ಚಾಮರಾಜನಗರ: ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಸಿದ್ದಗಂಗಾ ಕ್ಯಾಂಟೀನ್‍ನಲ್ಲಿ ಶ್ರೀ ಶಿವಕುಮಾರಸ್ವಾಮಿಗಳ ಭಕ್ತ ವೃಂದದಿಂದ ಶ್ರೀ ಶಿವಕುಮಾರಸ್ವಾಮಿಗಳ 117ನೇ ಜಯಂತೋತ್ಸವ ಪ್ರಯುಕ್ತ ಅನ್ನಸಂತರ್ಪಣೆ ನೇರವೇರಿಸಲಾಯಿತು.
ನಗರದ ಸಿದ್ದಗಂಗಾ ಕ್ಯಾಂಟೀನ್ ಮುಂಭಾಗ ಶ್ರೀಗಳ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಲಾಯಿತು. ಭಕ್ತವೃಂದವರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಜೊತೆಗೆ ಅವರ ಹೆಸರಿನಲ್ಲಿ ದಾಸೋಹ ಮಾಡಲಾಯಿತು. ಬೆಳಗ್ಗೆಯಿಂದ ಸಾರ್ವಜನಿಕರಿಗೆ ಉಪ್ಪಿಟ್ಟು, ಕೇಸರಿ ಬಾತ್, ರೈಸ್‍ಬಾತ್, ಮೊಸರು ಬಜ್ಜಿಯನ್ನು ಭಕ್ತ ವೃಂದವರು ವಿತರಣೆ ಮಾಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಮನೋಜ್ ಪಟೇಲ್ ಮಾತನಾಡಿ, ಸಿದ್ದಗಂಗಾ ಶ್ರೀಗಳ ಹೆಸರಿನಲ್ಲಿ ಆರಂಭಿಸುವ ಎಲ್ಲ ಉದ್ಯಮಗಳು ಬಹಳ ಯಶಸ್ಸು ಕಂಡಿದೆ. ನಡೆದಾಡುವ ದೇವರು ಎಂದೇ ಖ್ಯಾತಿಯಾಗಿದ್ದ ಶ್ರೀಗಳು ಅನ್ನ ದಾಸೋಹ, ಜ್ಞಾನ ದಾಸೋಹದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಜೀವನಕ್ಕೆ ದಾರಿ ದೀಪವಾಗಿದ್ದಾರೆ. ಅವರ ಕೈಗೊಂಡ ನಿಸ್ವಾರ್ಥ ಸೇವೆ ಶ್ರೀಮಠದಲ್ಲಿ ಇಂದಿಗೂ ನಡೆದುಕೊಂಡು ಬರುತ್ತಿದೆ.
ಸಿದ್ದಗಂಗಾ ಶ್ರೀಗಳ ಪ್ರೇರಣಾ ಶಕ್ತಿಯೇ ಎಲ್ಲರಿಗೂ ಸ್ಪೂರ್ತಿಯಾಗಿದೆ. ಅವರ ಹಾದಿಯಲ್ಲಿ ನಾವೆಲ್ಲರು ನಡೆಯುವ ಮೂಲಕ ವಿಶ್ವ ಮಟ್ಟದಲ್ಲಿ ಶ್ರೀಗಳ ಹೆಸರು ಅಜರಾಮರವಾಗುವಂತೆ ಎಲ್ಲರು ಮಾಡೋಣ. ಅವರ ಶಕ್ತಿ ಮತ್ತು ಪ್ರೇರಣೆ ನಮ್ಮೆಲ್ಲರ ಜೀವನಕ್ಕೆ ಸ್ಪೂರ್ತಿಯಾಗಲಿ ಎಂದು ಪ್ರಾರ್ಥಿಸಿಕೊಂಡರು.
ಭಕ್ತವೃಂದದ ನಗರಸಭಾ ಸದಸ್ಯ ಸಿ.ಎಂ. ಮಂಜುನಾಥ್, ನಾಗೇಂದ್ರ, ಕ್ಯಾಂಟೀನ್ ಶಿವು, ಶೈಲೇಶ್, ಅರುಣಾ, ಮಹೇಶ್, ಚಂದನ್, ಹರೀಶ್, ಮಂಜುನಾಥ್, ಮಧು, ನಂದನ್, ಗೋಪಾಲಸ್ವಾಮಿ ಮೊದಲಾದವರು ಇದ್ದರು.