ಚಾಮರಾಜನಗರ: ಸಂವಿಧಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸ್ತಬ್ದ ಚಿತ್ರದ ಮೆರವಣಿಗೆ ಇಂದು ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ, ಸಿಂಗಾನಲ್ಲೂರಿನಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ದೊಡ್ಡಿಂದುವಾಡಿ ಗ್ರಾಮಪಂಚಾಯಿತಿ ಕೇಂದ್ರದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶಿವರುದ್ರಸ್ವಾಮಿ, ಇತರೆ ಸದಸ್ಯರು, ಸಮುದಾಯದ ಮುಖಂಡರು, ಗ್ರಾಮದ ಯಜಮಾನರು ಜಾಗೃತಿ ಜಾಥಾವನ್ನು ಬರ ಮಾಡಿಕೊಂಡರು. ಡೊಳ್ಳು ಕುಣಿತ, ನಾದಸ್ವರ ಇತರೆ ಸಾಂಪ್ರದಾಯಿಕ ಕಲಾ ತಂಡಗಳು ಅದ್ದೂರಿಯಾಗಿ ಸ್ವಾಗತಿಸಿ ಮೆರಗು ತಂದವು. ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಸಹ ಸ್ತಬ್ದ ಚಿತ್ರದ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮಧ್ಯಾಹ್ನದ ವೇಳೆಗೆ ಸಿಂಗಾನಲ್ಲೂರು ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ಸ್ತಬ್ದ ಚಿತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗಮ್ಮ, ಉಪಾಧ್ಯಕ್ಷರಾದ ಸರೋಜಮ್ಮ, ಊರಿನ ಯುವಕರು, ಯಜಮಾನರು, ಮಹಿಳಾ ಸಂಘಗಳ ಸದಸ್ಯರು ಬರಮಾಡಿಕೊಂಡರು. ಮಹಿಳೆಯರು ಪೂರ್ಣಕುಂಭ ಹಿಡಿದು ಮೆರವಣಿಗೆಗೆ ಮೆರಗು ನೀಡಿದರು.
ಅಲಂಕೃತ ಎತ್ತಿನಗಾಡಿ ಮೆರವಣಿಗೆ ಆಕರ್ಷಣೀಯವಾಗಿದ್ದವು. ತಮಟೆ, ಡೊಳ್ಳುವಾದನ ಬೊಂಬೆ ಕುಣಿತ, ಇನ್ನಿತರ ಜಾನಪದ ಕಲಾ ತಂಡಗಳು ಪಾಲ್ಗೊಂಡವು. ಬೈಕ್ ರ್ಯಾಲಿ ಸಹ ನಡೆಸಲಾಯಿತು. ಸಂವಿಧಾನ ಕುರಿತು ಪ್ರಬಂಧ ಸ್ಪರ್ಧಾ, ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪುಸ್ತಕ ಜೋಳಿಗೆಗೆ ಗ್ರಾಮಸ್ಥರು ತಮ್ಮಲ್ಲಿರುವ ಉತ್ತಮ ಪುಸ್ತಕಗಳನ್ನು ನೀಡಿದರು.