ವಿದ್ಯಾರ್ಥಿಗಳಿಗೆ ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಮಂಜುನಾಥ ಪ್ರಸನ್ನ ಕಿವಿಮಾತು

ಚಾಮರಾಜನಗರ: ಸತತ ಅಭ್ಯಾಸದಿಂದ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಲು ಸಾಧ್ಯ ಆದ್ದರಿಂದ ವಿದ್ಯಾರ್ಥಿಗಳು ಓದಲು ದಿನದಲ್ಲಿ ಕನಿಷ್ಠ 6 ಗಂಟೆಯನ್ನು ಮೀಸಲಿಡಿ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಸಿ.ಮಂಜುನಾಥ ಪ್ರಸನ್ನ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಿನ ವತಿಯಿಂದ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಮತ್ತು ಸಾಂಸ್ಕøತಿಕ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮೀಪಿಸುತ್ತಿರುವ ಕಾರಣ ವಿದ್ಯಾರ್ಥಿಗಳು ತಮ್ಮ ಸಮಯವನ್ನು ವ್ಯರ್ಥಮಾಡದೆ ಓದಿನ ಕಡೆ ಹೆಚ್ಚು ಗಮನ ಹರಿಸಬೇಕು. ನಿರಂತರವಾದ ಅಭ್ಯಾಸದಿಂದ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಶಿಕ್ಷಣದ ಜೊತೆಗೆ ಆಟೋಟ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆಗಳಲ್ಲಿ ಪಾಲ್ಗೊಂಡು ವಿಜೇತರಾಗುವ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಕೀರ್ತಿಯನ್ನು ಸಂಪಾದಿಸಿ ಎಂದು ಸಲಹೆ ನೀಡಿದರು.
ಸರ್ಕಾರದಿಂದ ಹಾಗೂ ಜಿಲ್ಲಾಡಳಿತ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಶಿಕ್ಷಣ ವ್ಯವಸ್ಥೆ ಸುಧಾರಣೆಗೊಂಡಿದೆ. ಉತ್ತಮ ಕಲಿಕಾ ವ್ಯವಸ್ಥೆ ಇದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ಕಾಲೇಜಿಗೆ ನೀಡಲಾಗಿದೆ. ಶಿಕ್ಷಣ ಇಲಾಖೆಯಿಂದಲೂ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು.

ಜಿಲ್ಲಾಧಿಕಾರಿಗಳಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಕ್ರೀಡಾ ಚಟುವಟಿಕೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗೌರವಿಸಿ ಎಂದು ತಿಳಿಸಿದ್ದಾರೆ. ಇದರಿಂದ ಮತ್ತಷ್ಟು ವಿದ್ಯಾರ್ಥಿಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಹುದು ಎಂಬ ಆಶಾಭಾವನೆ ಇದೆ ಎಂದರು.
ತಾವು ಕ್ರೀಡೆಗಳಲ್ಲಿ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸ್ಥಾನಗಳನ್ನು ಪಡೆದುಕೊಂಡರೆ ನಂತರ ರಾಷ್ಟ್ರಮಟ್ಟದಲ್ಲಿ ಗುರುತಿಸುತ್ತಾರೆ. ನಂತರ ದೇಶ ವಿದೇಶಗಳಲ್ಲೂ ಸಹ ತಮ್ಮ ಕ್ರೀಡಾ ಪ್ರದರ್ಶವನ್ನು ಸಹ ನೀಡಬಹುದು ಎಂದರು.
ರಾಸಾಯನ ಶಾಸ್ತ್ರದ ನಿವೃತ್ತ ಉಪನ್ಯಾಸಕ ಶ್ರೀಕಂಠಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯೆ, ಕ್ರೀಡೆ ಜೊತೆಗೆ ಶಿಸ್ತನ್ನು ರೂಢಿಸಿಕೊಳ್ಳಬೇಕು. ಉತ್ತಮ ಮಹನೀಯರ ಆದರ್ಶಗಳನ್ನು ಪಾಲಿಸಬೇಕು ಎಂದರು.
ಸ್ಟೂಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಎಂಬ ಮಾತಿದೆ. ಈ ಸಮಯದಲ್ಲಿ ನೀವು ವಿದ್ಯೆಯನ್ನು ಸರಿಯಾಗಿ ಕಲಿಯುವುದರೊಂದಿಗೆ ಮುಂದಿನ ಜೀವನವನ್ನು ಉಜ್ವಲವನ್ನಾಗಿಸಬಹುದು. ಜ್ಞಾನದ ಸಂಪತ್ತನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಗುರಿಗಳನ್ನು ಹಾಕಿಕೊಳ್ಳೇಕು. ಅದಕ್ಕೆ ತಕ್ಕಂತೆ ನಿಮ್ಮ ಜೀವನಶೈಲಿ ಹಾಗೂ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗಬೇಕು. ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳುವ ಮೂಲಕ ನಿಮ್ಮ ಗುರಿಯನ್ನು ಮುಟ್ಟುವ ತನಕವು ಶ್ರದ್ಧೆಯಿಂದಿರಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಸೋಮಣ್ಣ ಎಂ. ಅವರು ಮಾತನಾಡಿ, ವಿದ್ಯಾರ್ಥಿಗಳ ಪರೀಕ್ಷೆಗೆ ಇನ್ನೂ ಒಂದು ತಿಂಗಳ ಕಾಲಾವಕಾಶ ಇದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಈ ಸಮಯದಲ್ಲಿ ಬೇರೆ ಎಲ್ಲ ಚಟುವಟಿಕೆಗಳನ್ನು ಬದಿಗೊತ್ತಿ ಓದಿನ ಕಡೆ ಹೆಚ್ಚು ಗಮನ ಹರಿಸಿ ಎಂದರು.
ತಂದೆ, ತಾಯಂದಿರು ಕಷ್ಟ ಪಟ್ಟು ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಾರೆ. ಅವರ ಶ್ರಮಕ್ಕೆ ತಕ್ಕಂತೆ ನೀವು ಓದುವ ಮೂಲಕ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಹೊಂದುವುದೇ ಅವರಿಗೆ ಸಿಗುವಂತಹ ಪ್ರತಿಫಲ ಎಂದರು.
ಕಳೆದ ಬಾರಿ 21 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ. 3 ವಿದ್ಯಾರ್ಥಿಗಳು ಮೆಡಿಕಲ್, ಕೆಲವು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕ್ಷೇತ್ರಗಳಿಗೆ ಪಾದಾರ್ಪಣೆ ಮಾಡಿದ್ದಾರೆ. ಈ ಬಾರಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ತೇರ್ಗಡೆ ಹೊಂದುವ ಮೂಲಕ ಕಾಲೇಜಿಗೆ ಕೀರ್ತಿ ತರುವಂತಹ ಕೆಲಸ ಮಾಡಿ ಎಂದರು.
ಕಾಲೇಜಿನ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ, ಜಿಲ್ಲಾಡಳಿತದಿಂದ ಹಾಗೂ ಶಿಕ್ಷಣ ಇಲಾಖೆಯಿಂದ ಹಾಗೂ ಸ್ಥಳೀಯ ಶಾಸಕರಿಂದಲೂ ಕೂಡಾ ಉತ್ತಮ ಸ್ಪಂದನೆ ದೊರತಿದೆ. ಇದರಿಂದ ಕೊಠಡಿ, ಶೌಚಾಲಯ, ನೀರಿನ ವ್ಯವಸ್ಥೆ, ಕಾಂಪೌಂಡ್ ನಿರ್ಮಾಣ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಈ ಎಲ್ಲಾ ಮೂಲ ಸೌಕರ್ಯದೊಂದಿಗೆ ಉತ್ತಮ ಉಪನ್ಯಾಸಕ ವೃಂದವೂ ಇದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು ಎಂದರು.
ಕಬಡ್ಡಿ, ಕೋಕೋ, ವಾಲಿಬಾಲ್ ಪಂದ್ಯಾವಳಿ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿರುವ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ತೃತೀಯ ಬಹುಮಾನವನ್ನು ಪಡೆದಿರುವ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಹಾಸ್ ರನ್ನು ವಿಶೇಷವಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಖಲೀಂ ಉಲ್ಲಾಖಾನ್, ಉಪನ್ಯಾಸಕರಾದ ಮಧು, ರಾಮಕೃಷ್ಣ, ರಂಗಸ್ವಾಮಿ, ಮಹದೇವಸ್ವಾಮಿ, ಸುನಿಲ್‍ದಾಸ್, ಸವಿತಾ, ಲಕ್ಷ್ಮಣ್, ಶೀಲಾ, ಮಾದಪ್ಪ, ಪ್ರೇಮಾ ಹಾಗೂ ಅತಿಥಿ ಉಪನ್ಯಾಸಕರು ಹಾಗೂ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದರು.