ಅಸಂಘಟಿತ ವಲಯ ಕಾರ್ಮಿಕರಿಗೆ ಪಿಂಚಣಿ : ಅರ್ಹರೆಲ್ಲರು ಸೌಲಭ್ಯ ಪಡೆಯಲು ಕ್ರಮ ವಹಿಸಿ-ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ: ಅಸಂಘಟಿತ ಕಾರ್ಮಿಕರಿಗೆ ಅವರ ಜೀವನ ಸಂದ್ಯಾ ಕಾಲದಲ್ಲಿ ಪೋಷಿಸಿಕೊಳ್ಳಲು ನೆರವಾಗುವ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆಯ ಸೌಲಭ್ಯವನ್ನು ಅರ್ಹರೆಲ್ಲರು ಪಡೆಯಲು ಅನುಕೂಲವಾಗಲು ಇಲಾಖೆಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚನೆ ನೀಡಿದರು.

  ನಗರದ ಜಿಲ್ಲಾಡಳಿತ ಭವನದಲ್ಲಿರುವ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿಂದು ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಡಿ ನೀಡಲಾಗುವ ಪಿಂಚಣಿ ಯೋಜನೆಗೆ ನೊಂದಾಯಿಸುವ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

  ಗೃಹ ಆಧಾರಿತ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ದಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂ ರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ, ಕೈಮಗ್ಗ, ಚರ್ಮೋದ್ಯಮ, ಧ್ವನಿ ಮತ್ತು ದೃಶ್ಯ, ಬೀಡಿ ಕಾರ್ಮಿಕರು ಮತ್ತು ಇತರೆ ವೃತ್ತಿಯಲ್ಲಿ ಅಸಂಘಟಿತ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದ ಪಿಂಚಣಿ ಯೋಜನೆ ಜಾರಿಗೆ ಬಂದಿದೆ ಎಂದರು. 

  ಅಸಂಘಟಿತ ವಲಯದ ಕಾರ್ಮಿಕರು ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇವರಿಗೆ 60 ವರ್ಷ ಪೂರ್ಣಗೊಂಡ ಬಳಿಕ ತಿಂಗಳಿಗೆ 3 ಸಾವಿರ ರೂ. ಖಚಿತ ಕನಿಷ್ಠ ಮಾಸಿಕ ಪಿಂಚಣಿ ಪಡೆಯಲು ಯೋಜನೆ ಜಾರಿಗೆ ತರಲಾಗಿದೆ. ಸಂಘಟಿತ ಕಾರ್ಮಿಕರು ಯೋಜನೆಯಡಿ ಫಲಾನುಭವಿಗಳಾಗಿ ನೊಂದಾಯಿಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.

  ಇಲಾಖೆಗಳು ಆಯಾ ತಾಲೂಕಿನಲ್ಲಿಯೇ ಯೋಜನೆಗೆ ನೊಂದಾಯಿಸಲು ವಿಶೇಷ ನೊಂದಣಿ ಶಿಬಿರ ತೆರೆಯಬೇಕು. ಅಸಂಘಟಿತ ಕಾರ್ಮಿಕರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಯೋಜನೆ ಬಗ್ಗೆ ತಮ್ಮ ವ್ಯಾಪ್ತಿಯ ಕಾರ್ಮಿಕರಿಗೆ ಮನವರಿಕೆ ಮಾಡಿಕೊಡಬೇಕು. ಪಿಂಚಣಿ ಸೌಲಭ್ಯ ಸದುಪಯೋಗ ಮಾಡಿಕೊಳ್ಳಲು ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಇಲಾಖೆಗಳು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ನಿರ್ದೇಶನ ನೀಡಿದರು.

  ಇದೇ ವೇಳೆ ಸಭೆಯಲ್ಲಿ ಹಾಜರಿದ್ದ ಅಸಂಘಟಿತ ಕಾರ್ಮಿಕರ ಸಂಘಟನೆಯ ಮುಖಂಡರು, ಪ್ರತಿನಿಧಿಗಳ ಅಹವಾಲು, ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರು ಯೋಜನೆ ಸಂಬಂಧ ನೀಡಲಾದ ಸಲಹೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು

Leave a Reply

Your email address will not be published. Required fields are marked *