- ಪತ್ರಕರ್ತರ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಚಾಮರಾಜನಗರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಆಶ್ರಯದಲ್ಲಿ ಸಂಘದ ಸದಸ್ಯರಿಗಾಗಿ ಆಯೋಜಿಸಲಾದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಗೆ ಎಂಎಸ್ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.
ನಗರದ ಹಸಿರುಮನೆ ಸಮೀಪದ ಮೈದಾನದಲ್ಲಿ ಭಾನುವಾರ ಬ್ಯಾಟ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪತ್ರಕರ್ತರಿಗೆ ಕ್ರೀಡೆ ಅತ್ಯಂತ ಸಹಕಾರಿಯಾಗಿದ್ದು, ಸದಾ ಸುದ್ದಿ ಒತ್ತಡದ ಕೆಲಸದ ನಡುವೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ನೆರವಾಗುತ್ತದೆ ಎಂದರು.
ಜೀವನದಲ್ಲಿ ಒಂದಲ್ಲ ಒಂದು ಕ್ರೀಡೆಯನ್ನು ರೂಢಿಸಿಕೊಳ್ಳವುದು ಅವಶ್ಯಕ. ಆರೋಗ್ಯದ ಹಿತದೃಷ್ಠಿಯಿಂದ ಇರಬಹುದು. ಇರುವಷ್ಟು ಕಾಲ ನೆಮ್ಮದಿಯಾಗಿರಬಹುದು.
ಮುಖ್ಯವಾಗಿ ಕ್ರೀಡೆಯಲ್ಲಿ ನಾವೆಲ್ಲರೂ ಒಂದು ಅನ್ನುವ ಭಾವನೆ ಬರುತ್ತದೆ. ಇಲ್ಲಿ ಯಾವುದೇ ಜಾತಿ, ಮತ, ಭೇದಭಾವ ಇಲ್ಲದ ರಂಗ ಕ್ರೀಡೆಯಾಗಿದೆ. ಇದು ಎಲ್ಲರಿಗೂ ನಾಂದಿಯಾಗಲಿ. ಸೋಲು-ಗೆಲುವು ಸಹಜ ಯಾರೇ ಗೆಲ್ಲಲಿ ನಮ್ಮವರು ಎಂದು ಭಾವಿಸಬೇಕು. ಎಲ್ಲರೂ ಚೆನ್ನಾಗಿ ಆಡಿ ಎಲ್ಲರಿಗೂ ಶುಭವಾಗಲಿ ಎಂದು ಆಶಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಮಾತನಾಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸದಸ್ಯರಿಗೆ ಸೌಹರ್ದ ಕ್ರಿಕೆಟ್ ಪಂದ್ಯಾವಳಿ ಅಯೋಜಿಸಿರುವುದು ಒಂದು ಒಳ್ಳೆಯ ಬೆಳವಣಿಗೆಯಾಗಿದ್ದು, ತುಂಬಾ ಸಂತಹವಾಗಿದೆ. ಕ್ರೀಡೆಯಲ್ಲಿ ಸೌಹಾರ್ದತೆ ಇರುತ್ತದೆ. ಇದರಿಂದ ಮಾನಸಿಕ, ದೈಹಿಕ ಬೆಳವಣಿಗೆಗೆ. ಪೂರಕವಲ್ಲದೆ ಮನಸ್ಸಿಗೆ ಸಂತಸ ಕೊಡುತ್ತದೆ. ಇಂತಹ ಕ್ರೀಡೆಗಳನ್ನು ಹೆಚ್ಚು ಹೆಚ್ಚು ಏರ್ಪಡಿಸಿ ನಾವೂ ಕೂಡ ಸೌಹಾರ್ದ ಕ್ರಿಕೆಟ್ ಅಯೋಜಿಸಲಾಗುವುದು. ಸೋಲು-ಗೆಲುವವನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಬೇಕು. ಎಲ್ಲ ಕ್ರಿಕೆಟ್ ತಂಡಗಳಿಗೆ ಶುಭ ಕೋರಿದರು.
ಅಧ್ಯಕ್ಷ ತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ ಮಾತನಾಡಿ, ಕಳೆದ 2 ತಿಂಗಳ ಹಿಂದೆ ನಮ್ಮ ಸಂಘಕ್ಕೆ ಚುನಾವಣೆ ನಡೆಯಿತು. ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಪ್ರಥಮ ಬಾರಿಗೆ ಚುನಾವಣೆ ನಡೆಯಿತು. ಇದುವರೆಗೂ ಸಹ ಅವಿರೋಧವಾಗಿ ನಡೆಯುತ್ತಿತ್ತು. ಪ್ರಥಮ ಬಾರಿಗೆ ಚುನಾವಣೆ ನಡೆಯಿತು. ಇದರಿಂದ ಉಂಟಾಗಿರುವ ಸಣ್ಣ ಪುಟ್ಟ ವೈಮನಸ್ಸು ತೊಡೆದು ಹಾಕಿ ಎಲ್ಲ ಪತ್ರಕರ್ತರನ್ನು ಒಗ್ಗೂಡಿಸುವ ಸಲುವಾಗಿ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಹೊರತು ಬೇರೆ ಯಾವುದೇ ಉದ್ದೇಶ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ಖಜಾಂಚಿ ಪುಟ್ಟರಾಜು, ತೀರ್ಪುಗಾರ ವಿ.ಶ್ರೀನಿವಾಸಪ್ರಸಾದ್ ಹಾಜರಿದ್ದರು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಲ್.ಲಕ್ಕೂರ್ ಸ್ವಾಗತಿಸಿದರು. ಹಿರಿಯ ಪತ್ರಕರ್ತರಾದ ಕೆ.ಎಸ್.ಬನಶಂಕರ್ ಆರಾಧ್ಯ ನಿರೂಪಿಸಿದರು. ಶ್ರೇಯಸಿ ನಂಜುಂಡನಾಯಕ ಪ್ರಾರ್ಥಿಸಿದರು. ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಮಹೇಂದ್ರ ವಂದಿಸಿದರು. ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.