ಶೆಟ್ಟಳ್ಳಿ, ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿಗಳಿಗೆ ಜಿ.ಪಂ. ಸಿಇಒ ಮೋನಾ ರೋತ್ ದಿಢೀರ್ ಭೇಟಿ : ಕಾಮಗಾರಿಗಳ ಪರಿಶೀಲನೆ

ಚಾಮರಾಜನಗರ, ಫೆಬ್ರವರಿ 23 (ಕರ್ನಾಟಕ ವಾರ್ತೆ):- ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಇಂದು ಹನೂರು ತಾಲೂಕಿನ ಶೆಟ್ಟಳ್ಳಿ ಹಾಗೂ ಕುರಹಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರು ಯೋಜನೆ, ಉದ್ಯೋಗ ಖಾತರಿ ಯೋಜನೆ ಹಾಗೂ ಇನ್ನಿತರ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. 

   ಗ್ರಾಮ ಪಂಚಾಯಿತಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಕುಡಿಯುವ ನೀರು, ತೆರಿಗೆ ವಸೂಲಾತಿ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಎನ್.ಆರ್.ಎಲ್.ಎಂ, ಸ್ವಚ್ಛ ಭಾರತ್ ಮಿಷನ್, ಜಲಜೀವನ್ ಮಿಷನ್, ವಿವಿಧ ವಸತಿ ಯೋಜನೆ ಪ್ರಗತಿ ಪರಾಮರ್ಶಿಸಿದರು. 

   14 ಮತ್ತು 15ನೇ ಹಣಕಾಸು ಯೋಜನೆ ಹಾಗೂ ಇತರೆ ಗ್ರಾಮೀಣಾಭಿವೃದ್ದಿ ಯೋಜನೆಗಳಡಿ ಅನುಷ್ಟಾನಗೊಳಿಸಲಾಗಿರುವ ಕಾಮಗಾರಿ ವೀಕ್ಷಿಸಿದರು. ಗ್ರಂಥಾಲಯ, ಘನ ಮತ್ತು ದ್ರವತ್ಯಾಜ್ಯ ವಿಲೇವಾರಿ ಘಟಕಗಳ ಅನುಷ್ಟಾನ, ತೆರಿಗೆ ವಸೂಲಾತಿ ಕುರಿತ ಕಡತಗಳು ಮತ್ತು ದಾಖಲಾತಿಗಳ ನಿರ್ವಹಣೆ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಾತಿಯನ್ನು ಪರಿಶೀಲಿಸಿದರು. 

   ಬೇಸಿಗೆ ಕಾಲ ಪ್ರಾಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಂಟಳ್ಳಿ ಗ್ರಾಮದಲ್ಲಿ ಸ್ಥಗಿತಗೊಂಡಿರುವ ಹ್ಯಾಂಡ್ ಪಂಪ್‍ಗಳು, ತೆರೆದ ಬಾವಿಗಳು ಹಾಗೂ ಬೋರ್‍ವೆಲ್‍ಗಳನ್ನು ಪರಿಶೀಲಿಸಿ, ಸ್ಥಗಿತಗೊಂಡಿರುವ ನೀರಿನ ಮೂಲಗಳನ್ನು ತುರ್ತಾಗಿ ಸರಿಪಡಿಸುವಂತೆ ಸಂಬಂಧಪಟ್ಟ ಸಹಾಯಕ ಇಂಜಿನಿಯರ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ಸೂಚನೆ ನೀಡಿದರು. 

   ಗ್ರಾಮದ ವಿವಿಧ ಬೀದಿ, ಬಡಾವಣೆಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ವತಿಯಿಂದ ಜಲಜೀವನ್ ಮಿಷನ್ ಯೋಜನೆಯಡಿ ಅನುಷ್ಟಾನಗೊಳಿಸಲಾಗಿರುವ ನಳ ಸಂಪರ್ಕ ಕಾಮಗಾರಿ, ಕಿರು ನೀರು ಸರಬರಾಜು ಪೂರೈಕೆ ಕೇಂದ್ರಗಳನ್ನು ಪರಿಶೀಲಿಸಿದರು. ಗ್ರಾಮದ ಎಲ್ಲಾ ಬೀದಿಗಳಿಗೂ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಬೇಕು. ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಾಸವಾದಲ್ಲಿ ತುರ್ತಾಗಿ ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಬೇಕು. ಪರ್ಯಾಯ ವ್ಯವಸ್ಥೆಗಳನ್ನು ಕೈಗೊಂಡು ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಕ್ರಮ ವಹಿಸಬೇಕು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ನಿರ್ದೇಶನ ನೀಡಿದರು. 

 ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಇನ್ನಿತರ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *