ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ೬ ಗಡಿಗಳಿದ್ದು, ಎಲ್ಲ ಗಡಿಗಳಲ್ಲೂ ವಾಹನಗಳನ್ನು ಕಡ್ಡಾಯ ತಪಾಸಣೆ ಮಾಡುವ ಮೂಲಕ ವಿಶೇಷ ನಿಗಾ ವಹಿಸುವ ಜೊತೆಗೆ ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್ಪಿ ಮುತ್ತುರಾಜು ಎಂ. ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ ಹೊರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಗಡಿಗಳಲ್ಲೂ ಎಐ ಕ್ಯಾಮರಾಗಳನ್ನು ಅಳವಡಿಸಿ, ಎಲ್ಲಾ ಸರಕು ಸಾಗಣೆ ವಾಹನಗಳನ್ನು ೨೪ ಗಂಟೆಯೂ ಕಡ್ಡಾಯವಾಗಿ ತಪಾಸಣೆ ಮಾಡುತ್ತಿದ್ದೇವೆ. ಅಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯಬಾರದು. ಅದಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳಿಗೆ ಯುವ ಜನತೆ ಬಲಿಯಾಗುತ್ತಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರ ಆಶಯದಂತೆ ಚಾಮರಾಜನಗರ ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಮಾಡುವುದು ನನ್ನ ಧ್ಯೇಯವಾಗಿದೆ. ಈ ಹಿನ್ನಲೆಯಲ್ಲಿ ಮಾದಕ ದ್ರವ್ಯ ಬೆಳೆಯೋದಾಗಲಿ, ಸಾಗಾಣಿಕೆ’ ಮಾಡುವುದಾಗಲಿ, ಸೇವನೆ ಮಾಡುವುದಾಗಲಿ ಅಕ್ಷಮ್ಯ ಅಪರಾಧವಾಗಿದೆ. ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ ಎಂದರು.
ಹಿರಿಯ ಜೀವಿಗಳಿಗೆ ಆಸರೆ: ಜಿಲ್ಲೆಯಾದ್ಯಂತ ಒಂಟಿಯಾಗಿ ಜೀವಿಸುತ್ತಿರುವ ಹಿರಿಯರನ್ನು ಗುರುತಿಸಿ ಅವರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಹ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳ ನಿರ್ವಹಣೆಯನ್ನು ಬಲಪಡಿಸಲಾಗಿದ್ದು, ಸಮಾಜದಲ್ಲಿ ಕೋಮು ಸೌಹಾರ್ಧತೆಯನ್ನು ಹಾಳು ಮಾಡುವ ಉದ್ದೇಶದಿಂದ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಯನ್ನು ಹರಡುವವರ ವಿರುದ್ಧ ಸುಮೊಟೋ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಚಾರ ನಿಯಮ ಉಲ್ಲಂಘಿನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಫುಟ್ಪಾತ್ ತೆರವು, ಪಾದಾಚಾರಿಗಳಿಗೆ ಅನುವು ಮಾಡಲು ಹಾಗೂ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯು ಶೇ. ೫೦ಅರಣ್ಯ ಪ್ರದೇಶವನ್ನು ಹೊಂದಿದ್ದು..ಮಾನವ -ಪ್ರಾಣಿ ಸಂಘರ್ಷದಿಂದ ತಕ್ಷಣಕ್ಕೆ ಕಾನೂನು ಸುವ್ಯವಸ್ಥೆ ಸಮಸ್ಯೆ ಬರುತ್ತದೆ. ಅದಕ್ಕೋಸ್ಕರ ನಾವೂ ಜಿಲ್ಲಾಡಳಿತದ ಜೊತೆ, ಅರಣ್ಯ ಇಲಾಖೆಯವರ ಜೊತೆ ಅನೇಕ ಸಭೆ ಮಾಡಲಾಗಿದೆ. ಅಲ್ಲದೆ ನಮ್ಮ ಡಿಜಿ, ಐಜಿ ಅವರು ಕೂಡ ಮಾನವ-ಪ್ರಾಣಿ ಸಂಘರ್ಷದಲ್ಲಿ ಏನು ತಕ್ಷಣಕ್ಕೆ ಕ್ರಮಕೈಗೊಳ್ಳಬೇಕು, ಯಾವ ಇಲಾಖೆಯ ಜೊತೆಯೊಂದಿಗೆ ಸಹಕಾರ ತೆಗೆದುಕೊಳ್ಳಬೇಕು ಎಂದು ಒಂದು ಸ್ಕ್ಯಾಂಡಿಂಗ್ ಆರ್ಡರ್ ಕೂಡ ಇದೆ. ಪ್ರಕಾರ ಈಗಾಗಲೇ ಎಲ್ಲ ಮಾನವ- ಪ್ರಾಣಿ ಸಂಘರ್ಷ ನಿಯಂತ್ರಿಸಲು ಒತ್ತು. ನೀಡಲಾಗಿದೆ ಎಂದರು.
ನಮ್ಮ ಜಿಲ್ಲೆಯಲ್ಲಿ ಸೇವೆ ಮಾಡುತ್ತಿರುವುದು ತುಂಬಾ ಖುಷಿ : ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು ವರ್ಷಗಳ ಒಡನಾಟವಿದೆ. ಜಿಲ್ಲೆಯವರಾಗಿರುವುದರಿಂದ ಈ ಜಿಲ್ಲೆಯಲ್ಲಿ ಕೆಲಸ ಮಾಡುಲು ತುಂಬಾ ಖುಷಿಯಾಗುತ್ತದೆ. ಏಕೆಂದರೆ ಮಾನಸಿಕವಾಗಿ ಇದೆ ಜಿಲ್ಲೆಯವನು ಎಂಬುವುದು ಒಂದು ತೃಪ್ತಿ ಇದೆ. ಈ ಜಿಲ್ಲೆಯು ತುಂಬ ಚಿರಪರಿಚಿತವಾದ ಜಿಲ್ಲೆಯಾಗಿದ್ದು, ಹಿಂದುಳಿದ ಜಿಲ್ಲೆಯ ಜನರಿಗೆ ಒಂದು ಒಳ್ಳೆಯ ಸೇವೆ ಮಾಡುಬಹುದು, ಇಲ್ಲಿಯ ಜನರಿಗೆ ತುಂಬಾ ಹೆಚ್ಚು ಹೆಚ್ಚು ಸೇವೆ ಮಾಡುವುದುಕ್ಕೆ ಅವಕಾಶಗಳಿವೆ. ಇದು ಬಹಳ ಖುಷಿಯಾಯಿತು ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದಲಿಂಗಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್ ಇದ್ದರು.