“ಎಳ್ಳು ಬೆಲ್ಲ” ಹಂಚುವ “ಸಂಕ್ರಾಂತಿ” ಹಬ್ಬ ಬಂದಿತು. ಹರ್ಷ ತಂದಿತು!

  • ಪ್ರಕೃತಿಯ, ಸುಗ್ಗಿಯ ಸಡಗರ ಸಂಭ್ರಮ: “ಎಳ್ಳು ಬೆಲ್ಲ” ಹಂಚುವ “ಸಂಕ್ರಾಂತಿ” ಹಬ್ಬ ಬಂದಿತು. ಹರ್ಷ ತಂದಿತು!
  • ಎಳ್ಳು- ಬೆಲ್ಲ ತಿಂದು ಒಳ್ಳೆ ಮಾತಾಡೋಣ!
ಕ್ಯಾಲೆಂಡರ್ ನ ಹೊಸ ವರ್ಷ ಬಂದಾಯಿತು. ಈಗ ಹಿಂದುಗಳ ಪವಿತ್ರ ಹಬ್ಬವಾದ ಸಂಕ್ರಾಂತಿ ಬಂದಿದೆ. ಆಬಾಲವೃದ್ಧರಾದಿಯಾಗಿ ಈ ಹಬ್ಬ ಒಂದಲ್ಲ ಒಂದು ರೀತಿಯಲ್ಲಿ ಹೊಸತನವನ್ನು ನೀಡುತ್ತದೆ.
ಜೊತೆಗೆ ಹೊಸ ಸಂಕಲ್ಪಗಳಿಗೆ ನಾಂದಿಯಾಗುತ್ತದೆ. ಪ್ರತಿ ವರ್ಷ ಪುಷ್ಯ ಮಾಸದಲ್ಲಿ ಅಂದರೆ ಜನವರಿ 14 ಅಥವಾ 15ನೇ ತಾರೀಖಿನಂದು ಸಂಕ್ರಾಂತಿ ಹಬ್ಬ ಬರುತ್ತದೆ.
ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಸೂರ್ಯರಾದನೆಯ ಹಬ್ಬ ಇದಾಗಿದೆ. ಈ ಅಮೃತಘಳಿಗೆಯಲ್ಲಿ ಸೂರ್ಯನು ಮಕರ ರಾಶಿಯನ್ನು ಪ್ರವೇಶ ಮಾಡುವ ಸುದಿನ ಇದಾಗಿದೆ.
ಈ ಮಹತ್ವದ ಹಿನ್ನೆಲೆಯಲ್ಲಿ ಈ ಹಬ್ಬವನ್ನು "ಮಕರ ಸಂಕ್ರಾಂತಿ" ಹಬ್ಬವೆಂದು ಎಲ್ಲರೂ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.
ಹೊಂಬೆಳಕಿನ ದೇವತೆ ಎಂದೇ ಪ್ರಸಿದ್ಧವಾದ ಸೂರ್ಯದೇವನು ಭೂಮಧ್ಯ ರೇಖೆಗೆ ಅಭಿಮುಖವಾಗಿ ಸಂಚಾರ ಮಾಡುವ ಪರ್ವ ದಿನ. ಈ ಕಾಲವನ್ನೇ "ಉತ್ತರಾಯಣದ ಪುಣ್ಯಕಾಲ" ಎಂದು ಕರೆಯುತ್ತಾರೆ. 
ಈ ದಿನಕ್ಕೆ ಅತ್ಯಂತ ಪ್ರಸಿದ್ಧ ಕಥೆಗಳು ಇವೆ. ಅದರಲ್ಲೂ ಮಹಾಭಾರತದ ಒಂದು ಅತ್ಯುತ್ತಮ ಉದಾಹರಣೆಯ ಕಥೆಯೊಂದಿಗೆ ಈ ದಿನ ಬೆಸೆದುಕೊಂಡಿದೆ. ಇಚ್ಛಾಮರಣಿಯಾಗಿದ್ದ ಭೀಷ್ಮರು ಮಹಾಭಾರತದ ಯುದ್ಧ ನಡೆಯುವ ಸಂದರ್ಭದಲ್ಲಿ ಅರ್ಜುನ ಹೂಡಿದ್ದ ಮೈತುಂಬ ಬಾಣಗಳಿಂದ ಕೂಡಿದ ತನ್ನ ದೇಹ ದೊಂದಿಗೆ ನರಕ ಯಾತನೆ ಅನುಭವಿಸುತ್ತಿದ್ದರೂ ಕೂಡ ಉತ್ತರಾಯಣ ಪುಣ್ಯಕಾಲವಾದ ಈ ಸುದಿನ ಬರುವವರೆಗೂ ಕೂಡ ಅದನ್ನೆಲ್ಲ ಸಹಿಸಿಕೊಂಡು, ನಂತರದಲ್ಲಿ ತನ್ನ ಪ್ರಾಣತ್ಯಾಗ ಮಾಡಿದ್ದು ಜನಜನಿತವಾಗಿದೆ.    
ಆದುದರಿಂದಾಗಿ ಉತ್ತರಾಯಣ ಪುಣ್ಯಕಾಲಕ್ಕೆ ಬಹಳ ಮಹತ್ವ ವನ್ನು ನಾವು ಕೊಡುತ್ತೇವೆ.
ಈ ಮಕರ ಸಂಕ್ರಾಂತಿಗೆ ಮತ್ತೊಂದು ಪೌರಾಣಿಕ ಹಿನ್ನೆಲೆ ಇದೆ.

ಭಗೀರಥನು ಗಂಗೆಯನ್ನು ಭೂಮಿಗೆ ತರಲು ಅನೇಕ ಬಾರಿ ಸಾಹಸ ಮಾಡಿದ ಕಥೆ ಎಲ್ಲರಿಗೂ ಗೊತ್ತಿದೆ. ಶಿವನನ್ನು ಕುರಿತು ದೀರ್ಘ ತಪಸ್ಸು ಮಾಡಿದ ಭಗೀರಥನಿಗೆ ಶಿವನು ಕೊನೆಗೂ ಪ್ರತ್ಯಕ್ಷನಾಗಿ ತನ್ನ ಬೇಡಿಕೆಯಾದ ಗಂಗೆಯನ್ನು ಭೂಮಿಗೆ ಕಳುಹಿಸುತ್ತಾನೆ. ಆದುದರಿಂದ ಗಂಗೆಯು ಸಂಕ್ರಾಂತಿಯ ದಿನದಂದೇ ಚಕ್ರವರ್ತಿಯಾದ ಭಗೀರಥನನ್ನು ಅನುಸರಿಸಿ ಕಪಿಲ ಮುನಿಯ ಆಶ್ರಮದ ಮೂಲಕ ಸಾಗಿ ಸಮುದ್ರವನ್ನು ಸೇರುತ್ತಾಳೆ.
ಮತ್ತೊಂದು ಹಿನ್ನೆಲೆಯೂ ಕೂಡ ಇದೆ. ಭಗವಾನ್ ಮಹಾವಿಷ್ಣು ತನಗೆ ಎದುರಾದ ರಾಕ್ಷಸರನ್ನು ಸಮ್ಮರಿಸಿ ದೇವಸುರ ಯುದ್ಧವನ್ನು ಸಂಕ್ರಾಂತಿಯ ದಿನದಂದೇ ಸಮಾಪ್ತಿ ಗೊಳಿಸಿದ ಎಂಬ ಕಥೆಯು ಕೂಡ ಇದೆ.
ಈ ಸಂಕ್ರಾಂತಿ ದಿನದಂದು ನದಿಗಳಲ್ಲಿ ಪವಿತ್ರ ಸ್ನಾನ ಮಾಡುವುದು ಎಂದರೆ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತದೆ. ಹಲವು ಪವಿತ್ರ ನದಿಗಳಲ್ಲಿ ಅಂದು ಜನ ಜಂಗುಳಿ ಹೆಚ್ಚಿರುತ್ತದೆ. ಎಲ್ಲರೂ ಕೂಡ ತಮ್ಮ ತಮ್ಮ ಇಷ್ಟಾರ್ಥ ದೇವರುಗಳನ್ನು ನೆನಪಿಸಿಕೊಂಡು, ತಮ್ಮ ಸಹ ಕುಟುಂಬದೊಂದಿಗೆ ಹೋಗಿ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ನಂತರ ಪೂಜಾ ಕೈಂಕರ್ಯವನ್ನು ನೆರವೇರಿಸಿಕೊಂಡು, ಸಕಲರಿಗೂ ಒಳ್ಳೆಯದಾಗಲಿ ಎಂದು ಸಂಕಲ್ಪ ಮಾಡುತ್ತಾರೆ.
ಅದರಲ್ಲೂ ಕರ್ನಾಟಕದಲ್ಲಿ ಮಾತ್ರ ಇದು ಸುಗ್ಗಿಯ ಹಬ್ಬವೆಂದೇ ಹೆಚ್ಚು ಪ್ರಸಿದ್ದಿ ಪಡೆದಿದೆ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಈ ಸಂಕ್ರಾಂತಿ ಹಬ್ಬವನ್ನು ಆಚರಿಸಿದರೂ ಕೂಡ ಕರ್ನಾಟಕದಲ್ಲಿ ಈ ಹಬ್ಬದ ಆಚರಣೆ ಮುಗಿಲು ಮುಟ್ಟಿರುತ್ತದೆ!.
ದೇಶಕ್ಕೆಲ್ಲ ಅನ್ನದಾತ ನಮ್ಮ ರೈತನಿಗೆ ಇದು ಅತ್ಯಂತ ಸಡಗರ ಸಂಭ್ರಮದ ಹಬ್ಬ ಇದಾಗಿದೆ. ಏಕೆಂದರೆ ಈ ಸಂಕ್ರಮಣ ಕಾಲದಲ್ಲಿ ತಾನು ಕಷ್ಟಪಟ್ಟು ಭೂಮಿಯನ್ನು ನಂಬಿ ಉತ್ತಿ ಬೆಳೆದ ದವಸ ಧಾನ್ಯಗಳು ತನ್ನ ಮನೆಯಲ್ಲಿ ಸಮೃದ್ಧಿಯಾಗಿ ತುಂಬಿರುತ್ತವೆ. ಆದುದರಿಂದಾಗಿ ಮನೆಯವರೆಲ್ಲರೂ ಒಟ್ಟಾಗಿ ಸೇರಿ ಈ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ
ಈ ಆಚರಣೆಯೊಂದಿಗೆ ತಾನು ಸಾಕಿದ ದನ ಕರುಗಳನ್ನು ಅಂದು ಬೆಳಿಗ್ಗೆ ಬೇಗನೆ ಎದ್ದು ಎಲ್ಲವನ್ನು ಚೆನ್ನಾಗಿ ತೊಳೆದು ವಿವಿಧ ಬಣ್ಣಗಳಿಂದ ಸಿಂಗರಿಸಿ, ವರ್ಣರಂಜಿತ ಹೂವುಗಳನ್ನು ಅಲಂಕರಿಸಿ ಪೂಜೆ ಮಾಡುತ್ತಾರೆ.
ಅದರಲ್ಲೂ ಎತ್ತುಗಳಿಗೆ ವಿಶೇಷವಾದ ಪೂಜೆಯನ್ನು ಮಾಡುತ್ತಾರೆ. ತನ್ನ ಆ ಕ್ಷಣದ ಸಂಭ್ರಮ ಸಡಗರಕ್ಕೆ ಮೂಲ ಕಾರಣ ಎತ್ತುಗಳು ಹೊಲವನ್ನು ಚೆನ್ನಾಗಿ ಉತ್ತಿದರ ಫಲವಾಗಿ ಸಮೃದ್ಧಿ ಬೆಳೆ ಬಂದು ರೈತನ ಬಾಳು ಹಸನಾಗಿರುವ ಆ ಕ್ಷಣದಲ್ಲಿ ಎಲ್ಲವನ್ನು ಕೂಡ ಅನ್ನದಾತ ರೈತ ನೆನಪಿಸಿಕೊಳ್ಳುವ ಸುದಿನ ಕೂಡ ಇದಾಗಿದೆ.
ಹಲವು ಕಡೆ ಸಿಂಗಾರಗೊಂಡ ದನ ಕರುಗಳು ಎತ್ತುಗಳನ್ನು ಊರ ಬೀದಿಯಲ್ಲಿ ಮೆರವಣಿಗೆ ಕೂಡ ಮಾಡುತ್ತಾರೆ. ಇನ್ನೂ ಕೆಲವರು ದೀಪಾವಳಿ ಹಬ್ಬದಂದು ದನಕರುಗಳ ಕೊಂಬುಗಳಿಗೆ ಬಣ್ಣ ಹಚ್ಚಿ, ವಿವಿಧ ಹೂಗಳಿಂದ ಸಿಂಗಾರ ಮಾಡಿ ಊರ ಬೀದಿಗಳ ತುಂಬೆಲ್ಲ ಓಡಾಡಿಸುತ್ತಾರೆ. ಜೊತೆಗೆ ಗೋಧೂಳಿ ಸಮಯದಲ್ಲಿ ದನಕರುಗಳು ತಮ್ಮ ಮನೆಯ ಮುಂದೆ ಬಂದಾಗ ಹುಲ್ಲು ಹಾಕಿ ಒನಕೆಯೊಂದಿಗೆ ಎಳ್ಳು ಕಡ್ಡಿ ಮೂರು ಮನೆ ಹುಲ್ಲು ಹಾಕಿ ಬೆಂಕಿ ಹಚ್ಚಿ ದನಗಳನ್ನು ದಾಟಿಸುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಾ ಮೊದಲೇ ಹೇಳಿದಂತೆ ದೀಪಾವಳಿ ಹಬ್ಬದಂದು ಕೂಡ ಹಲವು ಕಡೆ ಕಿಚ್ಚಾಯಿಸುತ್ತಾರೆ.
ಆದರೆ ಮಂಡ್ಯ, ಮೈಸೂರಿನ ಹಲವು ಭಾಗಗಳಲ್ಲಿ ಸಂಕ್ರಾಂತಿಯ ದಿನದಂದು ಕೂಡ ಊರಿನ ಬೀದಿಯ ಒಂದು ಪ್ರಮುಖ ಸ್ಥಳದಲ್ಲಿ ದೊಡ್ಡದಾಗಿ ಬೆಂಕಿಯನ್ನು ಹಚ್ಚಿಸಿ ಊರಿನವರೆಲ್ಲ ಸೇರಿ ಒಬ್ಬೊಬ್ಬರಾಗಿ ದನಗಳನ್ನು ಆ ಬೆಂಕಿಯ ಮೂಲಕ ಕಿಚ್ಚಾಯಿಸುತ್ತಾರೆ.
ಆ ಸಂಭ್ರಮಕ್ಕೆ ಎಲ್ಲೇ ಇರುವುದಿಲ್ಲ. ಎಲ್ಲರೂ ಕೂಡ ಒಟ್ಟಾಗಿ ಭಾಗವಹಿಸಿ ಸಂಭ್ರಮಿಸುತ್ತಾರೆ. ತಮ್ಮ ಶಕ್ತಿಯನುಸಾರ ಈ ದಿನ ಸಿಹಿ ಅನ್ನ, ಕಾರ ಅನ್ನ ಮಾಡಿ ನೈವೇದ್ಯ ಅರ್ಪಿಸುತ್ತಾರೆ.
ಇನ್ನೊಂದು ಸಂಭ್ರಮವೆಂದರೆ ಮಕ್ಕಳು ಸೇರಿದಂತೆ ಮನೆ ಮಂದಿಯಲ್ಲಾ ಆ ದಿನ ಎಣ್ಣೆ ಸ್ಥಾನ ಮಾಡಿ, ಹೊಸದಾಗ ಬಟ್ಟೆಯನ್ನು ತೊಟ್ಟು, ಅದರಲ್ಲೂ ಚಿಕ್ಕ ಮಕ್ಕಳು ಸೇರಿ ಮನೆಯಲ್ಲಿ ತಯಾರಿಸಿದ ವಿವಿಧ ಪದಾರ್ಥಗಳೊಂದಿಗೆ ಕೂಡಿದ ಎಳ್ಳು ಬೆಲ್ಲ ಮಿಶ್ರಣವನ್ನು ತೆಗೆದುಕೊಂಡು ಎಲ್ಲರಿಗೂ ಹಂಚುತ್ತಾರೆ.
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು ಎನ್ನುವಂತೆ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಇದನ್ನು ಎಳ್ಳು ಬೀರುವುದು ಎಂದೂ ಕೂಡ ಕರೆಯುತ್ತಾರೆ.
ಗ್ರಾಮೀಣ ಪ್ರದೇಶದಲ್ಲಿ ಎಳ್ಳು ಬೀರುವುದು ಒಂದು ರೀತಿಯಲ್ಲಿದ್ದರೆ, ನಗರ ಪ್ರದೇಶಗಳಲ್ಲಿ ಮತ್ತಷ್ಟು ಆಧುನಿಕ ವಸ್ತುಗಳಿಂದ ತಯಾರಿಸಿದ ಪದಾರ್ಥಗಳನ್ನು ತಟ್ಟೆಯಲ್ಲಿ ಹಾಕಿ ಕೆಲವರು ಉಡುಗೊರೆ ನೀಡುವುದರ ಜೊತೆಗೆ ತಮ್ಮ ಎಳ್ಳು ಬೀರುವ ಹಬ್ಬವನ್ನು ಚಿಕ್ಕ ಮಕ್ಕಳಾದಿಯಾಗಿ ಆಚರಿಸುತ್ತಾರೆ.
ಸಂಕ್ರಾಂತಿ ಹಬ್ಬ ಎಂದರೆ ಚುಮುಚುಮು ಚಳಿ ಇದ್ದೇ ಇರುತ್ತದೆ. ಜೊತೆಗೆ ಚಳಿಗಾಲದಲ್ಲಿ ಈ ಎಳ್ಳು ಬೆಲ್ಲ ಮಿಶ್ರಣದ ಪದಾರ್ಥಗಳನ್ನು ತಿನ್ನೋದರಿಂದ ಚರ್ಮದ ಕಾಂತಿ ಹೆಚ್ಚಲು, ರಕ್ಷಣೆ ಮಾಡಲು ಇದು ಪ್ರಕೃತಿಯ ನಿಯಮವಾಗಿದೆ.
ಕೆಲವು ಕಡೆ ಈ ದಿನದಂದೇ ಗಾಳಿಪಟವನ್ನು ಕೂಡ ವಿವಿಧ ವರ್ಣ ರಂಜಿತ ಅಲಂಕೃತಗೊಂಡ ಗಾಳಿಪಟವನ್ನು ಕೂಡ ಹಾರಿಸುತ್ತಾರೆ. ಹಲವು ಕಡೆ ಜಾನಪದ ಗೀತೆಗಳು ಸ್ಪರ್ಧೆ, ಭಜನೆ, ಜೊತೆಗೆ ಪ್ರವಚನ ಎಲ್ಲವೂ ಕೂಡ ಇರುತ್ತದೆ.
ಅವರವರ ಭಾವಕ್ಕೆ ಅವರವರ ಭುಕುತಿಗೆ ಎನ್ನುವಂತೆ ಹಲವು ಕಡೆ ಈ ಸಂಕ್ರಾಂತಿ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸುತ್ತಾರೆ.
ನಮ್ಮ ನಾಡು- ನುಡಿಯನ್ನು ಪ್ರತಿಬಿಂಬಿಸುವ ಅನೇಕ ಮನರಂಜನಾ ಆಟಗಳು ಕೂಡ ನಡೆಯುತ್ತವೆ. ಎಲ್ಲರೂ ಒಂದು ಕಡೆ ಸೇರಿಕೊಂಡು ಹಲವು ಸ್ಪರ್ಧೆಗಳನ್ನು ಆಯೋಜನೆ ಮಾಡಿ, ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವು ಕೂಡ ಹಲವು ಕಡೆ ನಡೆಯುತ್ತವೆ.
ಒಂದೊಂದು ಊರಿನಲ್ಲೂ ಒಂದೊಂದು ರೀತಿಯಲ್ಲಿ ಒಂದೊಂದು ಜಿಲ್ಲೆಯಲ್ಲಿ ಈ ಸಂಕ್ರಾಂತಿ ಹಬ್ಬವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಆಚರಿಸುತ್ತಾರೆ.
ಇನ್ನೊಂದು ಮುಖ್ಯವಾದ ಅಂಶವಿದ್ದರೆ ಮಕರ ಸಂಕ್ರಾಂತಿ ಎಂದು ಕೇರಳದ ಶಬರಿಮಲೆ ಸ್ವಾಮಿ ಬೆಟ್ಟದಲ್ಲಿ ಮಕರ ಜ್ಯೋತಿ ದರ್ಶನ ವಾಗುವ ದಿನವೂ ಕೂಡ ಆಗಿರುತ್ತದೆ.
ಒಂದು ರೀತಿಯಲ್ಲಿ ನಂಬಿಕೊಂಡು ಆಗಲಿಂದಲೂ ಕೂಡ ಆ ಜ್ಯೋತಿಯ ದರ್ಶನ ಪಡೆದ ಅನೇಕ ಭಕ್ತರು ಆ ದಿನ ಒಂದೆಡೆ ಸೇರಿರುತ್ತಾರೆ. ಆ ಗಳಿಗೆಗಾಗಿ ಎಲ್ಲರೂ ಕಾತುರದಿಂದ ಕಾಯುತ್ತಾರೆ.
ಇನ್ನು ತಮಿಳುನಾಡು ಪ್ರದೇಶಗಳಲ್ಲಿ ಈ ಹಬ್ಬವನ್ನು “ಪೊಂಗಲ್ ಹಬ್ಬ” ಎಂದು ಕೂಡ ಕರೆಯುತ್ತಾರೆ. ಮೂರರಿಂದ ನಾಲ್ಕು ದಿನಗಳವರೆಗೂ ಕೂಡ ಈ ಹಬ್ಬವನ್ನು ಆಚರಿಸುತ್ತಾರೆ.
ಜಲ್ಲಿಕಟ್ಟು ಎಂಬ ಗೂಳಿಗಳನ್ನು ಹಿಡಿಯುವ ಆಟೋ ಕೂಡ ಈ ಹಬ್ಬದಂದೆ ನಡೆಯುತ್ತದೆ. ಅಲ್ಲದೆ ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಈ ದಿನದಂದು ಗಾಳಿಪಟ ಆಚರಿಸುವುದು ಬಹಳ ವರ್ಷಗಳಿಂದಲೂ ಕೂಡ ನಡೆದು ಬಂದಿದೆ.
ಇದು ಜೊತೆಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಹೊರದೇಶಗಳನ್ನು ಕೂಡ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ. ಈ ಎಲ್ಲಾ ಹಬ್ಬದ ಸಡಗರ ಸಂಭ್ರಮವನ್ನು ನೋಡುತ್ತಿದ್ದರೆ ನನಗೆ ನಮ್ಮ ಬಾಲ್ಯದ ದಿನಗಳು ನೆನಪಾಗುತ್ತವೆ.
ನಾವು ಆಗ ಆಚರಿಸುತ್ತಿದ್ದ ಸಂಕ್ರಾಂತಿ ಹಬ್ಬಕ್ಕೂ, ಈಗ ಆಚರಿಸುತ್ತಿರುವ ಸಂಕ್ರಾಂತಿ ಹಬ್ಬಕ್ಕೂ ಆಗಜಾಂತರ ವ್ಯತ್ಯಾಸ ಇದೆ!.
ಕಾಲ ಬದಲಾದಂತೆ ಹಬ್ಬದ ಆಚರಣೆಯು ಕೂಡ ಹೊಸತನದಿಂದ ಬದಲಾಗುತ್ತಾ ಹೋಗುತ್ತಿದೆ. ಆದರೆ ನಮ್ಮ ಹಳೆಯ ಸಂಸ್ಕೃತಿ, ಪರಂಪರೆ ಮಾತ್ರ ಎಂದಿಗೂ ಕೂಡ ಶಾಶ್ವತವಾಗಿರುತ್ತದೆ!.
ಈಗಲೂ ಕೂಡ ಊರಿನ ಹಳೆಯ ತಲೆಮಾರಿನವರು ಈ ಹಬ್ಬವನ್ನು ತಮ್ಮ ಬಾಲ್ಯದ ದಿನಗಳಲ್ಲಿ ತಮ್ಮ ಹಿರಿಯರು ಆಚರಿಸುತ್ತಿದ್ದ ಆ ಕ್ಷಣವನ್ನು ನೆನೆಯುತ್ತಾರೆ.
ಜೊತೆಗೆ ಅತ್ಯಂತ ಮಹತ್ವದ ಕಥೆಗಳನ್ನು ಕೂಡ ಸಂಕ್ರಾಂತಿಯ ಸುತ್ತಮುತ್ತ ಇರುವ ಅಂಶಗಳನ್ನು ಕೂಡ ಎಲ್ಲರಿಗೂ ಪ್ರಚರಪಡಿಸುತ್ತಾರೆ.
ಇಂತಹ ಹಬ್ಬಗಳು ನಮ್ಮ ಸಂಸ್ಕೃತಿಯ ವೈಭವವನ್ನು ಎತ್ತಿ ಹಿಡಿಯುವ ಒಂದು ಪ್ರಮುಖ ವೇದಿಕೆಯಾಗಿವೆ.
ಹೊಸ ಬಟ್ಟೆ ಧರಿಸಿ, ಹಬ್ಬವನ್ನು ಎಲ್ಲರೂ ಕೂಡ ಒಟ್ಟಾಗಿ ಸೇರಿ, ಆಚರಿಸುವ ಪರಿ ಸ್ವರ್ಗವೇ ಧರೆಗಿಳಿದ ಅನುಭವವಾಗುತ್ತದೆ!.
ಇನ್ನೊಂದು ಅಂಶವನ್ನು ಮರೆತಿದ್ದೆ!. ಈ ದಿನದಂದು ಮುಖ್ಯವಾಗಿ ಎಲ್ಲಾ ವಿವಿಧ ತರಕಾರಿಗಳಿಂದ ಕೂಡಿದ ಸಾಂಬರ್ ಮಾಡಿ ಊಟ ಮಾಡುತ್ತಾರೆ. ನೋಡಿ ಆಯಾ ಕಾಲಕ್ಕೆ ತಕ್ಕಂತಹ ವೈವಿಧ್ಯಮಯ ಆಚರಣೆಯ ಜೊತೆಗೆ ರುಚಿಯೂ ಕೂಡ ಹಬ್ಬಕ್ಕೆ, ಆರೋಗ್ಯಕ್ಕೆ ಹೇಳಿ ಮಾಡಿಸಿದ ಅಂಶವಾಗಿರುತ್ತವೆ.
ಈ ಹಬ್ಬದಿಂದ ಸೂರ್ಯ ಹೇಗೆ ತನ್ನ ದಿಕ್ಕನ್ನು ಬದಲಾಯಿಸುತ್ತಾನೆ, ಅದೇ ರೀತಿ ಈ ಹೊಸ ವರ್ಷದ ಅಂದರೆ ಕ್ಯಾಲೆಂಡರ್ ವರ್ಷದ ಸಂಭ್ರಮದಲ್ಲಿ ಸಂಕ್ರಾಂತಿ ಹಬ್ಬ ಬಂದಿದೆ.
ಇನ್ನೊಂದು ಮುಖ್ಯವಾದ ವಿಷಯವೆಂದರೆ ಯಾವುದೇ ಹಬ್ಬಗಳು ನಮ್ಮ ಮುಂದಿನ ತಲೆಮಾರಿಗೆ ಹೊಸದಾದ ದೀವಿಗೆಯಂತಿರಬೇಕು ಆದುದರಿಂದಾಗಿ ನಮ್ಮ ಮಕ್ಕಳಿಗೆ ಹಿಂದೂ ಧರ್ಮದ ಹಬ್ಬಗಳ ಬಗ್ಗೆ ತಿಳಿಸಲೇಬೇಕು. ಜೊತೆಗೆ ಹಬ್ಬದ ಹಿನ್ನೆಲೆ, ಅದರ ಆಚರಣೆ, ಮಹತ್ವ ಎಲ್ಲದರ ಬಗ್ಗೆ ತಿಳಿಸುತ್ತಾ ಹೋದರೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಬಹುದು. ಆದರೆ ಇಂದು ಹಬ್ಬಗಳು ಯಾಂತ್ರಿಕತೆಯಾಗುತ್ತಿವೆ.
ಆದುದರಿಂದ ಈ ವರ್ಷದಿಂದಲಾದರೂ ಕೂಡ ಪ್ರತೀ ಮಾಸದಲ್ಲೂ ಬರುವ ಎಲ್ಲಾ ಹಬ್ಬಗಳ ಬಗ್ಗೆ ತಿಳಿದುಕೊಳ್ಳೋಣ. ಹಬ್ಬದ ಸಂಭ್ರಮವನ್ನು ಹೆಚ್ಚಿಸೋಣ!.
ಈ ಶುಭ ಸಂದರ್ಭದಲ್ಲಿ ಎಲ್ಲರೂ ಕೂಡ ಉತ್ತಮ ಸಂಕಲ್ಪಗಳನ್ನು ಹಾಕಿಕೊಂಡು ಎಳ್ಳು ಬೆಲ್ಲ ಹಂಚಿ, ತಿಂದು ಒಳ್ಳೆಯ ಮಾತನಾಡೋಣ.
ಸೂರ್ಯನಂತೆ ನಮ್ಮ ದಿನಚರಿಗಳನ್ನು, ಹವ್ಯಾಸಗಳನ್ನು ಕೂಡ ಬದಲಾಯಿಸಿಕೊಳ್ಳೋಣ. ಎಲ್ಲರಿಗೂ ಕೂಡ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

-ಕಾಳಿಹುಂಡಿ ಶಿವಕುಮಾರ್, ಮೈಸೂರು.

Leave a Reply

Your email address will not be published. Required fields are marked *