ಚಾಮರಾಜನಗರ: ಅರೆಕಾಲಿಕ ಕಾನೂನು ಸ್ವಯಂ ಸೇವಕರು ಗ್ರಾಮೀಣ ಜನರಿಗೆ ಕಾನೂನಿನ ಅರಿವು ಮೂಡಿಸಿ ಪ್ರತಿ ಗ್ರಾಮಗಳಲ್ಲಿನ ತಳಮಟ್ಟದ ಸಮಸ್ಯೆಗಳನ್ನು ಪರಿಹರಿಸಲು ನೆರವಾಗುವಂತೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಜಿ. ಪ್ರಭಾವತಿ ಅವರು ತಿಳಿಸಿದರು.
ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಬೆಂಗಳೂರಿನ ಔಟ್ಲಾಡ್ ಇಂಡಿಯಾ ಫೌಂಡೇಶನ್ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಸಹಯೋಗದಲ್ಲಿ 2025-26ನೇ ಸಾಲಿನ ಹೊಸ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಹಮ್ಮಿಕೊಳ್ಳಲಾಗಿರುವ ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಗೌರವಯುತವಾಗಿ ಬದುಕುವ ಹಕ್ಕು ಇದೆ. ಹಾಗೆಯೇ ವಿವಿಧ ಸೌಕರ್ಯಗಳ ಸಮಸ್ಯೆ, ಮೂಲ ಕಾನೂನು ಅರಿವಿನ ಕೊರತೆ ಸೇರಿದಂತೆ ಸಮಸ್ಯೆ ಇದ್ದೇ ಇರುತ್ತದೆ. ಅಂತಹವರನ್ನು ಗುರುತಿಸಿ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಅರಿತು, ತಿಳಿವಳಿಕೆ ನೀಡಿ ಪರಿಹರಿಸಲು ಕಾನೂನಿನ ಮೂಲಕ ನೆರವಾಗುವುದೇ ಅರೆಕಾಲಿಕ ಸ್ವಯಂ ಸೇವಕರ ಪ್ರಮುಖ ಕಾರ್ಯವಾಗಿದೆ. ತರಬೇತಿ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರು ಯಾವುದೇ ಅನುಮಾನ, ಗೊಂದಲಗಳಿದ್ದರೂ ಪರಿಹರಿಸಿಕೊಳ್ಳಲು ಮುಂದಾಗಬೇಕು ಎಂದರು.
ಪ್ರಸ್ತುತ 2025-26ನೇ ಸಾಲಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರಗಳಲ್ಲಿ ಅರೆಕಾಲಿಕ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಹೊಸದಾಗಿ ನೇಮಕವಾಗಿರುವ 152 ಸ್ವಯಂ ಸೇವಕರಿಗೆ ಔಟ್ಲಾಡ್ ಇಂಡಿಯಾ ಫೌಂಡೇಶನ್ ವತಿಯಿಂದ ತರಬೇತಿ ಆಯೋಜಿಸಲಾಗಿದೆ. ತರಬೇತಿಯನ್ನು ಸದ್ಭಳಕೆ ಮಾಡಿಕೊಂಡು ಅರೆಕಾಲಿಕ ಸ್ವಯಂ ಸೇವಕರು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ. ಪ್ರಭಾವತಿ ಅವರು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮೂಲ ಕಾನೂನನ್ನು ಸಾರ್ವಜನಿಕರಿಗೆ ತಿಳಿಸಿ ಸಹಾಯ ಮಾಡುವುದೇ ಅರೆಕಾಲಿಕ ಸ್ವಯಂ ಸೇವಕರ ಅದ್ಯ ಕರ್ತವ್ಯವಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನಾಲ್ಸಾ ಯೋಜನೆಯಡಿ ಪ್ರತಿ ತಾಲೂಕಿನಲ್ಲಿ 25ರಿಂದ 50 ಹಾಗೂ ಜಿಲ್ಲಾಮಟ್ಟದಲ್ಲಿ 50ರಿಂದ 100 ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 152 ಮಂದಿ ಸ್ವಯಂ ಸೇವಕರು ಸಾರ್ವಜನಿಕರು ಹಾಗೂ ನ್ಯಾಯಾಂಗ ವ್ಯವಸ್ಥೆಯ ಕೊಂಡಿಯಾಗಿ ಕಾರ್ಯನಿರ್ವಹಿಸಲು ನೇಮಕವಾಗಿದ್ದಾರೆ ಎಂದರು.
ಜಿಲ್ಲಾಧಿಕಾರಿಗಳಾದ ಶ್ರೀರೂಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಔಟ್ಲಾಡ್ ಇಂಡಿಯಾ ಫೌಂಡೇಶನ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಹೆಚ್. ವೆಂಕಟೇಶ್, ಜಾಮೀಜಾಯ್, ಸಿದ್ಧಾರ್ಥ್ ಪಾಟೀಲ್, ಇತರರು ಕಾರ್ಯಕ್ರಮದಲ್ಲಿಸ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದ ಬಳಿಕ ಸಂಪನ್ಮೂಲ ವ್ಯಕ್ತಿಗಳು ಹೊಸದಾಗಿ ನೇಮಕವಾಗಿರುವ ಅರೆಕಾಲಿಕ ಸ್ವಯಂ ಸೇವಕರಿಗೆ ಕಾರ್ಯಚಟುವಟಿಕೆಗಳ ಬಗ್ಗೆ ತರಬೇತಿ ನೀಡಿದರು.