ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬಸ್ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟ ಇಬ್ಬರು ಮಹಿಳೆಯರ ಕುಟುಂಬದ ವಾರಸುದಾರರಿಗೆ ತಲಾ 10 ಲಕ್ಷ ರೂ. ಪರಿಹಾರ ಧನವನ್ನು ವಿತರಿಸಿದೆ.
2025ರ ಅಕ್ಟೋಬರ್ 19ರಂದು ಕೊಳ್ಳೇಗಾಲ ಘಟಕಕ್ಕೆ ಸೇರಿದ ಬಸ್ ಅಪಘಾತಕ್ಕೀಡಾಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ರತ್ನಮ್ಮ ಎಂಬುವವರು ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಕಳೆದ 2025ರ ಮೇ 22ರಂದು ಗುಂಡ್ಲುಪೇಟೆ ಘಟಕಕ್ಕೆ ಸೇರಿದ ಬಸ್ ನಲ್ಲಿ ಸಂಚರಿಸುತ್ತಿದ್ದ ಅಮ್ಮಣ್ಣಮ್ಮ ಎಂಬುವವರು ಬೊಮ್ಮಲಾಪುರದ ಬಸ್ ನಿಲ್ಧಾಣದ ಹತ್ತಿರ ಬಸ್ ನ ಮುಂಭಾಗದ ಬಾಗಿಲಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ 2025ರ ಮೇ 24ರಂದು ಮೃತಪಟ್ಟಿದ್ದರು.
ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಅಪಘಾತದಲ್ಲಿ ಮೃತಪಟ್ಟಲ್ಲಿ ನಿಗಮದ ಅಪಘಾತ ಪರಿಹಾರ ನಿಧಿಯನ್ನು 10 ಲಕ್ಷ ರೂ. ಪರಿಹಾರ ಧನವನ್ನು ನೀಡಲಾಗುತ್ತದೆ. ಅದರಂತೆ ಮೃತಪಟ್ಟ ರತ್ನಮ್ಮ ಅವರ ವಾರಸುದಾರರಾದ ಹನೂರು ತಾಲೂಕಿನ ಹಲಗಾಪುರ ಗ್ರಾಮದ ಬಸವಣ್ಣ ಅವರಿಗೆ ಹಾಗೂ ಮೃತಪಟ್ಟ ಅಮ್ಮಣ್ಣಮ್ಮ ಅವರ ವಾರಸುದಾರರಾದ ಗುಂಡ್ಲುಪೇಟೆ ತಾಲೂಕಿನ ಪುತ್ತನಪುರದ ನಾಗಲಂಬಿಕ ಅವರಿಗೆ ತಲಾ 10 ಲಕ್ಷ ರೂ. ಗಳ ಅಪಘಾತ ಪರಿಹಾರ ಚೆಕ್ಕನ್ನು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ಅವರು ವಿತರಿಸಿದರು.