ಚಾಮರಾಜನಗರ, ಫೆಬ್ರವರಿ 13 (ಕರ್ನಾಟಕ ವಾರ್ತೆ):- ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಗಮನಹರಿಸಿ ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಜ್ಜುಗೊಳಿಸುವಂತೆ ಶಿಕ್ಷಕರು ಕ್ರಮ ತೆಗೆದುಕೊಳ್ಳಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿಂದು ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಸಂಬಂಧ ಶಾಲೆಗಳ ಮುಖ್ಯಶಿಕ್ಷಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈಗಾಗಲೇ ನಡೆಸಲಾಗಿರುವ ಎರಡು ಹಂತದ ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿರುವ ವಿದ್ಯಾರ್ಥಿಗಳನ್ನು ಕೇಂದ್ರಿಕರಿಸಿ ವಿಶೇಷ ತರಗತಿಗಳನ್ನು ನಡೆಸಬೇಕು. ಯಾವ ವಿಷಯದಲ್ಲಿ ವಿದ್ಯಾರ್ಥಿಗಳು ಹಿಂದೆ ಉಳಿದಿದ್ದಾರೆ ಎಂಬ ಬಗ್ಗೆ ತಿಳಿದು ಅವರಿಗೆ ಬೆಳಿಗ್ಗೆ ಹಾಗೂ ಸಂಜೆಯ ಅವಧಿಯಲ್ಲಿ ಹೆಚ್ಚುವರಿ ತರಗತಿಗಳನ್ನು ಏರ್ಪಡಿಸಿ ವಿಷಯ ಬೋಧನೆ ಮನವರಿಕೆ ಮಾಡಿಕೊಡಬೇಕು. ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮವಾಗಲು ವಿದ್ಯಾರ್ಥಿಗಳಿಗೆ ಉಳಿದಿರುವ ಸಮಯದಲ್ಲಿ ವಿಶೇಷ ಕಲಿಕಾ ಕ್ರಮಗಳ ಮೂಲಕ ಸಜ್ಜುಗೊಳಿಸಬೇಕು ಎಂದರು.
ವಸತಿ ಶಾಲೆ, ಹಾಸ್ಟೆಲ್ ಗಳಲ್ಲಿ ವಿಶೇಷ ಬೋಧನೆ ತರಗತಿಗಳನ್ನು ಮಾಡಬೇಕು. ವಸತಿ ಶಾಲಾ ಶಿಕ್ಷಕರು ಕಡ್ಡಾಯವಾಗಿ ಶಾಲೆಯಲ್ಲಿಯೇ ಉಳಿದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು. ಹಾಸ್ಟೆಲ್ ವಾರ್ಡನ್ ಗಳು ಮಕ್ಕಳ ಕಲಿಕೆ ಬಗ್ಗೆ ನಿರಂತರವಾಗಿ ಗಮನಿಸಬೇಕು. ಯಾವುದೇ ಸಮಸ್ಯೆಗಳು ಇದ್ದರೆ ಕೂಡಲೇ ಗಮನಕ್ಕೆ ತರುವಂತೆ ಸಿಇಒ ಅವರು ತಿಳಿಸಿದರು.
ಶಾಲೆಗಳಲ್ಲಿ ಮಕ್ಕಳು ಗೈರು ಹಾಜರಾದರೆ ಕೂಡಲೇ ಪೋಷಕರ ಮನೆಗೆ ತೆರಳಿ ವಿಚಾರಣೆ ಮಾಡಬೇಕು. ಪೋಷಕರ ಸಭೆಗಳನ್ನು ಕರೆದು ವಿದ್ಯಾರ್ಥಿಗಳ ಅಧ್ಯಯನ, ಪರೀಕ್ಷಾ ಸಿದ್ದತೆ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳನ್ನು ಉತ್ತಮ ಫಲಿತಾಂಶಕ್ಕೆ ಈಗಿನಿಂದಲೇ ಉತ್ತೇಜಿಸಬೇಕು. ನೋಡಲ್ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಹೇಗೆ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುತ್ತಿದ್ದಾರೆ ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು ಎಂದರು.
ಹಬ್ಬ, ಇನ್ನಿತರ ವಿಶೇಷ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಗೈರು ಹಾಜರಾದರೆ ಅಂತಹ ವಿದ್ಯಾರ್ಥಿಗಳಿಗೆ ಪಠ್ಯ ಕ್ರಮ ಪೂರ್ಣವಾಗಲು ವಿಶೇಷ ತರಗತಿಗಳನ್ನು ಕೈಗೊಂಡು ಸಂಪೂರ್ಣವಾಗಿ ಪರೀಕ್ಷೆಗೆ ಸಿದ್ದಗೊಳಿಸಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಠಿಯಿಂದ ಶಿಕ್ಷಕರು ಹೆಚ್ಚು ಪರಿಶ್ರಮವಹಿಸಿ ವಿದ್ಯಾರ್ಥಿಗಳ ಕಲಿಕೆಗೆ ಉಳಿದಿರುವ ಸಮಯದಲ್ಲಿ ಮಾರ್ಗದರ್ಶನ, ಪಾಠ ಪ್ರವಚನ ಕೈಗೊಂಡು ಫಲಿತಾಂಶದ ಗಮನಾರ್ಹ ಸಾಧನೆಗೆ ಮುಂದಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರ ಪಾಟೀಲ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಕಾಶಿನಾಥ್ ಸಭೆಯಲ್ಲಿ ಉಪಸ್ಥಿತರಿದ್ದರು.
Like this:
Like Loading...
Related