ವಿದ್ಯಾರ್ಥಿಗಳ ವೃತ್ತಿ ಜೀವನ ಭವಿಷ್ಯ ಉಜ್ವಲವಾಗಿರಲಿ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು

ಚಾಮರಾಜನಗರ: ಬಿ.ಎಸ್.ಸಿ ನರ್ಸಿಂಗ್ ಪದವಿ ಪಡೆದಿರುವ ವಿದ್ಯಾರ್ಥಿಗಳ ಮುಂದಿನ ವೃತ್ತಿ ಜೀವನದ ಭವಿಷ್ಯ ಉಜ್ವಲವಾಗಿರಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅವರು ಹಾರೈಸಿದರು.

  ನಗರದ ಹೊರವಲಯದಲ್ಲಿರುವ ಸಿಮ್ಸ್ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ (ಮಾ.27) ದಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಿಮ್ಸ್ ಕಾಲೇಜ್ ಅಫ್ ನರ್ಸಿಂಗ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಎರಡನೇ ಬ್ಯಾಚ್‍ನ ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

  ದೇಶದ ಆರೋಗ್ಯ ಕ್ಷೇತ್ರ ಮುಂಚೂಣಿಯಲ್ಲಿರಲು ಶುಶ್ರೂಷಕರ (ನರ್ಸಿಂಗ್) ಪಾತ್ರ ಮಹತ್ವದ್ದಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸಂದರ್ಭಗಳಲ್ಲಿ ಎದುರಾಗುವ ಸವಾಲುಗಳಿಗೆ ಎದೆಗುಂದಬಾರದು. ಅಂತಹ ಶುಶ್ರೂಷಕ ವಿದ್ಯಾರ್ಥಿಗಳನ್ನು ತಯಾರು ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ನರ್ಸಿಂಗ್ ಪದವಿ ಪಡೆದು ಮುಂದಿನ ಹಂತಕ್ಕೆ ಸಾಗುತ್ತಿರುವ ನಿಮ್ಮ ಭವಿಷ್ಯ ಉಜ್ವಲವಾಗಲಿ. ತಮಗೆ ಐ.ಎ.ಎಸ್, ಐ.ಪಿ.ಎಸ್, ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗೇರುವ ಅವಕಾಶವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಅವರು ತಿಳಿಸಿದರು.

  ಬೆಂಗಳೂರಿನ ಸರ್ಕಾರಿ ಶುಶ್ರೂಷಕ ಶಾಲೆ ಮತ್ತು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಮಡಿವಾಳಪ್ಪ ನಾಗರಹಳ್ಳಿ ಅವರು ಮಾತನಾಡಿ ಬಿ.ಎಸ್.ಸಿ ಪದವಿ ಪಡೆದಿರುವ ವಿದ್ಯಾರ್ಥಿಗಳು ಮುಂದಿನ ಹಂತದಲ್ಲಿ ಯಾವ ತರಬೇತಿಗಳನ್ನು ಪಡೆಯಬಹುದು ಹಾಗೂ ಜೀವನದಲ್ಲಿ ಯಶಸ್ಸು ಗಳಿಸುವ ವಿಧಾನ ಮತ್ತು ಮುಂದಿನ ವೃತ್ತಿ ಬದುಕನ್ನು ಕಟ್ಟಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. 

  ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಎಚ್.ಜಿ. ಮಂಜುನಾಥ್ ಅವರು ಮಾತನಾಡಿ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ವೃತ್ತಿಜೀವನ ಆರಂಭಗೊಳ್ಳಲಿದೆ. ರೋಗಿಗಳಿಗೆ ಉತ್ತಮ ಸೇವೆ ನೀಡಿ ಹೆಸರು, ಕೀರ್ತಿ ಗಳಿಸಬೇಕು. ಉತ್ಸಾಹ, ಹುಮ್ಮಸ್ಸು ಹಾಗೂ ಲವಲವಿಕೆಯಿಂದ ಕಾರ್ಯನಿರ್ವಹಿಸಬೇಕು. ವೃತ್ತಿಜೀವನದಲ್ಲಿ ಗುರಿ ತಲುಪಲು ಯಾವುದೇ ಕ್ಲಿಷ್ಟಕರ ಸನ್ನಿವೇಶಗಳನ್ನು ಧೈರ್ಯವಾಗಿ ಎದುರಿಸುವುದನ್ನು ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

   ಸಿಮ್ಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಎನ್. ನಮ್ರತಾ, ಎಲ್ಲಾ ಬೋಧಕರು, ಭೋಧಕೇತರ ವರ್ಗದವರು, ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *