವರಣದಲ್ಲಿ 2024ರ ನೂತನ ವರ್ಷದ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಿಬಾಯಿ ಗಣೇಶ್, ಮಂಜೂರಾತಿ ಪತ್ರ ಪಡೆದ ಪಡೆದ ಫಲಾನುಭವಿಗಳು ಅಚ್ಚುಕಟ್ಟಾಗಿ ಮನೆ ನಿರ್ಮಿಸಿಕೊಳ್ಳಿ. ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸವನ್ನು ಕೊಡಿಸುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಿ. ಜತೆಗೆ ಗ್ರಾ.ಪಂ.ನಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ನಮ್ಮ ಕರ್ತವ್ಯ ಎಂದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಿ.ಕುಮಾರನಾಯಕ್ ಮಾತನಾಡಿ, ಶಾಸಕರು ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದು, ಪುಣಜನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸಾಕಷ್ಟು ಅನುದಾನಗಳನ್ನು ನೀಡುವ ಮೂಲಕ ಗ್ರಾಮ ಅಭಿವೃದ್ಧಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಸೋಮಣ್ಣೇಗೌಡ, ಗ್ರಾ.ಪಂ. ಉಪಾಧ್ಯಕ್ಷ ರಾಚಯ್ಯ, ಸದಸ್ಯರಾದ ಕುಮಾರಿ ಬಾಯಿ ಶಿವಾಜಿನಾಯಕ್, ಮಹೇಶ್, ಗೀತಾ ಸಿದ್ದರಾಜು, ಚಂದ್ರಶೇಖರ್, ಪಿ.ನಾಗನಾಯಕ, ಶಬೀನಾ ಬಾನು, ಶಾಮೀರ್‍ಪಾಷಾ, ಕುಮಾರ್, ಮಹೇಶ್ ನಾಯಕ, ಶ್ರೀಮತಿ ಲಲಿತಾಬಾಯಿ, ಆರ್.ಮಣಿನಾಯಕ, ಬಸಮ್ಮ, ಮಮತಾ ಮುತ್ತುರಾಜ್, ಗಂಗಾಶಂಕರ್, ನಂಜುಂಡ, ಭಾಗ್ಯಬಾಯಿ ಗಣೇಶ್ ನಾಯಕ್, ರಂಗಸ್ವಾಮಿ, ಸುಶೀಲಾ, ಪಿಡಿಓ ವಿ.ಸಿದ್ದರಾಜು, ಲೆಕ್ಕ ಸಹಾಯಕ ಮಹದೇವಸ್ವಾಮಿ, ಬಿಲ್ ಕಲೆಕ್ಟರ್ ಮಹದೇವನಾಯಕ ಸೇರಿದಂತೆ ಗ್ರಾಮಸ್ಥರು, ಮುಖಂಡರು ಇದ್ದರು.

Leave a Reply

Your email address will not be published. Required fields are marked *