ಚಾಮರಾಜನಗರ: ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಅಂಗವಾಗಿ ನಗರದಲ್ಲಿಂದು ಸರ್ಕಾರಿ ಅಧಿಕಾರಿ, ನೌಕರರಿಗೆ ಮತದಾನ ಜಾಗೃತಿ ಮೂಡಿಸಲು ಹಾಗೂ ನೈತಿಕ ಮತದಾನ ಬೆಂಬಲಿಸುವಂತೆ ಕೋರಿ ಜಿಲ್ಲೆಯ ಕರ್ತವ್ಯ ನಿರತ 9400 ಸರ್ಕಾರಿ ನೌಕರರಿಗೆ ‘ಅಂಚೆ ಪತ್ರ ಅಭಿಯಾನ’ವನ್ನು (ಪೋಸ್ಟ್ ಕಾರ್ಡ್) ಚಳವಳಿ ಮಾದರಿಯಲ್ಲಿ ನಡೆಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಒಳಾವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರಲ್ಲಿ ಚುನಾವಣೆ ಮತ್ತು ಮತದಾನ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಲಾಗಿದ್ದ ಅಂಚೆ ಪತ್ರ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಶಿಲ್ಪಾ ನಾಗ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರ ಅಂಕಿತದೊಂದಿಗೆ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರಿಗೆ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಹಾಗೂ ನೈತಿಕ ಮತದಾನ ಮಾಡುವಂತೆ ಮನವಿ ಮಾಡಿರುವ ಅಂಚೆ ಪತ್ರವನ್ನು ಅನಾವರಣಗೊಳಿಸಲಾಯಿತು.
“ನಮ್ಮ ಜಿಲ್ಲೆಯ ಹೆಮ್ಮೆಯ ಸರ್ಕಾರಿ ನೌಕರರಾದ ನಿಮಗೆ ಜಿಲ್ಲಾಡಳಿತದ ವತಿಯಿಂದ ಅಭಿನಂದನೆ ಅರ್ಪಿಸುತ್ತೇವೆ. ವಷರ್ಂಪ್ರತಿ ಅವಿರತವಾಗಿ ದುಡಿದು, ಜಿಲ್ಲೆಯ ಪ್ರಗತಿಗೆ ನೆರವಾಗುವ ನಿಮ್ಮ ಕಾರ್ಯತತ್ಪರತೆ ಅಭಿನಂದನಾರ್ಹ. ಅದರಲ್ಲೂ ಚುನಾವಣೆ ಸಂದರ್ಭದಲ್ಲಿ ಮತ್ತಷ್ಟು ಜವಾಬ್ದಾರಿ ನಮ್ಮದಾಗಿರುತ್ತದೆ. ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಸ್ವಾಗತದಲ್ಲಿ ನಾವಿದ್ದೇವೆ. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಒಂದಿಲ್ಲೊಂದು ರೀತಿಯ ಚುನಾವಣಾ ಜವಾಬ್ದಾರಿ ನಿರ್ವಹಿಸುವ ಸರ್ಕಾರಿ ನೌಕರರಾದ ನಾವುಗಳು ಕರ್ತವ್ಯದ ನೆಪದಲ್ಲಿ ಮತ ಹಾಕುವುದನ್ನು ಮರೆಯಬಾರದು. ಈ ಬಾರಿ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಹಾಗೂ ತಮ್ಮ ಕುಟುಂಬದ ಅರ್ಹ ಮತದಾರರು ಕೂಡ ಶೇ.100 ರಷ್ಟು ಮತದಾನ ಮಾಡುತ್ತೀರೆಂಬ ನಂಬಿಕೆ ನಮ್ಮದಾಗಿದೆ…, ‘ಚುನಾವಣಾ ಪರ್ವ-ದೇಶದ ಗರ್ವ’ ಬನ್ನಿ ಸುಭದ್ರ ಚಾಮರಾಜನಗರ ನಿರ್ಮಾಣ ಮಾಡೋಣ…..” ಎಂಬ ಸಂದೇಶ ಅಂಚೆ ಪತ್ರದಲ್ಲಿದೆ.
ಇದೇ ವೇಳೆ ಮಾತನಾಡಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆನಂದ್ ಪ್ರಕಾಶ್ ಮೀನಾ ಅವರು ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಪ್ರತಿಯೊಬ್ಬರಿಗೂ ಮತದಾನ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳನ್ನು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲಿ ಅಂಚೆ ಪತ್ರ ಅಭಿಯಾನವು ಸಹ ಒಂದಾಗಿದೆ. ಎಲ್ಲಾ ಸರ್ಕಾರಿ ನೌಕರರು ತಪ್ಪದೆ ಮತದಾನ ಮಾಡಬೇಕೆಂಬುದೇ ಅಂಚೆ ಪತ್ರ ಅಭಿಯಾನದ ಉದ್ದೇಶವಾಗಿದೆ ಎಂದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಶಿಲ್ಪಾ ನಾಗ್, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ, ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಮನರೇಗಾ ಸಹಾಯಕ ನಿರ್ದೇಶಕರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಮನರೇಗಾ ಯೋಜನೆಯ ತಾಲ್ಲೋಕು ಸಂಯೋಜಕರು, ಅಧಿಕಾರಿಗಳು, ಇತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಡಳಿತ ಭವನದ ಒಳಾವರಣದಲ್ಲಿ ಶಾಯಿ ಹಾಕಿದ ಕೈ ಬೆರಳು ಹಾಗೂ ಸ್ವೀಪ್ ಅಕ್ಷರಗಳ ಚಿತ್ರವನ್ನು ಅಂಚೆ ಪತ್ರಗಳ ಮೂಲಕವೇ ಚಿತ್ರಿಸಿದ್ದು ಅಭಿಯಾನದ ವಿಶೇಷವಾಗಿತ್ತು.