ಪ್ರೇಕ್ಷಕರನ್ನು ರಂಜಿಸಿದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಚಾಮರಾಜನಗರ: ಶಿಕ್ಷಕರು, ಶಿಕ್ಷಣ ಕೊಡುವ ಶಿಕ್ಷಣ ಸಂಸ್ಥೆಗಳು ಪಾತ್ರ: ಸ್ಮರಣೀಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಹೇಳಿದರು. ನಗರದ ಬಿ.ರಾಚಯ್ಯ ಜೋಡಿರಸೆಯಲ್ಲಿರುವ ಸಂತಪೌಲರ ದೇವಾಲಯದ ಆವರಣದಲ್ಲಿ ನಡೆದ ಸಂತ ಜೋಸೆಫ್ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅಬ್ದುಲ್ ಕಲಾಂ ಅವರು ಹೇಳಿರುವಂತೆ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ದೊಡ್ಡದೊಡ್ಡ ಕನಸುಗಳನ್ನು ಕಾಣಬೇಕು. ಅ ಕಡೆ ತುಳಿತ ಇದ್ದರೆ ಅವರ ಗುರಿಮುಟ್ಟಲು ಸಾಧ್ಯ ಎಂದರು. ಸಂತ ಜೋಸೆಫ್ ಶಾಲೆ ಒಂದು ಹೆಮ್ಮೆಯ ವಿಚಾರ.1956ರಲ್ಲಿ ಸ್ಥಾಪನೆಯಾಗಿದ್ದು, ಸುಮಾರು 70 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಚಾಮರಾಜನಗರದಲ್ಲಿ ಲಕ್ಷಾಂತರ ಜನರ ಬದುಕನ್ನು ಬೆಳಗಿಸಲು ಕಾರಣಕರ್ತವಾಗಿರುವ ಸಂಸ್ಥೆಯಾಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ, ವಿದೇಶಗಳಲ್ಲಿ ನೌಕರಿಯಲ್ಲಿರುವುದು ತುಂಬಾ ಸಂತಸವಾಗಿದೆ.ಈ ಸಂಸ್ಥೆಯು ತುಂಬಾ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಕೋರಿದರು. ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ಪೋಷಕರು ಕಾನೂನು ಪಾಲಿಸಬೇಕು. ತಮ್ಮ ಮಕ್ಕಳಿಗೆ 18 ವರ್ಷ ತುಂಬುವ ತನಕ ಬೈಕ್ ಕಾರನ್ನು ಚಾಲನೆಗೆ ಕೊಡಬಾರದು. ತಾವು ಕೂಡ ಬೈಕ್ ಓಡಿಸುವಾಗ ಹೆಲ್ಮೆಟ್ ಕಾರು ಚಾಲನೆ ಮಾಡುವಾಗ ಶೀಟ್ ಬೆಲ್ಟ್ ಧರಿಸಬೇಕು ಎಂದು ಸಲಹೆ ನೀಡಿದರು. ಸಂತ ಜೋಸೆಫ್ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಜಸ್ಸಿಮರ್ಲಿನ್ ಮಾತನಾಡಿ, ನಮ್ಮ ಸಂಸ್ಥೆಯು ಗುಣಾತ್ಮಕ ಶಿಕ್ಷಣವನ್ನು ಮಕ್ಕಳಿಗೆ ಕಲಿಸುತ್ತದೆ. ಪೋಷಕರ ಸಹಕಾರದಲ್ಲಿ ನಮ್ಮ ಸಂಸ್ಥೆಯು ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ನಿಮ್ಮ ಸಹಕಾರ ತುಂಬಾ ಅವಶ್ಯಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಚುಡಾ ಆಯುಕ್ತ ಹೆಚ್.ವಿ.ಸೀಮಾ, ಚರ್ಚ್ ಫಾದರ್ ಗಳಾದ ಸಿ.ಅಂತೋಣಪ್ಪ, ಅಂತೋಣಿರಾಜು, ಸುಫೀರಿಯರ್ ರಾದ ಲೀನಾ ಜ್ಯೋತಿ, ಜೋಸೆಫ್, ಪ್ರಾಂಶುಪಾಲ ಪ್ರಭಾಕರ್, ನಗರಸಭಾ ಮಾಜಿ ಸದಸ್ಯೆ ಕುಮುದಾಕೇಶವಮೂರ್ತಿ, ಸಿಆರ್ ಪಿ ಶಿವಕುಮಾರ್, ಹಿತೈಷಿಗಳಾದ ಅತೀಫ್,ಜಾನ್ ಗಿಲ್ಬರ್ಟ್, ಶಾಲೆಯ ಶಿಕ್ಷಕರು, ಪೋಷಕರು ಭಾಗವಹಿಸಿದ್ದರು. ವಿದ್ಯಾರ್ಥಿ ಚರಿತಾ ಎನ್.ತಂಡ ನಡೆಸಿಕೊಟ್ಟ ಸ್ವಾಗತ ನೃತ್ಯ ಹಾಗೂ ವಿವಿಧ ತರಗತಿಯ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರೇಕ್ಷಕರ ಗಮನ ಸೆಳೆಯಿತು.