ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಶಿಧರ್ ಶೆಟ್ಟಿ.
ಚಾಮರಾಜನಗರ: ಅರೆಕಾಲಿಕ ಕಾನೂನು ಸ್ವಯಂ ಸೇವಕರ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲು ಸಮಾಜದ ಎಲ್ಲಾ ವರ್ಗಗಳ ಜನರಿಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಉತ್ತಮ ಅವಕಾಶ ಕಲ್ಪಿಸಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಶಿಧರ್ ಶೆಟ್ಟಿ ಅವರು ಹೇಳಿದರು.
ಬೆಂಗಳೂರಿನ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಚೇರಿ ಮೂಲಕ ಇಂದು ರಾಜ್ಯದ ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೊಂದಿಗೆ ವರ್ಚುವೆಲ್ (ಆನ್‍ಲೈನ್) ಸಭೆ ನಡೆಸಿ ಅವರು ಈ ವಿಷಯ ತಿಳಿಸಿದರು.
ಗ್ರಾಮೀಣ ಹಾಗೂ ನಗರಪ್ರದೇಶಗಳಲ್ಲಿ ಜನಸಾಮಾನ್ಯರ ಸಮಸ್ಯೆ ಕುಂದುಕೊರತೆ ಅರಿಯಲು, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಅರೆ ಕಾನೂನು ಸ್ವಯಂ ಸೇವಕರ ಪಾತ್ರ ಪ್ರಮುಖವಾಗಿದೆ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರಗಳಲ್ಲಿ ಅರೆ ಕಾಲಿಕ ಸ್ವಯಂ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಮಾಜಸೇವೆ ಮಾಡಬಯಸುವ ಸ್ವಯಂ ಸೇವಾ ಹುದ್ದೆಗೆ ವೇತನ ಇರುವುದಿಲ್ಲ. ಆದರೆ ಕೆಲ ಜಾಗೃತಿ ಶಿಬಿರದಲ್ಲಿ ಗೌರವಧನದ ಅವಕಾಶ ಕಲ್ಪಿಸಲಾಗಿದೆ ಎಂದರು.
ಸಾಮಾಜಿ ನ್ಯಾಯ ಪರಿಕಲ್ಪನೆಯಡಿ ಜನಸಾಮಾನ್ಯರಿಗೆ ತ್ವರಿತ ನ್ಯಾಯ ಒದಗಿಸಲು ರಾಜ್ಯದಲ್ಲಿ ಒಟ್ಟು 30 ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ 139 ತಾಲೂಕು ಕಾನೂನು ಸೇವಾ ಪ್ರಾಧಿಕಾರಗಳ ಕಾರ್ಯನಿರ್ವಹಿಸುತ್ತಿವೆ. ಪ್ರತಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ 50 ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರಗಳಿಗೆ ತಲಾ 25 ಅರೆಕಾಲಿಕ ಸ್ವಯಂ ಸೇವಕರ ಹುದ್ದೆಗಳಿಗೆ ಒಂದು ವರ್ಷಗಳ ಅವಧಿಗೆ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಆಯ್ಕೆಯಾಗುವ ಅರೆಕಾಲಿಕ ಸ್ವಯಂ ಸೇವಕರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಗುರುತಿನ ಚೀಟಿ ನೀಡಲಾಗುತ್ತದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕರು, ಪಂಚಾಯತಿ ಮಾಜಿ ಸದಸ್ಯರು, ನಿವೃತ್ತ ಸರಕಾರಿ ನೌಕರರು, ತೃತೀಯ ಲಿಂಗಿಗಳು, ಹಿರಿಯ ನಾಗರಿಕರು, ಬುಡಕಟ್ಟು ಸಮುದಾಯದ ವ್ಯಕ್ತಿಗಳು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ವಕೀಲರಾಗಿ ನೊಂದಾಯಿಸಿಕೊಂಡಿರುವ ಕಾನೂನು ವಿದ್ಯಾರ್ಥಿಗಳು, ಸ್ವಸಹಾಯ ಹಾಗೂ ಸ್ತ್ರೀಶಕ್ತಿ ಮಹಿಳಾ ಸಂಘಗಳ ಸದಸ್ಯರು, ಸಾಮಾಜಿಕ ಕಾರ್ಯಕರ್ತರು, ನಿವೃತ್ತ ಸೈನಿಕರು, ಮಾಜಿ ಸೈನಿಕರು, ಕಾರಾಗೃಹಗಳಲ್ಲಿ ದೀರ್ಘಾವಧಿ ಶಿಕ್ಷೆ ಅನುಭವಿಸಿರುವವರು, ಸೇರಿದಂತೆ ಇತರರು ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಅಕ್ಟೋಬರ್ 08 ರವರೆಗೆ ಕಾಲಾವಕಾಶವಿದೆ ಎಂದು ಹೇಳಿದರು.
ಬಹುತೇಕ ಹಳ್ಳಿಯ ಜನತೆಗೆ ಜನನ ಮರಣ ನೋಂದಣಿ ಮಾಹಿತಿ ಇರುವುದಿಲ್ಲ. ಮಕ್ಕಳು ನಾಪತ್ತೆಯಾದ ತಕ್ಷಣ ಮಕ್ಕಳ ರಕ್ಷಣಾ ಇಲಾಖೆಗೆ ಅಥವಾ ಪೆÇಲೀಸರಿಗೆ ತಿಳಿಸಿದಲ್ಲಿ ಬೇಗನೆ ಪತ್ತೆ ಹಚ್ಚಲು ಅನುಕೂಲವಾಗುತ್ತದೆ. ಕೆಲ ಪ್ರಕರಣಗಳಲ್ಲಿ ಮಾನಸಿಕ ಅಸ್ವಸ್ಥರನ್ನು ಮನೆಯಲ್ಲಿ ಕೂಡಿ ಹಾಕಿರುತ್ತಾರೆ. ಅಂತಹವರನ್ನು ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ಅರೆ ಕಾನೂನು ಸ್ವಯಂ ಸೇವಕರ ಮೂಲಕ ಮಾಹಿತಿ ಪಡೆದು ಅವರಿಗೆ ರಕ್ಷಣೆ ಮಾಡಲಾಗುತ್ತದೆ.ವಿಶೇಷವಾಗಿ ಹಳ್ಳಿಯ ಜನರಿಗೆ ಮಾಹಿತಿ ಒದಗಿಸುವ ಮಹತ್ವದ ಕಾರ್ಯವನ್ನು ಅರೆ ಕಾನೂನು ಸ್ವಯಂ ಸೇವಕರು ಮಾಡಬೇಕಾಗುತ್ತದೆ ಎಂದರು.
ಹಳ್ಳಿಗಳಲ್ಲಿ ಬಾಲ್ಯ ವಿವಾಹ ತಡೆಯುವ ಕಾರ್ಯ ಮಾಡಬೇಕಿದೆ. ಸಣ್ಣಪುಟ್ಟ ಕೌಟುಂಬಿಕ ಕಲಹ, ವಿಚಾರಕ್ಕೆ ಪೆÇಲೀಸ್, ಕೋರ್ಟ್ ಕಚೇರಿಯ ಮೆಟ್ಟಿಲೇರದೆ, ಇಬ್ಬರು ಸಮಕ್ಷಮ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಇಟ್ಟಿಗೆ ಭಟ್ಟಿ, ಅಗರಬತ್ತಿ ಕಾರ್ಖಾನೆ, ಹೋಟೆಲ್ ಸೇರಿದಂತೆ ಇತರೆ ಕಡೆಗಳಲ್ಲಿ ಕಂಡು ಬರುವ ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ ಮುಖ್ಯವಾಹಿನಿಗೆ ತರಬೇಕಿದೆ. ಈ ಎಲ್ಲ ಕಾರ್ಯ ಮಾಡಲು ಸ್ವಯಂ ಇಚ್ಚೆಯಿಂದ ಅರೇ ಕಾನೂನು ಸ್ವಯಂ ಸೇವಕರ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಅಸಕ್ತರು ಆಯಾ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರಗಳಿಂದ ನಿಗದಿತ ಅರ್ಜಿ ನಮೂನೆ ಪಡೆದು ಸಂಬಂಧಿತ ದಾಖಲೆಗಳನ್ನು ಲಕೋಟೆ ಮೇಲೆ ಅರೆಕಾಲಿಕ ಸ್ವಯಂ ಸೇವಕರ ಹುದ್ದೆಗಾಗಿ ಎಂಬ ಮೇಲ್ಬರಹದೊಂದಿಗೆ ಅಕ್ಟೋಬರ್ 8ರೊಳಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಆಯಾ ಕಾನೂನು ಸೇವಾ ಪ್ರಾಧಿಕಾರಗಳಿಗೆ ಕಳುಹಿಸಬಹುದಾಗಿದೆ. ಆಯ್ಕೆಯಾಗುವ ಅರೆಕಾಲಿಕ ಸ್ವಯಂ ಸೇವಕರು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮಾದರಿಯಲ್ಲಿ ಕೆಲಸ ಮಾಡಲು ಅಸಕ್ತರಾಗಿಬೇಕು ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಶಿಧರ್ ಶೆಟ್ಟಿ ಅವರು ಇದೇ ವೇಳೆ ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ್ ಅವರು ವರ್ಚುವೆಲ್ ಸಭೆಯಲ್ಲಿ ಇದ್ದರು.