ಚಾಮರಾಜನಗರ: ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಚಕೋರ ಸಾಹಿತ್ಯ ವಿಚಾರ ವೇದಿಕೆಯಿಂದ ಡಾ. ಜಿ.ಎಸ್. ಶಿವರುದ್ರಪ್ಪ ರವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ (ಫೆ.26) ಡಾ. ಜಿ.ಎಸ್.ಎಸ್ ನೆನಪುಗಳ ಹಣತೆ ಉಪನ್ಯಾಸ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಮೈಸೂರಿನ ಜೆ.ಎಸ್.ಎಸ್ ವಿದ್ಯಾಪೀಠದ ನಿರ್ದೇಶಕರು ಮತ್ತು ಜಿ.ಎಸ್.ಎಸ್ ಅವರ ಶಿಷ್ಯರೂ ಆದ ಪ್ರೊ. ಮೊರಬದ ಮಲ್ಲಿಕಾರ್ಜುನ ಅವರು ಜಿ.ಎಸ್.ಎಸ್ ಅವರ ಸಾಹಿತ್ಯ, ವ್ಯಕ್ತಿತ್ವ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅವರು ಮಾಡಿದ ಸಾಧನೆಗಳ ಬಗ್ಗೆ ಮಾತನಾಡಿದರು.
ಡಾ. ರವೀಂದ್ರನಾಥ ಠಾಕೂರರು ಬರೆದ ಒಂದು ಸಣ್ಣ ಕಥೆಯ ಆಶಯವನ್ನು ಶಿವರುದ್ರಪ್ಪನವರು ಹೇಗೆ ತಮ್ಮ ಕಾವ್ಯ ಪರಂಪರೆಯಲ್ಲಿ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸಾಧಿಸಿ ತೋರಿಸಿದರು ಅನ್ನುವುದನ್ನು ನೆರೆದಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಉಪನ್ಯಾಸಕರ ಸಮ್ಮುಖದಲ್ಲಿ ಸವಿವರವಾಗಿ ವಿವರಿಸಿದರು.
ಮಲ್ಲಿಕಾರ್ಜುನ ಅವರು ಹೇಳಿದ ಠಾಕೂರರ ಆ ಕಥೆ ಹೀಗಿದೆ "ಮುಳುಗುತ್ತಿರುವ ಸೂರ್ಯ ಜಗತ್ತಿಗೆ ಸಾರಿ ಹೇಳುತ್ತಾನೆ, ಹಗಲಿನ ಹನ್ನೆರಡು ಗಂಟೆ ನಾನು ಈ ಜಗತ್ತಿಗೆ ಬೆಳಕು ನೀಡಿದ್ದೇನೆ. ಇನ್ನುಳಿದ ಹನ್ನೆರಡು ಗಂಟೆ ಈ ಜಗತ್ತಿಗೆ ಯಾರು ಬೆಳಕು ನೀಡುತ್ತೀರಿ? ಅನ್ನುವ ಸವಾಲು ಎಸೆದಾಗ, ಕತ್ತಲಿನಿಂದ ಎದ್ದು ಬಂದ ಒಂದು ಸಣ್ಣ ಬುಡ್ಡಿ ದೀಪ ಹೇಳುತ್ತದೆ, ‘ನನಗೆ ನಿನ್ನಷ್ಟು ವ್ಯಾಪಕವಾಗಿ, ಪ್ರಕಾರವಾಗಿ ಬೆಳಕು ನೀಡಲು ಸಾಧ್ಯವಾಗದಿರಬಹುದು, ಆದರೆ ಸಾಧ್ಯವಾದಷ್ಟು ನನ್ನ ಶಕ್ತಿ ಮೀರಿ ನನ್ನ ಸುತ್ತಲಿನ ಪರಿಸರಕ್ಕೆ ಬೆಳಕು ನೀಡಲು ಪ್ರಯತ್ನಿಸುತ್ತೇನೆ' ಅಂತ ಹೇಳಿ ತನ್ನ ಕೆಲಸ ಪ್ರಾರಂಭಿಸಿತಂತೆ" ಅನ್ನುವ ಕಥೆಯಲ್ಲಿ ಬರುವ ಆ ಬುಡ್ಡಿ ದೀಪದ ಮಾತಿನಂತೆ ಜಿ.ಎಸ್.ಎಸ್ ಅವರು ತಮ್ಮ ಸಾಹಿತ್ಯದಲ್ಲಿ ಮತ್ತು ಕಾರ್ಯದಲ್ಲಿ ಈ ಸಮಾಜಕ್ಕೆ ತಮ್ಮ ಶಕ್ತಿ ಮೀರಿ ಬೆಳಕು ನೀಡಲು ಪ್ರಯತ್ನಿಸಿದರು. ಹಾಗಾಗಿ ಅವರ ಕಾವ್ಯದಲ್ಲಿ ಹಣತೆ, ದೀಪ, ಜ್ಯೋತಿ ಅನ್ನುವ ಪ್ರತಿಮೆಗಳು ಮತ್ತೆ ಮತ್ತೆ ಕಾಣಿಸಿಕೊಂಡವು ಎಂದು ವಿವರಿಸಿದರು.
ಜಿ.ಎಸ್.ಎಸ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಮೌಢ್ಯವನ್ನು ತೊಲಗಿಸಿ, ವೈಚಾರಿಕತೆಯನ್ನು ಕಟ್ಟುವುದು ಹೇಗೆ? ಇಡೀ ವಿದ್ಯಾರ್ಥಿ ಸಮೂಹವನ್ನು ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿ ಚಿಂತಿಸುವಂತೆ ರೂಪಿಸುವುದು ಹೇಗೆ? ಅದಕ್ಕೆ ಏನೇನು ಕಾರ್ಯಕ್ರಮ ಮಾಡಬೇಕು ಅಂತ ಡಾ. ಹೆಚ್. ನರಸಿಂಹಯ್ಯನವರ ಜೊತೆ ಸಮಾಲೋಚಿಸಿ ಕಾರ್ಯಕ್ರಮಗಳನ್ನು ರೂಪಿಸಿದ್ದರಿಂದ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಒಂದು ಆರೋಗ್ಯ ಪೂರ್ಣ ವಾತಾವರಣ ಸೃಷ್ಟಿಯಾಯಿತು. ಆ ವಾತಾವರಣದಲ್ಲಿ ಬೆಳೆದ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆ ವೈಚಾರಿಕ, ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಅದನ್ನು ಇಡೀ ನಾಡಿನಾದ್ಯಂತ ವಿಸ್ತರಿಸತೊಡಗಿದರು ಎಂದರು.
ರಾಷ್ಟ್ರಕವಿ ಕುವೆಂಪು ಅವರ ಪರಮ ಶಿಷ್ಯರಾಗಿದ್ದ ಡಾ. ಜಿ.ಎಸ್.ಎಸ್ ಅವರು ಕುವೆಂಪು ಅವರ ಆಶಯಗಳ ಮುಂದುವರಿದ ಭಾಗ ಅನ್ನುವುದು ನಿರ್ವಿವಾದ. ಈ ಕಾರಣಗಳಿಗಾಗಿಯೇ ಕುವೆಂಪು ಅವರ ನಂತರ "ರಾಷ್ಟ್ರ ಕವಿ" ಅನ್ನುವ ಬಿರುದಿಗೆ ಪಾತ್ರರಾದವರು ಡಾ. ಜಿ.ಎಸ್ ಶಿವರುದ್ರಪ್ಪ ಅವರಿಗೆ ನೂರು ವರ್ಷಗಳು ತುಂಬಿದ ಶತಮಾನೋತ್ಸವದ ಈ ಸಂದರ್ಭದಲ್ಲಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರ ಆಶಯದ ನಾಡನ್ನು ನಾವೆಲ್ಲ ಕಟ್ಟಬೇಕಾಗಿದೆ ಎಂದು ಪ್ರೊ. ಮೊರಬದ ಮಲ್ಲಿಕಾರ್ಜುನ ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಥಿಯೋಡರ್ ಲೂಥರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿಗಳಾದ ಕೆ. ವೆಂಕಟರಾಜು ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಪ್ರಕಾಶರಾಜ್ ಮೇಹು ಅವರು ಚಕೋರ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಖ್ಯಾತ ಗಾಯಕರಾದ ಸಿ.ಎಂ. ನರಸಿಂಹಮೂರ್ತಿ, ಪೆÇ್ರ. ಎ.ಎಂ ಶಿವಸ್ವಾಮಿ ಮತ್ತು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಸಿಂಧು ಅವರು ಜಿ.ಎಸ್.ಎಸ್ ಅವರ ಹಲವಾರು ಭಾವಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಸಂಗೀತದ ಸ್ಪರ್ಶ ನೀಡಿದರು.
Like this:
Like Loading...
Related