ಚಾಮರಾಜನಗರ: ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಜೊತೆಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡಿ, ಪ್ರಬುದ್ದ ಪ್ರಜೆಗಳನ್ನು ರೂಪಿಸುವ ಶಿಕ್ಷಣ ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ತಿಳಿಸಿದರು.
ತಾಲೂಕಿನ ಹರವೆ ಶ್ರೀ ಚನ್ನಬಸವೇಶ್ವರ ಪ್ರತಿಷ್ಠಾನ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಚನ್ನಬಸವೇಶ್ವರ ಕನ್ನಡ ಮತ್ತು ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಲೆಯ ಶಾಲಾ ಕೊಠಡಿ ಉದ್ಗಾಟನೆ ಮತ್ತು ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಠ ಮಾನ್ಯಗಳು ಇಂಥ ಸಂಸ್ಕಾರಯುತ ಶಿಕ್ಷಣವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಅನ್ನ ದಾಸೋಹ ಜೊತೆಗೆ ಅಕ್ಷರ ದಾಸೋಹವನ್ನು ಮಾಡುವ ಮೂಲಕ ಕರ್ನಾಟಕದ ಸಾಕ್ಷರತೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಈ ನಿಟ್ಟಿನಲ್ಲಿ ಹರವೆ ಹೋಬಳಿ ಕೇಂದ್ರದಲ್ಲಿ ಚನ್ನಬಸವೇಶ್ವರ ಅಂಗ್ಲ ಮಾದ್ಯಮ ಶಾಲೆ ಪ್ರಮುಖವಾಗಿದೆ. ಸುಸಜ್ಜಿತ ಪ್ರದೇಶದಲ್ಲಿ ಶಿಕ್ಷಣ ಜೊತೆಗೆ ಮಕ್ಕಳ ಭೌತಿಕ ವಿಕಸನಕ್ಕೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರು ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದರೆ, ಅನುದಾನ ನೀಡುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿಯೂ ಗ್ರಾಮೀಣ ಭಾಗದಲ್ಲಿ ಕಡಿಮೆ ಶುಲ್ಕವನ್ನು ಪಡೆದು ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇನ್ನು ಹೆಚ್ಚಿನ ರೀತಿಯಲ್ಲಿ ಸಂಸ್ಥೆ ಬೆಳೆಯಲಿ ನನ್ನ ಸಹಕಾರ ಇರುತ್ತದೆ ಎಂದರು.
ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚನ್ನಬಸವೇಶ್ವರ ವಿದ್ಯಾ ಸಂಸ್ಥೆಯ ಈ ಭಾಗದ ಮಕ್ಕಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ನಡೆಯುತ್ತಿದೆ. ಶ್ರೀಮಠಧ ಅಧ್ಯಕ್ಷರಾದ ಶ್ರೀ ಸರ್ಪಭೂಷಣ ಸ್ವಾಮಿಗಳ ಇಚ್ಚಾಸಕ್ತಿ ಹಾಗೂ ಹರವೆ ಭಾಗದ ವಿದ್ಯಾರ್ಥಿಗಳು ಸಹ ಅಂಗ್ಲಮಾದ್ಯಮ ಶಿಕ್ಷಣ ಪಡೆಯಬೇಕೆಂಬ ಅಭಿಲಾಷೆಯಿಂದ ಪಟ್ಟಣ ಪ್ರದೇಶವನ್ನು ಮೀರಿಸುವಂತಹ ಸಂಸ್ಥೆಯನ್ನು ಆರಂಭಿಸಿದ್ದಾರೆ. ಗ್ರಾಮಸ್ಥರು ಹಾಗೂ ಪೋಷಕರು ಸಹ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸುವಲ್ಲಿ ಮುಂದಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಸರ್ಪಭೂಷಣಸ್ವಾಮೀಜಿ ಮಾತನಾಡಿ, ಹರವೆ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ದಿಗಾಗಿ ಚನ್ನಬಸವೇಶ್ವರ ಪ್ರತಿಷ್ಠಾನದ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣ ಜೊತೆಗೆ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ರೂಡಿಸುವ ಶಿಕ್ಷಣ ನೀಡಲಾಗುತ್ತಿದೆ. ಕೊಠಡಿ ಕೊರತೆಯನ್ನು ಮನಗಂಡು ಸಂಸದರು, ವಿಧಾನ ಪರಿಷತ್ ಸದಸ್ಯರು ಇತರರ ಅನುದಾನವನ್ನು ಕ್ರೋಡೀಕರಿಸಿ, ಸುಸಜ್ಜಿತ ಎರಡು ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಂಗಳ ಮಠದ ಶ್ರೀಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ, ಜಿ.ಪಂ. ಮಾಜಿ ಸದಸ್ಯ ಕೆರೆಹಳ್ಳಿ ನವೀನ್, ತಾ.ಪಂ. ಮಾಜಿ ಸದಸ್ಯ ಉದಯಕುಮಾರ್, ಸಂಸ್ಥೆಯ ಕಾರ್ಯದರ್ಶಿ ಗಿರೀಶ್, ಮೊದಲಾಧವರು ಇದ್ದರು.