ಚಾಮರಾಜನಗರ: ಆಧುನಿಕ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಕಾರ್ಯಕ್ರಮವನ್ನು ಜೂನ್ 27ರಂದು ನಗರದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಾಡಪ್ರಭು ಕೆಂಪೇಗೌಡ ಅವರ ಜನ್ಮದಿನ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಆರಂಭದಲ್ಲಿ ಸಭೆಯಲ್ಲಿ ಹಾಜರಿದ್ದ ಸಮಾಜದ ಮುಖಂಡರು, ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರಿಂದ ಕೆಂಪೇಗೌಡ ಅವರ ಜಯಂತಿ ಕಾರ್ಯಕ್ರಮ ಆಚರಣೆಯ ಕುರಿತು ಸಲಹೆ, ಅಭಿಪ್ರಾಯ, ಅನಿಸಿಕೆಗಳನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಆಲಿಸಿದರು.
ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ನಾಡಪ್ರಭು ಕೆಂಪೇಗೌಡರು ವಿಜಯನಗರದ ಮಾದರಿಯಲ್ಲಿ ಬೆಂಗಳೂರು ಪಟ್ಟಣವನ್ನು ಕಟ್ಟಲು 487 ವರ್ಷಗಳ ಹಿಂದೆಯೇ ಅಡಿಗಲ್ಲು ಹಾಕಿದ್ದರು. ಕೆಂಪೇಗೌಡರ ಕನಸಿನ ನಗರವಾಗಿರುವ ಬೆಂಗಳೂರು ಇಂದು ಎಲ್ಲಾ ಸಮುದಾಯಗಳ ಶಾಂತಿಯ ತೋಟವಾಗಿದೆ. ಕೆಂಪೇಗೌಡರನ್ನು ಸ್ಮರಿಸುವ ನಿಟ್ಟಿನಲ್ಲಿ ಅವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ಬಾರಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೆಂಪೇಗೌಡ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿಯ ಜಯಂತಿಯನ್ನು ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗ, ಸಹಕಾರದೊಂದಿಗೆ ನಿಗದಿತ ಅನುದಾನದಲ್ಲಿ ಮೆರವಣಿಗೆ, ವೇದಿಕೆ ಕಾರ್ಯಕ್ರಮದೊಂದಿಗೆ ಅದ್ದೂರಿಯಾಗಿ, ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಅಚರಿಸಲಾಗುವುದು. ಜಯಂತಿ ಆಚರಣೆಗಾಗಿ ಸಕಲ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜೂನ್ 27ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಶ್ರೀ ಚಾಮರಾಜೇಶ್ವರ ದೇವಾಲಯದಿಂದ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಆರಂಭವಾಗಲಿದೆ. ಜಿಲ್ಲಾಡಳಿತ ಭವನದವರೆಗೆ ನಡೆಯುವ ಮೆರವಣಿಗೆಯಲ್ಲಿ ಬೆಳ್ಳಿರಥದಲ್ಲಿ ಅಲಂಕರಿಸಿದ ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರವನ್ನು ಇರಿಸಲಾಗುತ್ತದೆ. ಮೆರವಣಿಗೆಯಲ್ಲಿ ಎಲ್ಲಾ ಅಧಿಕಾರಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಬಳಿಕ ನಗರದ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಅಂದು ಪಟ್ಟಣದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಮೆರವಣಿಗೆ ಸಾಗುವ ಜೋಡಿರಸ್ತೆಯಲ್ಲಿನ ಅಂಗಡಿ ಮುಂಗಟ್ಟುಗಳು ರಂಗೋಲಿ, ತಳಿರು-ತೋರಣಗಳಿಂದ ಸಿಂಗಾರಗೊಳ್ಳಬೇಕು. ವೇದಿಕೆಯ ಬ್ಯಾಕ್ಡ್ರಾಪ್ ಆಕರ್ಷಣೀಯವಾಗಿರಬೇಕು. ಆಹ್ವಾನಪತ್ರಿಕೆಗಳನ್ನು ನಿಗದಿತ ಸಮಯಕ್ಕೆ ಗಣ್ಯರಿಗೆ ವಿತರಿಸುವ ಕೆಲಸ ವ್ಯವಸ್ಥಿತವಾಗಿ ಆಗಬೇಕು. ಸಮರ್ಪಕ ಧ್ವನಿವರ್ಧಕ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮಕ್ಕೆ ಉತ್ತಮ ಭಾಷಣಕಾರರನ್ನು ಕರೆಸಿ ಕೆಂಪೇಗೌಡ ಅವರ ಜೀವನ ಸಾಧನೆಗಳನ್ನು ಜನತೆಗೆ ಪರಿಚಯಿಸುವಂತಾಗಬೇಕು ಎಂದರು.
ಮೆರವಣಿಗೆಗೆ ಅಗತ್ಯ ಬಂದೋಬಸ್ತ್ ಅನ್ನು ಪೊಲೀಸ್ ಇಲಾಖೆಯಿಂದ ಕಲ್ಪಿಸಲಾಗುವುದು. ಕಾರ್ಯಕ್ರಮದಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಜಿಲ್ಲಾಮಟ್ಟದಲ್ಲಿ ಉತ್ತಮ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡುವಂತೆ ಜಿಲ್ಲೆಯ ಎಲ್ಲಾ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸಮುದಾಯದ ಮುಖಂಡರು, ನಾಗರಿಕರಲ್ಲಿ ಜಿಲ್ಲಾಧಿಕಾರಿಗಳಾದ ಶಿಲ್ಪಾ ನಾಗ್ ಅವರು ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಸುದರ್ಶನ್, ತಾಲೂಕು ಸಮಾಜದ ಅಧ್ಯಕ್ಷರಾದ ಪುಟ್ಟಸ್ವಾಮಿಗೌಡ, ಗೌರವಾಧ್ಯಕ್ಷರಾದ ಸುದರ್ಶನಗೌಡ, ಪ್ರಧಾನ ಕಾರ್ಯದರ್ಶಿ ನಾಗೇಂದ್ರೇಗೌಡ, ಮಹೇಶ್ಗೌಡ, ಚಾ.ರಂ. ಶ್ರೀನಿವಾಸಗೌಡ, ನಿಜದನಿ ಗೋವಿಂದರಾಜು, ಮಂಜುನಾಥಗೌಡ, ಚಿಕ್ಕರಂಗೇಗೌಡ, ರಾಘವೇಂದ್ರ, ಆಲೂರು ನಾಗೇಂದ್ರ, ಎಸ್. ಚಂದ್ರೇಗೌಡ, ಲೋಕೇಶ್, ಚಿನ್ನಸ್ವಾಮಿ, ಭೈರೇಗೌಡ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
Like this:
Like Loading...
Related