ಚಾಮರಾಜನಗರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ನಗರದಲ್ಲಿ 152ನೇ ದಿನವಾದ ಇಂದು ಪ್ರತಿಭಟನೆ ನಡೆಸಿದರು.
151 ದಿನಗಳಿಂದಲೂ ಸತತವಾಗಿ ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರು, ಇಂದು ಕೂಡಾ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ನಗರದ ಭುವನೇಶ್ವರಿ ವೃತ್ತದಲ್ಲಿ ಹೆದ್ದಾರಿ ಸಂಚಾರವನ್ನು ತಡೆದು ಪ್ರತಿಭಟಿಸಿದರು.
ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ ಹಾಗೂ ಕಾವೇರಿ ನಿರ್ವಹಣಾ ಮಂಡಳಿ, ಸಂಸದರು, ರಾಜ್ಯ ಸಭಾ ಸದಸ್ಯರು, ಕೇಂದ್ರ ಸಚಿವರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಸಿಲಿನ ತಾಪ ತಡೆಯಲು ಸಾಧ್ಯವಾಗುತ್ತಿಲ್ಲ. ವಿಪರೀತ ಹೆಚ್ಚಾಗುತ್ತಿದೆ. ಇದರಿಂದ ಜಲಾಶಯಗಳು ಬತ್ತುತ್ತಿವೆ. ಮುಂದಿನ ದಿನಗಳಲ್ಲಿ ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿಗೆ ಸಿಲುಕಬೇಕಾಗುತ್ತದೆ. ತಮಿಳುನಾಡಿಗೆ ನೀರನ್ನು ಬಿಡುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕಾವೇರಿ ನಿರ್ವಹಣಾ ಮಂಡಳಿ ಈಗಲಾದರೂ ಕೂಡಾ ತಮ್ಮ ಕಣ್ಣನ್ನು ತೆರೆದು ರಾಜ್ಯದ ಪರಿಸ್ಥಿತಿಯನ್ನು ನೋಡಿ ತೀರ್ಮಾನ ನೀಡಿ, ರಾಜ್ಯ ಸರ್ಕಾರವೂ ಕೂಡಾ ಏನೂ ಮಾತನಾಡುತ್ತಿಲ್ಲ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಿಯವರೆಗೆ ನೀವು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪಣ್ಯದಹುಂಡಿ ರಾಜು, ನಿಜಧ್ವನಿ ಗೋವಿಂದರಾಜು, ತಾಂಡವಮೂರ್ತಿ, ವೀರಭದ್ರ, ಗು.ಪುರುಷೋತ್ತಮ್, ಸೋಮವಾರಪೇಟೆ ಮಂಜು, ಕುಮಾರ್ ಇನ್ನಿತರರಿದ್ದರು.