
ನನ್ನ ಬೆಳಗಿನ ದಿನಚರಿ ಪ್ರಾರಂಭವಾಗುವುದೇ ಮೈಸೂರು ಆಕಾಶವಾಣಿಯ ಸಿಗ್ನೇಚರ್ ಟ್ಯೂನ್ ಕೇಳುವುದರ ಮೂಲಕ. ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ನಿತ್ಯ ಕರ್ಮಗಳನ್ನ ಮುಗಿಸಿ, ಕುವೆಂಪುನಗರ ಕಾಂಪ್ಲೆಕ್ಸ್ ಗೆ ನಡೆದುಕೊಂಡೆ ಹೋಗುತ್ತೇನೆ.
ಅಲ್ಲಿ ಪತ್ರಿಕಾ ಅಂಗಡಿಯಲ್ಲಿ ಹಲವು ಗೆಳೆಯರು ಸಿಗುತ್ತಾರೆ. ಅವರೊಟ್ಟಿಗೆ ಆ ದಿನದ ಎಲ್ಲಾ ಪತ್ರಿಕೆಗಳನ್ನು ಕಣ್ಣಾಡಿಸಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಇವೆಲ್ಲವೂ ಸುಮಾರು ಅರ್ಧ ಗಂಟೆಯೊಳಗೆ ಮುಗಿಯುತ್ತದೆ. ಅರ್ಧಗಂಟೆಯಲ್ಲಿ ಹತ್ತಾರು ಸ್ನೇಹಿತರು ಬರುತ್ತಾರೆ. ಮತ್ತೆ ಉಭಯ ಕುಸುಲೋಪರಿ!. ನಂತರ ಎಲ್ಲರೂ ಒಟ್ಟಾಗಿ ಚಹಾ ಕುಡಿದು, ನಮ್ಮ ನಮ್ಮ ಮನೆಗೆ ತೆರಳುತ್ತೇವೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಾವು ಬೆಳಿಗ್ಗೆ ಬೇಗ ಎದ್ದು ಈ ರೀತಿ ನಮ್ಮ ದಿನಚರಿ ಪ್ರಾರಂಭಿಸಿದರೆ ಆ ದಿನ ಪೂರ್ತಿ ಖುಷಿಯಾಗಿರಬಹುದು. ನಮ್ಮಲ್ಲಿ ಲವಲವಿಕತನ ಕಾಣಿಸುತ್ತದೆ. ನಮ್ಮ ದೈನಂದಿನ ವೃತ್ತಿಯೂ ಕೂಡ ಒಂದು ರೀತಿಯಲ್ಲಿ ಮುದ ನೀಡುತ್ತದೆ. ಆದರೆ ಇಂದು ಬೆಳಿಗ್ಗೆ ಏಳುವುದೇ ಕಷ್ಟ. ರಾತ್ರಿ ಮಧ್ಯರಾತ್ರಿ ಕಳೆದರೂ ಕೂಡ ಮೊಬೈಲ್, ಇನ್ನಿತರ ಹಾಡು ಹರಟೆಯಲ್ಲಿ ಸುಮ್ಮನೆ ಕಾಲಹರಣ ಮಾಡುವ ನಮ್ಮ ಯುವಜನತೆ ಬೆಳಿಗ್ಗೆ ಬೇಗ ಎದ್ದು ಆ ದಿನದ ಒಂದು ಸೊಬಗಿನ ವಾತಾವರಣವನ್ನು ಸವಿಯಬೇಕು. ಮುಂಜಾನೆ ಸಮಯ ವರ್ಣಿಸಲಸದಳ ಅನುಭವವನ್ನು ನೀಡುತ್ತದೆ.
ನನಗೆ ಇನ್ನು ನೆನಪಿದೆ. ನಮ್ಮ ಬಾಲ್ಯದ ಸಮಯ ಈ ಕ್ಷಣದಲ್ಲಿ ತಟ್ಟನೆ ನೆನಪಾಗುತ್ತದೆ!!. ಏಕೆಂದರೆ ನಾವು ಬೆಳಿಗ್ಗೆ ಬೇಗನೆ ಏಳಬೇಕಾಗಿತ್ತು. ಸುಮಾರು ಐದು ಮೂವತ್ತರ ನಂತರ ನಾವು ನಮ್ಮ ನಮ್ಮ ದಿನಚರಿಯನ್ನ ಪ್ರಾರಂಭಿಸಲೇ ಬೇಕಾಗಿತ್ತು. ಒಂದು ರೀತಿಯಲ್ಲಿ ಕಟ್ಟುನಿಟ್ಟಿನ ಶಿಸ್ತು ಬದ್ಧ ಜೀವನ ನಮ್ಮದಾಗಿತ್ತು. ನಮ್ಮ ತಂದೆ ದಿವಂಗತ ಕೆ ಎಂ ವೀರಭದ್ರಯ್ಯ ರವರು ಶಿಕ್ಷಕರಾಗಿದ್ದರು. ಜೊತೆಗೆ ನಮ್ಮ ದೊಡ್ಡಪ್ಪ ಮರಿಸ್ವಾಮಿ, ದೊಡ್ಡಣ್ಣ, ಮತ್ತೆ ಚಿಕ್ಕಪ್ಪ ನೀಲಕಂಠ ಇವರ ಜೊತೆಗೆ ಮಕ್ಕಳೆಲ್ಲರೂ ಕೂಡ ಒಟ್ಟಾಗಿ ವಾಸಿಸುತ್ತಿರುವುದರಿಂದ ಒಂದು ರೀತಿಯಲ್ಲಿ ಒಟ್ಟು ಕುಟುಂಬ ನಮ್ಮದಾಗಿತ್ತು.
ಅದರ ಸವಿಯೇ ವಿಶಿಷ್ಟ ರೀತಿಯಾದದ್ದು. ಆದುದರಿಂದಾಗಿ ನಮಗೆ ಮುಂಜಾನೆಯ ಸಮಯ ಎಂದರೆ ಬಹಳ ಇಷ್ಟವಾದ ಕ್ಷಣವಾಗಿತ್ತು!.
ಏಕೆಂದರೆ ಬೆಳಿಗ್ಗೆ ಎದ್ದೊಡನೆ ನಮ್ಮ ಊರಿನಲ್ಲಿದ್ದ ದೊಡ್ಡ ದೊಡ್ಡ ದನದ ಕೊಟ್ಟಿಗೆಗಳನ್ನ ಸ್ವಚ್ಛ ಮಾಡಬೇಕಾಗಿತ್ತು. ಎಲ್ಲರಿಗೂ ಒಂದೊಂದು ದನದ ಕೊಟ್ಟಿಗೆಗಳನ್ನ ಹಂಚಿಬಿಟ್ಟಿದ್ದರು. ನಾವು ಬೇಗ ಬೇಗ ನಮ್ಮ ನಿತ್ಯ ಕರ್ಮಗಳನ್ನ ಮುಗಿಸಿ, ಕೊಟ್ಟಿಗೆಯನ್ನ ಸ್ವಚ್ಛ ಮಾಡಬೇಕಾಗಿತ್ತು. ನಂತರವೇ ಸ್ನಾನ ತಿಂಡಿ ವ್ಯವಸ್ಥೆ ಆಗುತ್ತಿತ್ತು!. ನಂತರ ಶಾಲೆಗೆ ಹೋಗಬೇಕಾಗಿತ್ತು. ಚಾಚು ತಪ್ಪದೇ ಇವೆಲ್ಲವನ್ನೂ ಮಾಡಿ ಮುಗಿಸುತ್ತಿದ್ದೆವು.
ಆದರೆ ಇಂದು ಕಾಲ ಬದಲಾಗಿದೆ. ನಮ್ಮ ಮಕ್ಕಳು ಬೆಳಿಗ್ಗೆ ಬೇಗ ಏಳುವುದಿರಲಿ ತಮ್ಮ ತಮ್ಮ ಕೆಲಸಗಳನ್ನು ಕೂಡ ಮಾಡಿಕೊಳ್ಳುತ್ತಿಲ್ಲ. ಎಲ್ಲವನ್ನು ದೊಡ್ಡವರ ಜೊತೆ ಅವಲಂಬಿತರಾಗಿರುತ್ತಾರೆ. ಇಲ್ಲಿ ನಮ್ಮ ದೊಡ್ಡವರ ತಪ್ಪುಗಳು ಕೂಡ ಇದೆ.
ಬೆಳಿಗ್ಗೆ ಬೇಗ ಎದ್ದಾಗ ಏನೆಲ್ಲ ಅನುಕೂಲವಾಗುತ್ತದೆ ಎಂಬುದನ್ನು ಅವರಿಗೆ ತಿಳಿ ಹೇಳಲೇಬೇಕು. ಇವತ್ತಿನ ಯಾಂತ್ರಿಕ ಜೀವನದಲ್ಲಿ ಬೆಳಗಿನ ದಿನಚರಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ನಾವು ಬೆಳಿಗ್ಗೆ ಎದ್ದೊಡನೆ ಏನೇನು ಕೆಲಸವನ್ನ ಮಾಡುತ್ತೇವೆ ಎನ್ನುವುದರ ಮೂಲಕ ನಮ್ಮ ದಿನಚರಿ ಪ್ರಾರಂಭವಾಗುತ್ತಿದೆ.
ಸೂರ್ಯ ಆಗತಾನೇ ಎಳೆ ಬಿಸಿಲಿನೊಂದಿಗೆ ಸ್ವಚ್ಛಂದ ಆಕಾಶದಲ್ಲಿ ನಮಗೆ ಕಾಣಿಸಿತ್ತಾನೆ. ಸೂರ್ಯ ಮೂಡುವುದಕ್ಕಿಂತ ಮುಂಚಿತವಾಗಿ ನಾವು ನಮ್ಮ ದಿನಾಚರಣೆಯನ್ನು ಪ್ರಾರಂಭಿಸಬೇಕು. ಹಕ್ಕಿಗಳ ಚಿಲಿಪಿಲಿ ಗಾನ, ತಣ್ಣನೆಯ ವಾತಾವರಣ. ಯಾವುದೇ ಅಲಾರಾಂ ಇಲ್ಲದೆ ದಿನನಿತ್ಯ ತನ್ನ ನಿತ್ಯ ಚಟುವಟಿಕೆಗಳನ್ನು ಯಾರಿಗೂ ತೋರಿಸಿಕೊಳ್ಳದೆ, ಅಥವಾ ನಿರೀಕ್ಷೆ ಮಾಡದೆ ಪ್ರಾರಂಭಿಸಿಬಿಡುತ್ತದೆ. ಈ ಸುಂದರ ಪರಿಸರ ನಿಜಕ್ಕೂ ಸೋಜಿಗ!. ಪ್ರಾಣಿ-ಪಕ್ಷಿಗಳ ಜೊತೆಗೆ ಪ್ರಕೃತಿಯ ರಮಣೀಯ ದೃಶ್ಯವನ್ನು ಬೆಳಗ್ಗಿನ ಸಮಯದಲ್ಲಿ ನೋಡುವುದೇ ಒಂದು ರೀತಿಯಲ್ಲಿ ಅಹಲ್ಲಾದಕರ ವಾತಾವರಣ ನಮ್ಮೊಟ್ಟಿಗೆ ಕಾಣಿಸುತ್ತದೆ.
ಇಷ್ಟೆಲ್ಲ ಏಕೆ ಪೀಠಿಕೆ ಹಾಕಿದೆ ಎಂದರೆ....... ನಾವು ವಾರಕ್ಕೆ ಎರಡು ಮೂರು ದಿನ ಮೈಸೂರಿನ ಹೊರಭಾಗದಲ್ಲಿರುವ ಜೊತೆಗೆ ಏಕೈಕ ಅರಣ್ಯ ಇಲಾಖೆಯಿಂದ ಸ್ವಾಭಾವಿಕ ಅರಣ್ಯ ನಮಗೆ ಕಾಣಿಸಿಕೊಳ್ಳುವ ಲಿಂಗಾಬುಧಿ ಅರಣ್ಯ ಉದ್ಯಾನವನಕ್ಕೆ ಭೇಟಿಕೊಡುತ್ತೇವೆ.
ಇಲ್ಲಿನ ವಾತಾವರಣವೇ ನಮಗೆ ಮುದ ನೀಡುತ್ತದೆ. ಅಕ್ಕಪಕ್ಕದ ಬಡಾವಣೆಯ ನೂರಾರು ನಿವಾಸಿಗಳು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಬರುತ್ತಾರೆ. ಜೊತೆಗೆ ಆರೋಗ್ಯದ ದೃಷ್ಟಿಯಿಂದ ಅಲ್ಲಿ ವ್ಯಾಯಮ ಸಲಕರಣೆಯನ್ನು ಕೂಡ ಅಳವಡಿಸಿರುವುದರಿಂದ ಮಕ್ಕಳಾದಿಯಾಗಿ ಹಿರಿಯರು ಕೂಡ ಅದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಅಲ್ಲಲ್ಲಿ ಇರುವ ವಿಶ್ರಮಿಸುವ ಪೀಠಗಳು ಕೂಡ ವ್ಯಾಯಾಮದ ಮೈದಾನ ಜೊತೆಗೆ ಪ್ರಾಣಿ ಪಕ್ಷಿಗಳ ವಿವರಣೆ ನೀಡುವ, ದಾಖಲಾತಿ ಮಾಹಿತಿ ನೀಡುವ ನಾಮಫಲಕಗಳು ಜೊತೆಗೆ ವೈವಿಧ್ಯಮಯ ಜಾತಿಯ ಗಿಡಮರಗಳು ಔಷಧೀಯ ಸಸ್ಯ ಸಂಕುಲಗಳು ಮುಖ್ಯವಾಗಿ ಶ್ರೀಗಂಧದ ಮರಗಳು ಕೂಡ ಈ ಒಂದು ಉದ್ಯಾನವನದಲ್ಲಿ ಕಾಣಿಸಿತ್ತವೆ.
ಇಲ್ಲಿನ ಸ್ವಚ್ಛಂದ ಗಾಳಿ ಪರಿಸರ ವಾರಕ್ಕೆ ಒಮ್ಮೆ ಬಂದರೆ ಸಾಕು ಒಂದು ವಾರ ಪೂರ್ತಿಯಾಗಿದೆ. ನಮ್ಮಲ್ಲಿ ನವ ಚೈತನ್ಯವನ್ನು ಉಂಟುಮಾಡುತ್ತದೆ. ಜೊತೆಗೆ ಮರೆತಿದ್ದೆ!. ಇಲ್ಲಿ ಪ್ರಮುಖವಾಗಿ ದಿನಂಪ್ರತಿ ಸಮಯ ಮಾಡಿಕೊಂಡು ಪಕ್ಷಿ ವೀಕ್ಷಕರು ಕೂಡ ತಮ್ಮ ವೈವಿಧ್ಯಮಯ ಜೊತೆಗೆ ತಮ್ಮ ತಂತ್ರಜ್ಞಾನವುಳ್ಳ ಅತ್ಯಾಧುನಿಕ ಕ್ಯಾಮರಗಳಿಂದ ಮೂರನೇ ಕಣ್ಣು ಚಮತ್ಕಾರ ನಡೆಯುತ್ತದೆ!. ಅಂದರೆ ಅಲ್ಲಿ ಅವರು ಪಕ್ಷಿ ಜೊತೆಗೆ ಗಿಡಮರಗಳ ಒಂದು ಸೌಂದರ್ಯವನ್ನು ಸೆರೆ ಹಿಡಿಯುತ್ತಾರೆ. ಕೆರೆಯ ವಿಸ್ತಾರವಾದ ಸೌಂದರ್ಯವೂ ಕೂಡ ಸೇರಿರುತ್ತದೆ. ಮುಖ್ಯವಾಗಿ ಅವರು ಪ್ರತಿ ವಾರದ ಶನಿವಾರ ಮತ್ತು ಭಾನುವಾರ ಹೆಚ್ಚಾಗಿ ಬರುತ್ತಾರೆ. ನಮಗೂ ಕೂಡ ಒಂದು ರೀತಿಯಲ್ಲಿ ಕುತೂಹಲ ಇಲ್ಲಿ ವಾಯು ವಿಹಾರಕ್ಕಾಗಿ ಆಗಮಿಸುವ ಸಂದರ್ಭದಲ್ಲಿ ನಮಗೆ ಎಷ್ಟೋ ವರ್ಷಗಳ ಹಿಂದೆ ಪರಿಚಯವಾಗಿದ್ದ ಅಥವಾ ನಮ್ಮ ಹಳೆಯ ಸ್ನೇಹಿತರ ದರ್ಶನವೂ ಕೂಡ ಆಗುತ್ತದೆ!.
ಇಂತಹ ಉದ್ಯಾನವನಕ್ಕೆ ಹೊಂದಿಕೊಂಡಂತೆ ಅರಣ್ಯ ನಿರ್ವಹಣೆ ಮಾಡುತ್ತಿರುವ ಲಿಂಗಾಬುಧಿ ಸಸ್ಯ ಸಂಕುಲ ಸಸ್ಯ ಕಾಶಿ ಎಂದೇ ಪ್ರಸಿದ್ಧಿ ಯಾಗಿರುವ ಸಸ್ಯ ತೋಟ ಅಗಾಧವಾಗಿದೆ ಎನ್ನುವುದು ಮತ್ತೊಂದು ವಿಶೇಷ.
ಲಿಂಗಂಬುದಿ ವಾಯು ವಿಹಾರಿಗಳ ಗೆಳೆಯರ ಬಳಗ ಕೂಡಾ ಇದೆ. ಈ ಬಳಗದ ಅಧ್ಯಕ್ಷರಾಗಿ ನಾಗೇಶ್ ರವರು ಸಕ್ರಿಯ ಕಾರ್ಯಕ್ರಮಗಳನ್ನ ಹಮ್ಮಿಕೊಂಡು, ತಮ್ಮ ತಂಡದ ಸದಸ್ಯರೊಂದಿಗೆ ವಿಶ್ವಾಸಗಳಿಸಿ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಇಲ್ಲಿಗೆ ಬರುವ ನಾಗರಿಕರಿಗೆ ಮನರಂಜನೆಯ ಜೊತೆಗೆ ಅರಣ್ಯ ಜಾಗೃತಿಯ ಬಗ್ಗೆ ಸಂದೇಶವನ್ನು ಸಾರುತ್ತಿದ್ದಾರೆ. ತಿಂಗಳಿಗೆ ಒಮ್ಮೆಯಾದರೂ ಕೂಡ ಅರಣ್ಯ ಅಧಿಕಾರಿಗಳು ಕೂಡ ಇಲ್ಲಿಗೆ ಆಗಮಿಸಿ, ಈ ಒಂದು ಉದ್ಯಾನವನದ ಸ್ಥಿತಿಯ ಬಗ್ಗೆ ಏನೆಲ್ಲಾ ಬೆಳವಣಿಗೆ ಆಗುತ್ತಿದೆ ಎನ್ನುವುದರ ಕುರಿತು ಚರ್ಚೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ.
ಸಾಮಾನ್ಯವಾಗಿ ಈ ಉದ್ಯಾನವನದ ಬೆಳಗಿನ ಸಮಯ 6 ರಿಂದ ಸುಮಾರು 10.30ರವರೆಗೆ ಮತ್ತೆ ಸಂಜೆ 4:30 ರಿಂದ 6:30ವರೆಗೂ ಕೂಡ ತೆರೆದಿರುತ್ತದೆ. ಆದುದರಿಂದ ಇಲ್ಲಿ ಸುತ್ತಮುತ್ತಲಿನ ನಿವಾಸಿಗಳು ತಂಡೋಪ ತಂಡವಾಗಿ ಆಗಮಿಸಿ, ಈ ಉದ್ಯಾನವನದ ಸವಲತ್ತನ್ನು ಪಡೆಯುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಮಹಿಳೆಯರು ಕೂಡ ಮತ್ತು ವಯಸ್ಸಾದವರು ಒಟ್ಟೊಟ್ಟಾಗಿ ವ್ಯಾಯಾಮ ಮಾಡಿ, ವಿಶ್ರಮಿಸಿ ಉಭಯ ಕುಸುಲೋಪರಿ ಹಂಚಿಕೊಂಡು ತಮ್ಮ ಮನೆಯತ್ತ ತೆರಳುತ್ತಾರೆ.
ಇದು ಲಿಂಗಾಂಬುದಿ ಉದ್ಯಾನವನದ ದಿನನಿತ್ಯದ ಚಟುವಟಿಕೆ. ಈ ರೀತಿ ಮಾಡುತ್ತಿರುವುದರಿಂದ ಅವರ ಆರೋಗ್ಯದ ದೃಷ್ಟಿಯಲ್ಲಿ ಕೂಡ ಗಣನೀಯ ಪ್ರಗತಿ ಸಾಧಿಸಿದೆ ಎನ್ನುವುದು ಮತ್ತೊಂದು ವಿಶೇಷ!. ಒಂದು ರೀತಿಯಲ್ಲಿ ಇಲ್ಲಿ ಮಿನಿ ಅರಣ್ಯವನ್ನು ನಾವು ಕಾಣಬಹುದಾಗಿದೆ. ಈ ಲಿಂಗಂಬುದಿ ಕೆರೆಗೆ ಹೊಂದಿಕೊಂಡಂತೆ ಪಕ್ಕದಲ್ಲಿಯೇ ತೋಟಗಾರಿಕೆ ಇಲಾಖೆಯ ವತಿಯಿಂದ ನಿರ್ಮಿಸಿರುವ ಮತ್ತೊಂದು ಹೂವಿನ ಮತ್ತು ವಿವಿಧ ಗಿಡಮೂಲಿಕೆಗಳ ಔಷಧಿಯ ಪದಾರ್ಥಗಳೆಲ್ಲ ಸಿಗುವ ಜೊತೆಗೆ ಗುಲಾಬಿ ತೋಟಗಳ ತಾಣವು ಇದೆ. ಇದು ಕೂಡ ಉತ್ತಮ ಗಾಳಿಯನ್ನು ನಮಗೆ ನೀಡುತ್ತಿದೆ. ಆ ಸಸ್ಯ ಕಾಶಿಯಲ್ಲಿ ಮುಖ್ಯವಾಗಿ ದಸರಾ ಸಂದರ್ಭದಲ್ಲಿ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಕರಿಗೆ ಮುದ ನೀಡುತ್ತದೆ. ಮತ್ತೆ ಆ ವಿಹಂಗಮ ನೋಟವನ್ನ ನೋಡಲು ಎರಡು ಕಣ್ಣು ಸಾಲದು. ನಮಗೂ ಕೂಡ ನಿತ್ಯ ಬರಬೇಕು ಎನ್ನುವ ಆಸೆ ಇದೆ. ಆದರೆ ಕೆಲಸದ ನಿಮಿತ್ತ ಹೆಚ್ಚು ಕಡಿಮೆ ಎಂದರೇ ವಾರಕ್ಕೆ ಎರಡು ಬಾರಿಯಾದರೂ ಭೇಟಿ ಕೊಡುತ್ತೇವೆ.
ಪ್ರತಿ ಬೇಟಿಯ ಸಮಯದಲ್ಲೂ ಕೂಡ ವಿಶಿಷ್ಟ ರೀತಿಯಲ್ಲಿ ನಮಗೆ ಅದರ ಸೊಬಗು ಕಾಣಸಿಗುತ್ತದೆ.
ಅಲ್ಲಿ ನೀರಿನ ಮಧ್ಯದಲ್ಲಿ ಇರುವ ಮರಗಳ ಜೊತೆಗೆ ಮಧ್ಯಭಾಗದಲ್ಲಿ ವಿಶಾಲವಾದ ಹಸಿರು ಮರಗಳ ನಡುವೆ ಅನೇಕ ಪಕ್ಷಿಗಳು ತಮ್ಮ ದಿನಚರಿಯವನ್ನು ತಪ್ಪದೇ ಪ್ರಾರಂಭಿಸಿಬಿಡುತ್ತವೆ. ದೂರ ದೂರದ ದೇಶ ವಿದೇಶಗಳಿಂದಲೂ ಕೂಡ ಪಕ್ಷಿ ಸಂಕುಲಗಳು ಇಲ್ಲಿಗೆ ಬರುತ್ತವೆ ಎನ್ನುವುದು ಕೂಡ ಪಕ್ಷಿ ವೀಕ್ಷಣೆಗೆ ಬರುವ ಅನೇಕ ಸ್ನೇಹಿತರ ಮೂಲಕ ನಾವು ತಿಳಿದುಕೊಳ್ಳುವುದೇ ಒಂದು ರೀತಿಯಲ್ಲಿ ಸೋಜಿಗ. ಅವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದ ಅನೇಕ ಪಕ್ಷಿ ಪ್ರಭೇದಗಳನ್ನ ವರ್ಣಿಸುವಾಗ ನಿಜಕ್ಕೂ ನಾವು ಎಷ್ಟೊಂದು ವಿಷಯಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಕಳೆದುಕೊಳ್ಳುತ್ತಿದ್ದೇವೆ ಎಂದನಿಸುತ್ತದೆ.
ಮುಖ್ಯವಾಗಿ ಇಲ್ಲಿಗೆ ಮಕ್ಕಳನ್ನು ಕೂಡ ಹಲವರು ಕರೆದುಕೊಂಡು ಬರುತ್ತಾರೆ. ಈ ಒಂದು ಹಂತದಲ್ಲಿ ನಾವು ಮಕ್ಕಳಿಗೂ ಕೂಡ ಅರಣ್ಯದ ಮತ್ತು ಬೆಳಗಿನ ವಾತಾವರಣದ ಸೊಬಗನ್ನ ವಿವರಿಸಬಹುದು. ಸೂರ್ಯ ತನ್ನ ಎಳೆಯ ಬಿಸಿಲಿನೊಂದಿಗೆ ನೀರಿನಲ್ಲಿ ಮೂಡಿಸುವ ಹೃದಯಸ್ಪರ್ಶಿ ಅನೇಕ ಗಿಡಮರಗಳ ಪ್ರತಿಬಿಂಬ ಕ್ಯಾಮರಾದಲ್ಲಿ ಸೆರೆ ಹಿಡಿದಾಗ ನೋಡುವುದೇ ಒಂದು ರೀತಿಯಲ್ಲಿ ಕೌತುಕ ಉಂಟಾಗುತ್ತದೆ.
ಇಲ್ಲಿ ಮತ್ತು ಹೊರಗಡೆ ಸೆರೆಹಿಡಿದ ಚಿತ್ರಗಳನ್ನು ಕೆಲವು ತಿಂಗಳುಗಳ ಹಿಂದೆ ಕಶ್ಯಪ್ ಮತ್ತು ಗಿರಿ ಜೋಡಿ ಛಾಯಾಗ್ರಾಹಕರು ಆಕರ್ಷಕ ರೀತಿಯಲ್ಲಿ ಸಂಗ್ರಹಿಸಿ, ಒಂದು ಚೌಕಟ್ಟು ಹಾಕಿ ಪ್ರದರ್ಶನವನ್ನು ಕೂಡ ಮಾಡಿದ್ದಾರೆ. ಇದು ಪಕ್ಷಿಪ್ರಿಯರ ಮನ ಸೆಳೆದಿದೆ.
ಬನ್ನಿ ನಮಗೆ ಸಮಯ ಸಿಗುವುದಿಲ್ಲ. ಸಿಕ್ಕ ಸಮಯವನ್ನ ಸದುಪಯೋಗಪಡಿಸಿಕೊಳ್ಳಬೇಕು.
ಬೆಳಗಿನ ಅಹಲ್ಲಾದಕರ ವಾತಾವರಣದಲ್ಲಿ ಆಕಾಶವಾಣಿಯ ಕಾರ್ಯಕ್ರಮಗಳನ್ನ ಸವಿಯುತ್ತ ವಾಯುವಿಹಾರದಲ್ಲಿ ನಮ್ಮ ದಿನಚರಿ ಪ್ರಾರಂಭಿಸುವುದೇ ಒಂದು ರೀತಿಯಲ್ಲಿ ಮೈ- ಮನಗಳಿಗೆ ವಿಶಿಷ್ಟ ರೀತಿಯಲ್ಲಿ ಅನುಭವ ನೀಡುತ್ತದೆ.
ಕವಿಗಳಿಗೆ, ಲೇಖಕರಿಗೆ, ಪರಿಸರ ಪ್ರಿಯರಿಗೆ ಬೆಳಗಿನ ಸಮಯ ಮತ್ತು ಸಂಜೆಯ ಸೊಬಗಿನ ವಾತಾವರಣ ಅನೇಕ ಸ್ಪೂರ್ತಿಯನ್ನು ನೀಡುವುದರ ಜೊತೆಗೆ ಉತ್ಕೃಷ್ಟ ಸಾಹಿತ್ಯವೂ ಕೂಡ ಸೃಷ್ಟಿಯಾಗುತ್ತಿದೆ. ಅನೇಕ ಹಿರಿಯ ಕವಿ ಮತ್ತು ಲೇಖಕರ ಸಾಹಿತ್ಯವನ್ನು ಓದಿದಾಗ ಬೆಳಗಿನ ಸಮಯದ ಬಗ್ಗೆ ಅನೇಕ ಮೌಲಿಕ ಕೃತಿಗಳು ಹೊರಬಂದಿವೆ. ಅನೇಕ ಕವನಗಳ ಮೂಲಕ ಬೆಳಗಿನ ಸಮಯದ ವಾತಾವರಣದ ಸೊಬಗನ್ನ ಒಂದಲ್ಲ ಒಂದು ರೀತಿಯಲ್ಲಿ ಅನೇಕರು ತಮ್ಮದೇ ಆದ ಶೈಲಿಯಲ್ಲಿ ತೆರೆದಿಟ್ಟಿದ್ದಾರೆ. ಓದಿದರೆ ಒಂದು ರೀತಿಯಲ್ಲಿ ಕಣ್ಣಿಗೆ ಕಟ್ಟುವಂತಿರುತ್ತದೆ. ಇನ್ನೂ ಆ ಒಂದು ನಿಸರ್ಗದ ಮಡಿಲಿನಲ್ಲಿ ಈ ಮಾನವ ನಿರಂತರವಾಗಿ ಪಯಣ ಮಾಡಲೇಬೇಕು.
ಉದ್ಯಾನಗರ ಮೈಸೂರಿನಲ್ಲಿ ಕುಕ್ಕರಳ್ಳಿಕೆರೆ, ಕಾರಂಜಿಕೆರೆ ಇನ್ನು ಜೀವಂತವಾಗಿದೆ. ಇದರ ಜೊತೆಗೆ ಲಿಂಗಂಬುದಿ ಕೆರೆಯು ಕೂಡ. ಇತ್ತೀಚಿಗೆ ತಾನೇ ಕುವೆಂಪುರವರು ಕುಕ್ಕರಹಳ್ಳಿ ಕೆರೆಯ ನಿಸರ್ಗದ ರಮ್ಯತೆಯ ಬಗ್ಗೆ ಬರೆದಿರುವ ಕವನ ಪ್ರಸಾರವಾಯಿತು.
ಇಲ್ಲಿ ನಿತ್ಯ ಬರುವ ವಾಯುವಿಹಾರಿಗಳಲ್ಲಿ ಒಂದು ಸವಿನಯ ಮನವಿ ಎಂದರೆ........ ನಾವು ಉಪಯೋಗಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳೋಣ. ಅರಣ್ಯ ಇಲಾಖೆ ಅಥವಾ ಸಂಬಂಧ ಪಟ್ಟ ಅಧಿಕಾರಿಗಳೇ ಆ ಕೆಲಸವನ್ನು ಮಾಡಲಿ ಎನ್ನುವುದನ್ನು ಬಿಟ್ಟು, ನಮಗೆ ಕಾಣಸಿಗುವ ಆಶುಚಿಯ ವಾತಾವರಣವನ್ನ ಸ್ವಚ್ಛ ಮಾಡೋಣ. ಈ ಸುಂದರ ಪರಿಸರವನ್ನು ನಿರ್ಮಾಣ ಮಾಡೋಣ. ಈ ಪ್ರಕೃತಿ ನಮ್ಮೊಬ್ಬರಿಗೆ ಅಲ್ಲ, ಸಕಲ ಜೀವಕೋಟಿ ರಾಶಿಗಳಿಗೂ ಕೂಡ ಸೇರಿದ್ದು.
ಆದುದರಿಂದ ನಮ್ಮ ಬೆಳಗಿನ ದಿನಚರಿ ವೈವಿಧ್ಯಮಯವಾಗಿದ್ದರೆ ಚಂದ. ಚನ್ನವೀರ ಕಣವಿಯವರು ಹೇಳಿರುವ "ಒಂದು ಮುಂಜಾವಿನಲಿ......." ಕವನ ಈ ಕ್ಷಣದಲ್ಲಿ ನೆನಪಾಗುತ್ತದೆ. ಇದೇ ರೀತಿ ಬೇರೆ ಬೇರೆ ಕವಿಗಳ ಕವನಗಳು ಕೂಡ.
ಈ ಸಂದರ್ಭದಲ್ಲಿ ನಾನು ನಮ್ಮೊಟ್ಟಿಗೆ ಬರುವ ಕಣ್ಣೂರು ವಿ ಗೋವಿಂದಾಚಾರಿ, ಕುದೇರು ಎಸ್ ಪರಶಿವಮೂರ್ತಿ, ನಾಗೇಶ್, ಅಭಿನಂದನ್, ಬಸಪ್ಪ, ಎಚ್ ಡಿ ಕೋಟೆಯ ಜಿಲ್ಲಾ ಪಂಚಾಯತ್ ರವಿ, ಹಿರಿಯರಾದ ಮಹದೇವಪ್ಪ ವಿ ಮುಂತಾದ ಸ್ನೇಹಿತರನ್ನ ನೆನಪಿಸಿಕೊಳ್ಳುತ್ತೇನೆ.ಕಾಳಿಹುಂಡಿ ಶಿವಕುಮಾರ್, ಮೈಸೂರು.