ಚಾಮರಾಜನಗರ: ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಿಸುವ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು ಅವರು ವಿಶೇಷಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ (ಮುನ್ನ) ಅವರು ಇದ್ದರು.
ಸಿಎಸ್‍ಆರ್ ನೆರವಿನಡಿ ವಿಶೇಷಚೇತನರಿಗೆ ತ್ರಿಚಕ್ರ ವಾಹನ ನೀಡುವಂತೆ ಕಾರ್ಮಿಕ ಇಲಾಖೆ ವತಿಯಿಂದ ಉದ್ಯಮಗಳಿಗೆ ಪತ್ರ ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕೇನ್ಸ್ ಎಲೆಕ್ಟ್ರಾನಿಕ್ ಮಾನ್ಯುಫ್ಯಾಕ್ಚರಿಂಗ್ ಹಾಗೂ ಕಲರ್ ಟೋನ್ ಟೆಕ್ಸ್ಟೈಲ್ ಪ್ರೈಲಿಮಿಟೆಡ್ ವಿಶೇಷಚೇತನರಿಗೆ ಎರಡು ತ್ರಿಚಕ್ರ ವಾಹನಗಳನ್ನು ನೀಡಿವೆ.
ಈ ವಾಹನಗಳನ್ನು ಇಂದು ಇಬ್ಬರು ವಿಶೇಷಚೇತನ ಫಲಾನುಭವಿಗಳಿಗೆ ಗಣ್ಯರು ವಿತರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಚಂದ್ರಯ್ಯ, ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕರು, ಕಾರ್ಖಾನೆಯ ಹೆಚ್.ಆರ್ ಮತ್ತು ಜನರಲ್ ಮ್ಯಾನೇಜರ್ ಹಾಗೂ ಜಯೇಂದ್ರ, ರಂಗನಾಥ್ ಹೇಮಂತ್ ಈ ಸಂದರ್ಭದಲ್ಲಿ ಇದ್ದರು.
Like this:
Like Loading...
Related