ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ತೆರೆಯಲಾಗಿರುವ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣಾ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚುನಾವಣಾ ಪ್ರಕ್ರಿಯೆ ನಿರ್ವಹಣೆ ಕುರಿತು ಚಾಮರಾಜನಗರ ಲೋಕಸಭಾ ಕ್ಷೇತ್ರವ್ಯಾಪ್ತಿಯ ವಿಧಾನಸಭಾ ಕ್ಷೇತ್ರವಾರು ಸಹಾಯಕ ಚುನವಣಾಧಿಕಾರಿಗಳು, ನಿಯೋಜಿತ ನೋಡೆಲ್ ಅಧಿಕಾರಿಗಳೊಂದಿಗೆ ನಡೆದ ವರ್ಚುವೆಲ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಕ್ಷೇತ್ರವ್ಯಾಪ್ತಿಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ, ನಂಜನಗೂಡು, ವರುಣ, ಟಿ. ನರಸೀಪುರ, ಹನೂರು, ಕೊಳ್ಳೇಗಾಲ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಅಂತರರಾಜ್ಯ ಹಾಗೂ ಅಂತರಜಿಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆ ಕಾರ್ಯವನ್ನು ಚುರುಕುಗೊಳಿಸಬೇಕು. ದಾಖಲೆ ಇಲ್ಲದೇ ಸಾಗಿಸುವ ಹಣ, ಅಕ್ರಮ ಮದ್ಯ ಸಾಗಣೆ, ಅಮಿಷ ಒಡ್ಡು ವಸ್ತುಗಳ ಮೇಲೆ ಹೆಚ್ಚಿನ ನಿಗಾ ಇರಬೇಕು. ಎಲ್ಲಾ ವಾಹನಗಳನ್ನು ವ್ಯಾಪಕವಾಗಿ ತಪಾಸಣೆ ಮಾಡಬೇಕು ಎಂದರು.
ಚೆಕ್‍ಪೋಸ್ಟ್‍ಗಳಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆ ಇರಬೇಕು. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಅವಶ್ಯವಾಗಿರುವ ಜರ್ಕಿನ್, ಟಾರ್ಚ್‍ಗಳು ಇರಬೇಕು. ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ಸಿ.ಸಿ. ಟಿ.ವಿ ಕಾರ್ಯನಿರ್ವಹಿಸಬೇಕು. ವಿದ್ಯುತ್ ಅಡಚಣೆಯಾಗದಿರಲು ಯು.ಪಿ.ಎಸ್ ವ್ಯವಸ್ಥೆಯನ್ನು ಸಹ ಇರಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಚೆಕ್‍ಪೋಸ್ಟ್‍ಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಿಬ್ಬಂದಿಗಳು ವಾಹನಗಳನ್ನು ಕೂಲಂಕುಷವಾಗಿ ವಾಹನ ತಪಾಸಣೆ ಮಾಡಬೇಕು. ಈ ಬಗ್ಗೆ ವಹಿ (ರಿಜಿಸ್ಟರ್) ಗಳಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಚುನಾವಣಾ ಕೆಲಸಗಳಿಗಾಗಿ ನಿಯೋಜಿತರಾಗಿರುವ ಎ.ಆರ್.ಒ ಮತ್ತು ತಹಶೀಲ್ದಾರರು ಭೇಟಿ ನೀಡಿ ಚೆಕ್ ಪೋಸ್ಟ್ ಕಾರ್ಯನಿರ್ವಹಣೆಯನ್ನು ಪರಿಶೀಲಿಸಬೇಕು ಎಂದರು.
ಮಾದರಿ ನೀತಿ ಸಂಹಿತೆ ಪಾಲನೆಗೆ ನಿಗಾ ವಹಿಸಲು ನಿಯೋಜಿತರಾಗಿರುವ ಫೈಯಿಂಗ್ ಸ್ಕ್ವಾಡ್ ತಂಡ, ವಿಡಿಯೋ ಸರ್ವೇಲೆನ್ಸ್ ಘಟಕ, ವಿಡಿಯೋ ವೀವಿಂಗ್ ತಂಡಗಳು ಹೆಚ್ಚು ಚಟುವಟಿಕೆಯಿಂದ ಕೆಲಸ ನಿರ್ವಹಣೆ ಮಾಡಬೇಕು ಎಂದ ಜಿಲ್ಲಾಧಿಕಾರಿಯವರು ಚುನಾವಣಾ ಸಂಬಂಧ ನೇಮಕವಾಗಿರುವ ಇನ್ನಿತರ ತಂಡಗಳ ಕಾರ್ಯಚಟುವಟಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿರುವ ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.