
ಚಾಮರಾಜನಗರ ಜಿಲ್ಲೆಯ ಶ್ರೀ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಮೂಲಭೂತ ಸೌಕರ್ಯವನ್ನು ದೇವಾಲಯಕ್ಕೆ ಬರುವ ಆದಾಯದಲ್ಲಿ ಅಭಿವೃದ್ಧಿಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರದ ಡಾ.ಕೆ. ಶಿವಕುಮಾರ್ ಒತ್ತಾಯಿಸಿದೆ.
ಬೆಳಗಾವಿಯ ಸುವರ್ಣ ವಿಧಾನಸೌಲ್ಲಿ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿ, ದೇವಾಲಯಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಬರುತ್ತದೆ. ಅದರಲ್ಲಿ ಸ್ಥಳೀಯ ಗ್ರಾಮಗಳನ್ನು ಅಭಿವೃದ್ಧಿ ಕಲ್ಪಿಸುವ ಬಗ್ಗೆ ತಿದ್ದುಪಡಿ ಮಾಡಬೇಕು.
ದಶಕಗಳಿಂದಲೂ ಈ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಸಮರ್ಪಕವಾದ ರಸ್ತೆಗಳಿಲ್ಲದೆ ಸಂಚಾರಕ್ಕೆ ಬಹಳ ತೊಂದರೆ ಉಂಟಾಗುತ್ತಿದೆ. ಅಲ್ಲಿನ ಮಹಿಳೆಯರು ನೀರು ತರಲು ಪ್ರತಿನಿತ್ಯವೂ ಕಾಡಿನ ದುರ್ಗಮ ಹಾದಿಯಲ್ಲಿ ತೆರಳುವುದು ಶೋಚನೀಯ.
ರಸ್ತೆ ಸಂಪರ್ಕವಿಲ್ಲದ ಕಾರಣ ಗರ್ಭಿಣಿಯರ ಪ್ರಸವ ಸಂದರ್ಭದಲ್ಲಿ ಬಟ್ಟೆ ಜೋಲಿಯಲ್ಲಿ ಹೊತ್ತುಕೊಂಡು ಆಸ್ಪತ್ರೆ ದಾಖಲಿಸುವ ದಯನೀಯ ಸ್ಥಿತಿ ಎದುರಾಗಿದೆ. ತೀವ್ರ ಅಸ್ವಸ್ಥರಾದ ಹಿರಿಯ ರೋಗಿಗಳೂ ಕೂಡ ಮೈಲುಗಟ್ಟಲೆ ನಡೆದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.
ಬೆಟ್ಟದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರುವ ಜನರೇ ಮಹದೇಶ್ವರ ಸ್ವಾಮಿಯ ನಿಜವಾದ ಭಕ್ತರು. ಅವರು ಕಾಡಿನ ಸಂರಕ್ಷಕರೂ ಅಗಿದ್ದಾರೆ. ದೇವಾಲಯದ ಅಭಿವೃದ್ಧಿಗೆ ಅಡ್ಡಿಯಿಲ್ಲ. ಜೊತೆಗೆ ಅಲ್ಲಿನ ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೇವಸ್ಥಾನದ ಸಂಪನ್ಮೂಲವನ್ನು ವಿನಿಯೋಗಿಸಬೇಕು.
ಇತ್ತೀಚಿಗೆ ಸರ್ಕಾರವು ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಹಲವಾರು ಅಭಿವೃದ್ಧಿ ಯೋಜನೆ ಘೋಷಣೆ ಮಾಡಿ ಒಳ್ಳೆಯ ಕೆಲಸ ಮಾಡಿದೆ. ದೇವಾಲಯಕ್ಕೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಶಕ್ತಿ ಯೋಜನೆಯಿಂದ ಮಹಿಳೆಯರ ಭೇಟಿ ಹೆಚ್ಚಾಗಿದೆ. ಹೀಗಾಗಿ ಎರಡನೇ ಹಂತದಲ್ಲಿ ಕಾವೇರಿ ನೀರು ತರುವ ಯೋಜನೆಯಿಂದ ಕುಡಿಯುವ ನೀರು ಪೂರೈಸಬೇಕು.
ಚುನಾವಣೆ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ಮೂಲಭೂತ ಸೌಕರ್ಯ ಒತ್ತಾಯಿಸಿ ಮತದಾನ ಬಹಿಸ್ಕರಿದ್ದರು. ಮತಗಟ್ಟೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಅವರೆಲ್ಲರ ಮೇಲೆ ಪ್ರಕರಣ ದಾಖಲಿಸಲಾಗಿದೆ. ನೀರು, ವಿದ್ಯುತ್, ಆಶ್ರಯದಿಂದ ವಂಚಿತರಾಗಿರುವ ಜನರ ಸಾಕ್ಷರತೆ ಪ್ರಮಾಣ ಹಾಗೂ ಜನರ ಆರೋಗ್ಯಮಟ್ಟ ಎಷ್ಟಿದೆ ಎಂಬುದನ್ನು ಗಮನಿಸಬೇಕಿದೆ ಎಂದು ಸದನದ ಗಮನಕ್ಕೆ ತರಲಾಯಿತು.
ಇದರ ಜೊತೆಗೆ ಮಲೆಮಹದೇಶ್ವರ ದೇವಾಲಯದಲ್ಲಿ ಹೊರಗುತ್ತಿದೆ ಹಾಗೂ ತಾತ್ಕಾಲಿಕವಾಗಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ಉದ್ಯೋಗಿಗಳನ್ನು ಖಾಯಂಗೊಳಿಸಬೇಕು. ಆ ಮೂಲಕ ಅವರ ಭವಿಷ್ಯ ರೂಪಿಸಬೇಕಿದೆ ಎಂದೂ ಕೂಡ ಒತ್ತಾಯಿಸಿದ್ದಾರೆ.