ಗ್ಯಾರಂಟಿ ಅನುಷ್ಠಾನದಲ್ಲಿ ಮೂಲ ಬಡವರಿಗೆ ತೊಂದರೆಯಾಗಬಾರದು : ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು

ಚಾಮರಾಜನಗರ: ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಮೂಲ ಬಡವರಿಗೆ ತೊಂದರೆ ಉಂಟಾಗದಂತೆ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಎಚ್.ವಿ. ಚಂದ್ರು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

  ನಗರದ ಹಳೇ ಕೆ.ಡಿ.ಪಿ. ಸಭಾಂಗಣದಲ್ಲಿಂದು ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

  ಬಡವರ, ಮಹಿಳೆಯರ ಅರ್ಥಿಕ ಸ್ವಾವಲಂಬನೆಗಾಗಿ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಸಂಬಂಧಪಟ್ಟ ಜಿಲ್ಲಾಮಟ್ಟದ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಹೋಬಳಿ, ಪಂಚಾಯಿತಿಮಟ್ಟದಲ್ಲಿ ಗ್ಯಾರಂಟಿ ಸಮಿತಿ ಸಭೆಗಳನ್ನು ನಡೆಸಿದ ಪರಿಣಾಮವಾಗಿ ತಳಮಟ್ಟದ ಸಮಸ್ಯೆಗಳು ತಿಳಿಯುತ್ತಿವೆ. ಅನುಷ್ಟಾನದಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆಗಳಿಂದ ಅಧಿಕಾರಿಗಳು ಗೊಂದಲಕ್ಕೆ ಒಳಗಾಗದೇ ಇನ್ನಷ್ಟು ಪರಿಣಾಮಕಾರಿಯಾಗಿ ಯೋಜನೆಗಳನ್ನು ತಲುಪಿಸಲು ಮುಂದಾಗಬೇಕು ಎಂದರು. 

  ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಲಭ್ಯವಾಗಬೇಕು. ಪ್ರತಿಸಭೆಗೂ ಕಳೆದ ಸಭೆಯ ಅನುಪಾಲನಾ ವರದಿಗಳನ್ನು ಅಧಿಕಾರಿಗಳು ತರಬೇಕು. ಗ್ರಾಮ ಪಂಚಾಯಿತಿ ಮತ್ತು ಹೋಬಳಿಮಟ್ಟದಲ್ಲಿ ನಡೆಯುವ ಗ್ಯಾರಂಟಿ ಯೋಜನೆಗಳ ಸಭೆ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿರುವುದರಿಂದ ಪ್ರತಿತಿಂಗಳ 5ರೊಳಗೆ ಸಲ್ಲಿಸಬೇಕು. ಜಿಲ್ಲೆಯ ಯಾವುದೇ ಭಾಗದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿ, ಕಾರ್ಯಕ್ರಮಗಳಿಗೆ ಗ್ಯಾರಂಟಿ ಸಮಿತಿ ಸದಸ್ಯರನ್ನು ಆಹ್ವಾನಿಸಬೇಕು. ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧ್ಯಕ್ಷರಾದ ಚಂದ್ರು ತಿಳಿಸಿದರು.

 ಗೃಹಲಕ್ಷ್ಮೀ ಯೋಜನೆಯಡಿ ಆದಾಯ ತೆರಿಗೆ ಪಾವತಿಸುವ ಫಲಾನುಭವಿಗಳ ಪಟ್ಟಿಗೆ ಚಿಂದಿ ಹಾಯುವವರು, ಹಂದಿಜೋಗಿಗಳು ಸೇರಿರುವುದು, ಕೆಲ ಫಲಾನುಭವಿಗಳಿಗಳಿಗೆ 2-3 ತಿಂಗಳಿಂದ ಹಣ ಪಾವತಿಯಾಗದಿರುವುದು, ಯಜಮಾನಿ ಮರಣ ಹೊಂದಿದರೆ ಆ ಮನೆಯ ಹಿರಿಯ ಸದಸ್ಯರನ್ನು ಯೋಜನೆಗೆ ಒಳಪಡಿಸಲು ಕುಟುಂಬ ಐ.ಡಿ ಮತ್ತು ಇ.ಡಿ.ಸಿ.ಎಸ್ ನಲ್ಲಿ ತಾಂತ್ರಿಕ ಸಮಸ್ಯೆಯಾಗಿರುವುದು, ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ ಚಾಲಕರು ಅಜಾಗರೂಕತೆ ವಹಿಸುವುದು, ಚಾಲನಾ ಸಮಯದಲ್ಲಿ ಮೊಬೈಲ್ ಬಳಕೆ, ಬಸ್‍ಗಳಲ್ಲಿ ಸಿ.ಸಿ.ಟಿ.ವಿ ಅಳವಡಿಕೆ, ನಿಗದಿತ ಸ್ಥಳಗಳಲ್ಲಿ ಬಸ್‍ಗಳ ನಿಲುಗಡೆಯಾಗದಿರುವುದು ಸಭೆಯಲ್ಲಿ ಪ್ರಸ್ತಾಪವಾಯಿತು.

  ಅನ್ನಭಾಗ್ಯ ಯೋಜನೆಯಡಿ ಪಡಿತರ ಎತ್ತುವಳಿ ಸಂದರ್ಭದಲ್ಲಿ ಬಿಲ್ಲಿಂಗ್ ಪ್ರಕ್ರಿಯೆ ತಡವಾಗುತ್ತಿರುವುದು, ನ್ಯಾಯಬೆಲೆ ಮಾಲೀಕರ ಸಭೆಗೆ ಗ್ಯಾರಂಟಿ ಸಮಿತಿ ಸದಸ್ಯರನ್ನು ಆಹ್ವಾನಿಸದಿರುವುದು, ಯುವನಿಧಿ ಯೋಜನೆಯಡಿ ಜಿಲ್ಲೆಯ ಯಾವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ ಎಂಬ ಮಾಹಿತಿ ಪಟ್ಟಿ ಒದಗಿಸದಿರುವುದು, ಗೃಹಜ್ಯೋತಿ ಯೋಜನೆಗೆ ನೋಂದಣಿಯಾಗಿರುವ ಫಲಾನುಭವಿಗಳಿಂದ (ಭದ್ರತಾ ಠೇವಣಿ) ಸೆಕ್ಯೂರಿಟಿ ಡೆಫೋಸಿಟ್ ಸಂಗ್ರಹಿಸುವುದು ಸೇರಿದಂತೆ ಹತ್ತು-ಹಲವು ಸಮಸ್ಯೆಗಳನ್ನು ಸಭೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರು ಪ್ರಸ್ತಾಪಿಸಿದರು. ಸದಸ್ಯರು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿ ಶೀಘ್ರವಾಗಿ ಪರಿಹರಿಸುವಂತೆ ಸಂಬಂಧಪಟ್ಟ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧ್ಯಕ್ಷರು ಸೂಚಿಸಿದರು.

  ಇದೇ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಮುಂದಿನ ತಿಂಗಳಲ್ಲಿ ಜಿಲ್ಲೆಯಲ್ಲಿ ಉದ್ಯೋಗ ಮೇಳ ನಡೆಯಲಿದ್ದು, ಸಾಕಷ್ಟು ಕೈಗಾರಿಕೊದ್ಯಮಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ. ಮೇಳದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿಕೆಗೆ ಅದ್ಯತೆ ನೀಡಲಾಗುವುದು. ಗೃಹಲಕ್ಷ್ಮೀ ಯೋಜನೆಯ ತಾಂತ್ರಿಕ ಸಮಸ್ಯೆ ಕುರಿತು ಮಹಿಳಾ ಮತ್ತು ಮಕ್ಕಳ ಇಲಾಖೆಯ Pಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.  

  ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಗ್ಯಾರಂಟಿ ಸಮಿತಿಯ ಚಾಮರಾಜನಗರ ತಾಲೂಕು ಅಧ್ಯಕ್ಷರಾದ ಸೋಮೇಶ್ವರ್, ಕೊಳ್ಳೇಗಾಲ ತಾಲೂಕು ಅಧ್ಯಕ್ಷರಾದ ರಾಜೇಂದ್ರ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷರಾದ ಎಚ್.ಜಿ. ಉಮಾಪತಿ, ಸದಸ್ಯರಾದ ಕೆ.ಬಿ. ಚಿನ್ನಸ್ವಾಮಿ, ಪ್ರದೀಪ್, ಪ್ರಭು, ನಾಗೇಂದ್ರಮೂರ್ತಿ, ರವಿ, ಸಿದ್ದರಾಜು, ಭಾಗ್ಯ, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *