ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಿ : ಜಿಲ್ಲಾಧಿಕಾರಿ ಶ್ರೀರೂಪ

ಚಾಮರಾಜನಗರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಲು ಬಂಜಾರ ಸಮುದಾಯ ಮುಂದಾಗುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸಲಹೆ ಮಾಡಿದರು.

  ಚಾಮರಾಜನಗರ ತಾಲೂಕಿನ ಮೂಕನಪಾಳ್ಯದಲ್ಲಿರುವ ಲಕ್ಷ್ಮೀದೇವಿ ಬಂಜಾರ ರಂಗಮಂದಿರದಲ್ಲಿಂದು ಸಂತ ಸೇವಾಲಾಲ್ ಜಯಂತಿ ಅಂಗವಾಗಿ ಬಂಜಾರ ಸಂಸ್ಕøತಿ ಮತ್ತು ಭಾಷಾ ಅಕಾಡಮಿ ವತಿಯಿಂದ ಆಯೋಜಿಸಲಾಗಿದ್ದ ಸಂತ ಶ್ರೀ ಸೇವಾಲಾಲ್ ತತ್ವ ಆದರ್ಶಗಳ ಚಿಂತನ-ಮಂಥನ ಕಾರ್ಯಕ್ರಮ ಉದ್ಘಾಟಿಸಿ, ಸಂತ ಸೇವಾಲಾಲ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು. 

  ಸಂತ ಸೇವಾಲಾಲ್ ಅವರು ಆಧ್ಯಾತ್ಮಿಕತೆಯ ಮೂಲಕ ಸಮಾಜ, ಸಮುದಾಯದ ಉನ್ನತಿಗೆ ಬೆಳಕು ಚೆಲ್ಲಿದ ಪವಾಡ ಪುರುಷರು ಆಗಿದ್ದಾರೆ. ಮನುಷ್ಯ ಜನ್ಮ ಸಾರ್ಥಕತೆಗೆ ಸಂತ ಸೇವಾಲಾಲರ ಆದರ್ಶ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ. ಪಾನಮುಕ್ತ ಸಮಾಜ ನಿರ್ಮಾಣ, ಮಹಿಳೆಯರಿಗೆ ಸಮಾನತೆ ತತ್ವಗಳನ್ನು ಇಡೀ ಮಾನವ ಕುಲಕ್ಕೆ ಮನದಟ್ಟು ಮಾಡಿಕೊಟ್ಟ ಸಂತ ಸೇವಾಲಾಲರು ಮಾದರಿಯಾಗಿದ್ದಾರೆ ಎಂದರು.

  ಇದು ಸ್ಪರ್ಧಾತ್ಮಕ ಪ್ರಪಂಚವಾಗಿದ್ದು, ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಉತ್ತಮ ಜೀವನ ಕಟ್ಟಿಕೊಳ್ಳಲು ಪೋಷಕರು ನೆರವಾಗುವ ಮೂಲಕ ಆತ್ಮಸ್ಥೈರ್ಯ ವೃದ್ದಿಸುವ ಕೆಲಸ ಮಾಡಬೇಕು. ಸಮುದಾಯದ ಸಂಪ್ರಾದಾಯಿಕ ಕಲೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ಬಂಜಾರ ಸಂಸ್ಕøತಿ ಉಳಿವಿಗೆ ಮುಂದಾಗಬೇಕು. ನಶಿಸುತ್ತಿರುವ ಕಸೂತಿ ಕಲೆಗಳ ಪುನಶ್ಛೇತನಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

  ಈ ಭಾಗದಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಪುಣಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಮೀನನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿಕೊಡುವುದು ಇಲ್ಲಿನ ಜನರ ಬಹುದಿನದ ಬೇಡಿಕೆಯಾಗಿದೆ. ಇದನ್ನು ಹಂತಹಂತವಾಗಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು. 

  ಮೈಸೂರು ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಡಾ. ಮಹದೇವಿಬಾಯಿ ಅವರು ಮಾತನಾಡಿ ಬಂಜಾರ ಸಮುದಾಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಮೆಟ್ಟಿನಿಂತು ಹೆಣ್ಣುಮಕ್ಕಳಿಗೆ ಎಸ್.ಎಸ್.ಎಲ್.ಸಿ ಮುಗಿದ ತಕ್ಷಣ  ಅಥವಾ 18 ವರ್ಷ ತುಂಬಿದ ಬಳಿಕ ಮದುವೆ ಮಾಡದೇ ಉನ್ನತ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ನೀಡಬೇಕು. ಮಹಿಳೆಯರು ಸ್ವಾವಲಂಬಿಗಳಾಗಬೇಕು. ಸಮಾಜ ಉನ್ನತಿಯತ್ತ ಸಾಗಬೇಕು ಎಂದರು.

  ಸಾಹಿತಿಗಳು ಹಾಗೂ ಬಂಜಾರ ಸಂಸ್ಕøತಿ ಮತ್ತು ಭಾಷಾ ಅಕಾಡಮಿಯ ಸದಸ್ಯ ಸಂಚಾಲಕರಾದ ಜಿ. ಪಳನಿಸ್ವಾಮಿ ಜಾಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಬಂಜಾರ ಸಮುದಾಯದ ಸಂಸ್ಕøತಿ ಹಾಗೂ ಭಾಷೆಯ ಉಳಿವಿಗಾಗಿ ಸರ್ಕಾರವು ಅಕಾಡೆಮಿ ಸ್ಥಾಪಿಸಿ ಪ್ರೋತ್ಸಾಹಿಸುತ್ತಿದೆ. ರಾಜ್ಯದ ಉದ್ದಗಲಕ್ಕೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮುದಾಯದ ಜಾಗೃತಿಗಾಗಿ ಅಕಾಡೆಮಿ ಕಾರ್ಯಪ್ರವೃತ್ತವಾಗಿದೆ ಎಂದರು.

  ಇದೇ ವೇಳೆ ಬಂಜಾರ ಸಮುದಾಯದ ಮುಖಂಡರು ಜಮೀನನ್ನು ಕಂದಾಯ ಭೂಮಿಯಾಗಿ ಪರಿವರ್ತಿಸುವುದು, ಸ್ಮಶಾನಕ್ಕೆ ಭೂಮಿ ಮಂಜೂರು, ಜಿಲ್ಲಾಕೇಂದ್ರದಲ್ಲಿ ಬಂಜಾರ ಭವನ ನಿರ್ಮಾಣ, ಸಂಚಾರಿ ಆಂಬುಲೆನ್ಸ್, ಕಾಡುಪ್ರಾಣಿಗಳ ಹಾವಳಿ ತಡೆಯಲು ಗ್ರಾಮ ಹಾಗೂ ಜಮೀನುಗಳಿಗೆ ರೈಲುಕಂಬಿ ಬೇಲಿ ಅಳವಡಿಸುವಿಕೆ ಸೇರಿದಂತೆ ಇನ್ನಿತರೆ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ಮನವಿ ಸಲ್ಲಿಸಿದರು.      

  ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಎನ್. ರಾಜು, ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷರಾದ ಪಿ. ಕುಮಾರ್‍ನಾಯಕ್, ಸಂಶೋಧಕರಾದ ಡಾ. ಗೋವಿಂದಸ್ವಾಮಿ, ಯುವ ಚಿಂತಕರಾದ ಯೋಗೇಶ್‍ನಾಯಕ್, ಮೂಡಳ್ಳಿಯ ಹವ್ಯಾಸಿ ಬಳಗದ ಮೇಗ್ಯನಾಯಕ್, ಪಿ.ಎ.ಸಿ.ಸಿ. ಸಹಕಾರ ಬ್ಯಾಂಕ್ ನಿರ್ದೇಶಕರಾದ ಪಿ. ಗಣೇಶ್‍ನಾಯಕ್, ಬಾಲಾಜಿನಾಯಕ್, ಗೋರ್ ಸಂಚಾಲಕರಾದ ಶಂಕರ್‍ನಾಯಕ್, ಕರ್ನಾಟಕ ಪ್ರದೇಶ ಬಂಜಾರ ಸಮಾಜ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಆರ್. ಶಿವಾಜಿ, ಪುಣಜನೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಣಿನಾಯಕ್, ಉಪಾಧ್ಯಕ್ಷರಾದ ಉಮಾಶಂಕರ್, ಗುರುನಾಯಕ್, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ ರಾಮಕೃಷ್ಣ, ಮುಖಂಡರಾದ ಶಿವರಾಜುನಾಯಕ್, ಉಲ್ಲೇಶ್‍ನಾಯಕ್, ನಾಗೇಶ್‍ನಾಯಕ್, ನಾಗನಾಯಕ್, ವೀರಯ್ಯನಪುರದ ಶಿವುನಾಯಕ್, ರವಿನಾಯಕ್, ಮಹದೇವನಾಯಕ್, ಉಲ್ಲೇಶ್ ನಾಯಕ್, ನಾಗನಾಯಕ್, ಗೋವಿಂದ ನಾಯಕ್, ಲಕ್ಷ್ಮಣ ನಾಯಕ್, ಡಾ. ಮೋಹನ್, ಚಂದ್ರು ನಾಯಕ್, ಯೋಗೇಶ್, ಸಾಗರ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *