141ನೇ ದಿನವೂ ಮುಂದುವರೆದ ಕಾವೇರಿ ಹೋರಾಟ

ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದಲ್ಲಿ ಕಳೆದ 141ನೇ ದಿನವೂ ಕೂಡಾ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.

ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಸತತವಾಗಿ 141ನೇ ದಿನವೂ ಕೂಡಾ ಹೋರಾಟವನ್ನು ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟಿಸುತ್ತಿದ್ದೇವೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಕ್ಕೆ ನೈತಿಕತೆ ಇದ್ದರೆ ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕುಡಿಯಲು ಒಂದು ತೊಟ್ಟು ನೀರು ಕೂಡಾ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತಕ್ಷಣ ನೀರು ನಿಲ್ಲಿಸದಿದ್ದರೇ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ರಾಜ್ಯಕ್ಕೆ ನ್ಯಾಯ ದೊರಕಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಚಾ.ವೆಂ.ರಾಜ್ ಗೋಪಾಲ್, ಗು.ಪುರುಷೋತ್ತಮ್, ವೀರಭದ್ರ, ನಿಜಧ್ವನಿ ಗೋವಿಂದರಾಜು, ತಾಂಡವಮೂರ್ತಿ ಇನ್ನಿತರರಿದ್ದರು.

Leave a Reply

Your email address will not be published. Required fields are marked *