ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ತಪ್ಪದೇ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಎಂದು ನಗರಸಭೆ ಪೌರಾಯುಕ್ತ ರಾಮದಾಸ್ ಅವರು ಸಾರ್ವಜನಿಕರಿಗೆ ತಿಳಿಸಿದರು.

ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮತದಾನ ಜಾಗೃತಿ, ಅರಿವು ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ರಾಮದಾಸ್ ಮಾತನಾಡಿ,
ಕರ್ನಾಟಕ ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 26ಕ್ಕೆ ಮೊದಲ ಹಂತ, ಮೇ 7ಕ್ಕೆ 2ನೇ ಹಂತದ ಮತದಾನ ನಡೆಯಲಿದ್ದು, ಪ್ರತಿಯೊಬ್ಬರೂ ಕೂಡಾ ತಮ್ಮ ಮತದಾನ ಹಕ್ಕನ್ನು ಚಲಾಯಿಸಬೇಕು ಎಂದು ಅರಿವು ಮೂಡಿಸಿದರು.
ಚುನಾವಣಾ ಪರ್ವ ದೇಶದ ಗರ್ವ ಎಂಬ ಘೋಷವಾಕ್ಯದ ಮೂಲಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮತದಾನದ ಹಬ್ಬ ಇದೇ ತಿಂಗಳು 26ರಂದು ನಡೆಯಲಿದೆ. ಎಲ್ಲರೂ ಕೂಡಾ ತಪ್ಪದೇ ತಮ್ಮ ಬೂತ್‍ಗಳಲ್ಲಿ ಮತವನ್ನು ಚಲಾಯಿಸುವ ಮೂಲಕ ತಮ್ಮ ಜನಪ್ರತಿನಿಧಿಗಳನ್ನು ತಾವೇ ಆಯ್ಕೆಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಯೋಜನಾಧಿಕಾರಿ ವೆಂಕಟನಾಯಕ್ ಮಾತನಾಡಿ, ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಕೂಡಾ ಮತದಾನ ನೀಡುವ ಸಮಾನ ಹಕ್ಕನ್ನು ಕೊಟ್ಟಿದೆ. ಸಾಕಷ್ಟು ಮಂದಿ ಚುನಾವಣೆ ಸಂದರ್ಭದಲ್ಲಿ ಮತದಾನದ ದಿನದಂದು ತಮ್ಮ ಹಕ್ಕನ್ನು ಚಲಾಯಿಸದೆ, ಮನೆಯಲ್ಲೆ ಉಳಿದುಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ ಸಂವಿಧಾನದ ಮೂಲಕ ನೀಡಿರುವ ಮತದಾನದ ಹಕ್ಕನ್ನು ಯಾರೂ ಕೂಡಾ ಕಳೆದುಕೊಳ್ಳಬಾರದು. ಎಲ್ಲರೂ ಕೂಡಾ ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಯಾಣಿಕರಾದ ಜಗದಾಂಬ ಹಾಗೂ ಮೊದಲ ಬಾರಿಗೆ ಚುನಾವಣೆ ಹಕ್ಕನ್ನು ಚಲಾಯಿಸಲಿರುವ ವಿದ್ಯಾರ್ಥಿ ಲಕ್ಷ್ಮೀ ಹಾಗೂ ಅವರು ಮತದಾನದ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ಕೃಷ್ಣಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ರಾಮಚಂದ್ರು, ಪರಿಸರ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಗಿರಿಜಮ್ಮ, ನಗರಸಭಾ ಸಿಬ್ಬಂದಿಗಳಾದ ಜ್ಯೋತಿ, ರೂಪಾ, ನವೀನ್, ಸುರೇಶ್, ಶ್ರೀನಿವಾಸ್, ಸುಗುಣ, ನಿವೇದಿತಾ ಸೇರಿದಂತೆ ಸಾರ್ವಜನಿಕರು, ಪ್ರಯಾಣಿಕರು ಇದ್ದರು.