- ಮದ್ಯದಂಗಡಿ ರದ್ದು ಮಾಡದಿದ್ದರೆ ಉಗ್ರ ಹೋರಾಟ :ಗ್ರಾಮಸ್ಥರಿಂದ ಎಚ್ಚರಿಕೆ
ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ಎಂಎಸ್‌ಐಎಲ್ ಅಂಗಡಿ ರದ್ದುಪಡಿಸುವಂತೆ ಒತ್ತಾಯಿಸಿ ಭೋಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಪ್ರತಿಭಟನೆ ನಡೆ ಸಿದರು.
ಗ್ರಾಮದ ಗೇಟ್ ಯಿಂದ ಗ್ರಾಮಕ್ಕೆ ಹೋಗುವ ರಸ್ತೆಯ ಬದಿಯಲ್ಲೇ ಆರಂಭಿಸಲು ಸಿದ್ಧಗೊಂಡಿರುವ ಮದ್ಯದಂಗಡಿ ಮುಂಭಾಗದಲ್ಲಿ ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಿ ಬೇಡ ಬೇಡ ಸಾರಾಯಿ ಅಂಗಡಿ ‘ಎಂದು ಅಬ್ಕಾರಿ ಇಲಾಖೆ, ಜಿಲ್ಲಾಡಳಿತ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಪು.ಶ್ರೀನಿವಾಸನಾಯಕ,ಎಪಿಎಂಸಿ ಮಾಜಿ ಅಧ್ಯಕ್ಷ ಭೋಗಾಪುರ ಡಿ.ನಾಗೇಂದ್ರ ಮಾತನಾಡಿ, ಭೋಗಾಪುರ ಮುಖ್ಯರಸ್ತೆಯಲ್ಲಿ ತೆರೆಯಲು ಉದ್ದೇಶಿರುವ ಎಂಎಸ್‌ಐಎಲ್ ಮದ್ಯದಂಗಡಿಯನ್ನು ರದ್ದುಪಡಿಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸನ್ನದುದಾರರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಹೊರತು ಗ್ರಾಮಸ್ಥರ ಪರ ಸ್ಪಂದಿಸುವ ಕೆಲಸ ಮಾಡಿಲ್ಲ. ಕ್ಷೇತ್ರದ ಶಾಸಕರು, ಸಂಸದರು, ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಕೂಡ ಬೇಡ ಎಂದು ಹೇಳಿದ್ದಾರೆ. ಮದ್ಯದಂಗಡಿ ರದ್ದು ಪಡಿಸುವ ತನಕ ನಿರಂತರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಮದ್ಯದಂಗಡಿ ಆರಂಭದಿಂದ ಗ್ರಾಮಕ್ಕೆ ಒಳ್ಳೆಯದು ಆಗಲ್ಲ. ಇಲ್ಲಿ ಅಂಗಡಿ ತೆರೆಯಲು ಬಿಡಲ್ಲ. ಇಲ್ಲಿ ಸಂಜೆ ವೇಳೆಯಲ್ಲಿ ಜಿಂಕೆ, ಕಾಡುಪ್ರಾಣಿ ಓಡಾಡುತ್ತವೆ.ಮಹಿಳೆಯರ ಸುರಕ್ಷತೆ, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಶೈಕ್ಷಣಿಕ ಅಭಿವೃದ್ಧಿಗೆ ಅಡ್ಡಿ, ಅಪಘಾತಗಳ ಹೆಚ್ಚಳ, ನೆಮ್ಮದಿ ಹಾಳು ಮಾಡುವ ಕಾರಣಗಳಿಗಾಗಿ ಈ ಅಂಗಡಿ ತೆರೆಯಬಾರದು ಎಂದು ಆಗ್ರಹಿಸಿದರು.
ಭೇಟಿ: ಅಬ್ಕಾರಿ ಡಿವೈಎಸ್ಪಿ ಜಯದೇವು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಕಳೆದ 6 ತಿಂಗಳ ಹಿಂದೆ ಅಂಗಡಿ ಆರಂಭವಾಗಬೇಕಿತ್ತು. ಸಾರ್ವಜನಿಕರ ದೂರನ್ವಯ ಆರಂಭ ಮಾಡಿರಲಿಲ್ಲ. ಇಂದು ಗ್ರಾಮಸ್ಥರು ವಿರೋಧ ವ್ಯಕ್ತ ಪಡಿಸಿದ್ದೀರಿ. ಇದನ್ನು ಇಲಾಖೆಯ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಂಗಡಿ ರದ್ದುಪಡಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾನಿರತರು ಪ್ರತಿಭಟನೆ ಕೈ ಬಿಟ್ಟರು.
ಪ್ರತಿಭಟನೆಯಲ್ಲಿ ಮುಖಂಡರಾದ ಪು.ಶ್ರೀನಿವಾಸನಾಯಕ, ತಾ.ಪಂ. ಮಾಜಿ ಸದಸ್ಯ ಮಹಾಲಿಂಗು, ಶ್ರೀನಿಧಿ. ರಾಜ್‌ಗೋಪಾಲ್, ಶಿವಣ್ಣ, ಗ್ರಾ.ಪಂ.ಸದಸ್ಯ ರಾಜಮ್ಮ, ಚಿಕ್ಕಣ್ಣ, ದೊರೆಸ್ವಾಮಿ, ಕಂದಹಳ್ಳಿ ನಾರಾಯಣ, ಮಧುಆಚಾರ್, ಕುಮಾರಸ್ವಾಮಿ, ಚನ್ನಕೇಶವ, ಮಹೇಶ್, ಸುರೇಶ್, ಗುರುಲಿಂಗಯ್ಯ, ಸೋಮಶೇಖರ್, ರಾಜೇಶ್, ಪರಮೇಶ ಇತರರು ಭಾಗವಹಿಸಿದ್ದರು.