ಜಿಲ್ಲಾ ಉಸ್ತುವಾರಿ ಸಚಿವರಿಂದ ವಾಯುವಿನಿಂದ ನೀರು ಉತ್ಪಾದಿಸುವ ಘಟಕ ಪರಿಶೀಲನೆ

ಚಾಮರಾಜನಗರ: ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ನಗರದ ಸೋಮವಾರಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿ ಅಳವಡಿಸಿರುವ ಏರೋ ವಾಟರ್ ಕಂಪನಿಯ ವಾಯುವಿನಿಂದ ನೀರು (ಏರ್-ಟು-ವಾಟರ್) ಉತ್ಪಾದಿಸುವ ಘಟಕವನ್ನು ಪರಿಶೀಲಿಸಿದರು.

   ಸೋಮವಾರಪೇಟೆ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಏರೋ ವಾಟರ್ ಕಂಪನಿ ವತಿಯಿಂದ ಅಳವಡಿಸಿರುವ ವಾಯುವಿನಿಂದ ದಿನಕ್ಕೆ 100 ಲೀ. ಸಾಮಥ್ರ್ಯದ ಶುದ್ಧ ಕುಡಿಯುವ ನೀರು ಉತ್ಪಾದಿಸುವ ಘಟಕದ ಕಾರ್ಯವೈಖರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ವೀಕ್ಷಿಸಿದರು.

   ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲಿಯೇ ಇದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗಲಕ್ಷ್ಮೀ ಅವರಿಗೆ ವಾಯುವಿನಿಂದ ನೀರು ಉತ್ಪಾದಿಸುವ ಘಟಕದ ನಿರ್ವಹಣೆ ಸರಿಯಾಗಿದೆಯೇ, ನೀರು ಶುದ್ಧತೆಯಿಂದ ಕೂಡಿದೆಯೆ, ಮಕ್ಕಳಿಗೆ ಕುಡಿಯುವ ನೀರು ಸಾಕಾಗುತ್ತಿದೆಯೇ ಎಂದು ವಿಚಾರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಲೆಯ ಮುಖ್ಯೋಪಾಧ್ಯಾಯರು ಘಟಕದಿಂದ ಮಕ್ಕಳಿಗೆ ಕುಡಿಯುವ ನೀರು ಸಮರ್ಪಕವಾಗಿ ದೊರೆಯುತ್ತಿದ್ದು, ಘಟಕ ಅಳವಡಿಕೆಯಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿದೆ ಎಂದರು. 

   ಜಿಲ್ಲಾಧಿಕಾರಿ ಶ್ರೀರೂಪ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಏರೋ ವಾಟರ್ ತಂತ್ರಜ್ಞಾನದ ಬಗ್ಗೆ ವಿವರಿಸಿ ವಾತಾವರಣದಲ್ಲಿರುವ ತೇವಾಂಶವನ್ನು ಸಂಗ್ರಹಿಸಿ ಅದನ್ನು ಸಾಂದ್ರೀಕರಿಸಿ ಹಾಗೂ ಶುದ್ದೀಕರಿಸುವ ಮೂಲಕ ಕುಡಿಯಲು ಯೋಗ್ಯವಾದ ನೀರನ್ನು ಉತ್ಪಾದಿಸಲಾಗುತ್ತದೆ. ಈ ತಂತ್ರಜ್ಞಾನವು ಅಂತರ್ಜಲ ಅಥವಾ ಮಳೆಯನ್ನು ಅವಲಂಬಿಸದೇ ವರ್ಷಪೂರ್ತಿ ನಿರಂತರವಾಗಿ ನೀರನ್ನು ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ ಎಂದರು. 

   ವಿದ್ಯುತ್ ಆಧಾರಿತವಾಗಿ ಕಾರ್ಯನಿರ್ವಹಿಸುವ ಈ ಘಟಕವನ್ನು ಸೌರಶಕ್ತಿಯೊಂದಿಗೆ ಜೋಡಿಸಬಹುದಾಗಿದೆ. ದೂರದ ಹಾಗೂ ಅರಣ್ಯ ಪ್ರದೇಶಗಳಿಗೆ ಈ ತಂತ್ರಜ್ಞಾನ ಬಹಳ ಉಪಯುಕ್ತವಾಗಿದ್ದು, ಅರಣ್ಯ ಪ್ರದೇಶಗಳು ಹೆಚ್ಚಾಗಿರುವ ಜಿಲ್ಲೆಯ ಅಗತ್ಯಗಳನ್ನು ಮನಗಂಡು ಈ ತಂತ್ರಜ್ಞಾನವನ್ನು ಜಿಲ್ಲೆಗೆ ಪರಿಚಯಿಸಲಾಗುತ್ತಿದೆ ಎಂದು ಉಸ್ತುವಾರಿ ಸಚಿವರಿಗೆ ಜಿಲ್ಲಾಧಿಕಾರಿ ಶ್ರೀರೂಪ ಅವರು ವಿವರಿಸಿದರು. 

  ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಜಿಲ್ಲೆಯಲ್ಲಿ ಇಂತಹ ಘಟಕಗಳನ್ನು ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಅಳವಡಿಸಿ ತೊಂದರೆ ಪರಿಹರಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸಲಾಗುವುದು ಎಂದರು. 

  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾಧಿಕಾರಿ ಕಚೇರಿಯ ಸಿಎಸ್‍ಆರ್ ಸಮಾಲೋಚಕರಾದ ರಕ್ಷಿತಾ, ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *