ಮಲೆ ಮಹದೇಶ್ವರ ಬೆಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ

ಚಾಮರಾಜನಗರ: ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಭಕ್ತಾಧಿಗಳ ಅನುಕೂಲಕ್ಕಾಗಿ ನಿರ್ಮಾಣ ಹಂತದಲ್ಲಿರುವ ವಿವಿಧ ಕಾಮಗಾರಿ ಪರಿಶೀಲಿಸಿದರು. 

      ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ವೀಕ್ಷಿಸಿದರು. ಬಳಿಕ ದೇವಾಲಯ ಆವರಣದ ಬಳಿ ನಿರ್ಮಾಣವಾಗುತ್ತಿರುವ ಕ್ಯೂ ಲೈನ್ ಕಾಂಪ್ಲೆಕ್ಸ್ ಕಾಮಗಾರಿಯನ್ನು ಪರಿಶೀಲಿಸಿದರು. ಭಕ್ತಾಧಿಗಳಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ವೀಕ್ಷಿಸಿದ ಸಚಿವರು ಕೆಲವು ಅಗತ್ಯ ಸೂಚನೆಗಳನ್ನು ನೀಡಿದರು. ಕಾಮಗಾರಿ ವೇಗವಾಗಿ ನಡೆದು ಭಕ್ತಾಧಿಗಳಿಗೆ ಅನುಕೂಲವಾಗಬೇಕು ಎಂದರು. 

      ನೂತನ ದಾಸೋಹ ಭವನ ನಿರ್ಮಾಣ ಸಂಬಂಧ ಸ್ಥಳ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. 10 ಕೋಟಿ ರೂ. ವೆಚ್ಚದಲ್ಲಿ ಬಹುತೇಕ ನಿರ್ಮಾಣವಾಗಿರುವ 48 ಕೊಠಡಿಗಳ ಡಾರ್ಮಿಟರಿಯನ್ನು ವೀಕ್ಷಿಸಿದರು. ಭಕ್ತಾಧಿಗಳ ವಾಸ್ತವ್ಯಕ್ಕಾಗಿ ನಿರ್ಮಾಣಗೊಂಡು ಉದ್ಘಾಟನೆಯಾಗಿರುವ ವಜ್ರಮಲೆ ಭವನದಲ್ಲಿ ಅಳವಡಿಸಲು ತಯಾರಿಸುತ್ತಿರುವ ಪೀಠೋಪಕರಣ ಕೆಲಸವನ್ನು ವೀಕ್ಷಿಸಿದ ಸಚಿವರು ಗುಣಮಟ್ಟದ ವಸ್ತುಗಳನ್ನು ಬಳಕೆ ಮಾಡುವಂತೆ ಸೂಚಿಸಿದರು. ಭವನದ ಕೊಠಡಿಗಳಿಗೆ ತೆರಳಿ ಅಲ್ಲಿ ಅಳವಡಿಸಲಾಗುತ್ತಿರುವ ಸೌಲಭ್ಯಗಳ ಕುರಿತ ಕೆಲಸವನ್ನು ಪರಿವೀಕ್ಷಿಸಿದರು.  

      ಬಳಿಕ ದೀಪದ ಒಡ್ಡುವಿನಲ್ಲಿರುವ ಮಲೆ ಮಹದೇಶ್ವರರ ಎತ್ತರದ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ನಿರ್ಮಾಣವಾಗುತ್ತಿರುವ ಗೇಬಿಯನ್ ವಾಲ್ ಕಾಮಗಾರಿಯನ್ನು ಪರಿಶೀಲಿಸಿದರು. ಅಲ್ಲಿ ಆಗಬೇಕಿರುವ ಇನ್ನಷ್ಟು ಕಾಮಗಾರಿ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿದರು. 

      ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ರಘು, ಉಪಕಾರ್ಯದರ್ಶಿ ಚಂದ್ರಶೇಖರ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಿರಣ್,  ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿನ್ನಣ್ಣ, ಇನ್ನಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *