- ವಿದ್ಯುತ್ ಸುಧಾರಣೆ ಕಾಯ್ದೆ ಗ್ರಾಹಕರಿಗೆ, ನೌಕರರಿಗೆ ಮಾರಕ : ಎನ್ .ಮಹೇಶ್
ಚಾಮರಾಜನಗರ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಆಶ್ರಯದಲ್ಲಿ ನೌಕರರು, ಅಧಿಕಾರಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಸೆಸ್ಕ್ ಕಚೇರಿಯ ಮುಂಭಾಗ ಜಮಾಯಿಸಿದ ಅಧಿಕಾರಿಗಳು ಹಾಗೂ ನೌಕರರು, ‘ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಬೇಡ, ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣ ಬೇಡ, ಕಾರ್ಮಿಕರ ಒಗ್ಗಟ್ಟು ಚಿರಾಯುವಾಗಲಿ’ ಎಂಬ ಘೋಷಣೆಗಳನ್ನು ಕೂಗಿದರು.
ನೌಕರರ ಸಂಘದ ಉಪಾಧ್ಯಕ್ಷ ಎನ್.ಮಹೇಶ್ ಅವರು ಮಾತನಾಡಿ, ಕೇಂದ್ರ ಸರ್ಕಾರ ‘ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವುದರ ವಿರುದ್ದ ಆಲ್ ಇಂಡಿಯಾ ಇಂಜಿನಿಯರ್ ಒಕ್ಕೂಟ, ಸಂಘ, ಸಂಸ್ಥೆಗಳ ಒಂದು ದಿನದ ಮುಷ್ಕರ ಮಾಡಿರುವುದನ್ನು ಬೆಂಬಲಿಸಿ ನಾವು ಇಂದು ಪ್ರತಿಭಟನೆ ಮಾಡುತ್ತಿದ್ದೇವೆ. ವಿದ್ಯುತ್ ಸುಧಾರಣೆ ಕಾಯ್ದೆ 2026 ಗ್ರಾಹಕರಿಗೆ, ನೌಕರರ ವರ್ಗದವರಿಗೆ ಮಾರಕವಾಗಲಿದ್ದು, ಇದು ಕಾರ್ಮಿಕ ವಿರೋಧಿ ನೀತಿಯಾಗಿದೆ. ರೈತರು, ಜನಸಾಮಾನ್ಯರಿಗೆ ಹೊರೆಯಾಗಲಿದೆ. ಕೃಷಿ ಉದ್ದೇಶಕ್ಕೆ ರೈತರಿಗೆ ನೀಡುತ್ತಿರುವ ಉಚಿತ ವಿದ್ಯುತ್‌ಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಬಡವರಿಗೆ ನೀಡುತ್ತಿರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಉಚಿತ ವಿದ್ಯುತ್‌ಗೆ ಕಡಿವಾಣ ಬೀಳುವ ಸಾಧ್ಯತೆ’ ಎಂದು ಕಳವಳ ವ್ಯಕ್ತಪಡಿಸಿದರು.
ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ 60 ಸಾವಿರಕ್ಕೂ ಹೆಚ್ಚು ನೌಕರರು ಹಾಗೂ ಈ ಸಂಸ್ಥೆ ಕಟ್ಟಿ ಬೆಳಸಿದ 40 ಸಾವಿರ ಪಿಂಚಣಿದಾರರಿಗೆ ತೊಂದರೆಯಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡಬಾರದು’ ಆಗ್ರಹಿಸಿದರು.
ಪ್ರತಿಭಟನೆ ಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್, ಎಇಇ ಮಹೇಶ್, ನೌಕರರ ಸಂಘದ ಅಧ್ಯಕ್ಷ ಮುರುಳೀಕೃಷ್ಣಸ್ವಾಮಿ, ಕಾರ್ಯದರ್ಶಿ ಸಿದ್ದರಾಜಪ್ಪ, ಎಸ್ ಸಿ ಎಸ್ ಟಿ ಕಲ್ಯಾಣ ಸಂಸ್ಥೆ ಕೇಂದ್ರ ಸಮಿತಿ ಸದಸ್ಯ ಮಂಜುನಾಥ್, ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಸೋಮೇಶ್ವರ, ಎಲ್ಲ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ನೌಕರರ ಬಾಂಧವರು ಭಾಗವಹಿಸಿದ್ದರು.