ಮಳೆ ಆಧಾರಿತ, ಕಡಿಮೆ ನೀರು ಅಗತ್ಯವಿರುವ ಬೆಳೆ ಬೆಳೆಯಲು ಜಿಲ್ಲಾಧಿಕಾರಿ ಶ್ರೀರೂಪ ಮನವಿ

ಚಾಮರಾಜನಗರ: ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ದುರ್ಬಲವಾಗಿದ್ದು, ಜಲಾಶಯಗಳಲ್ಲಿ ಪ್ರಸ್ತುತ ಲಭ್ಯವಿರುವ ನೀರಿನ ಪ್ರಮಾಣವು ಕಡಿಮೆ ಇರುವುದರಿಂದ ಕೇವಲ ಕುಡಿಯುವ ನೀರಿನ ಅಗತ್ಯತೆ ಪೂರೈಸಲು ಮಾತ್ರ ಸಾಕಾಗುವಂತಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಪರಿಸ್ಥಿತಿಯಲ್ಲಿ ಕೃಷಿ ಬೆಳೆಗಳಿಗೆ ನೀರು ಹರಿಸುವುದು ಕಷ್ಟಸಾಧ್ಯವಾಗಲಿದೆ. ಕುಡಿಯುವ ನೀರಿನ ಪೂರೈಕೆಗೆ ಮೊದಲ ಆದ್ಯತೆ ನೀಡುವುದು ಸರ್ಕಾರದ ಆಶಯವಾಗಿದ್ದು, ಲಭ್ಯವಿರುವ ನೀರಿನ ಸಂಗ್ರಹವನ್ನು ಅತ್ಯಂತ ಮಿತವ್ಯಯದಿಂದ ಬಳಕೆ ಮಾಡುವುದು ಅನಿವಾರ್ಯವಾಗಿದೆ.

  ರೈತರು ಜಲಾಶಯದ ನೀರನ್ನು ಅವಲಂಬಿಸಿ ಬೆಳೆ ಬಿತ್ತನೆ ಕಾರ್ಯ ಕೈಗೊಳ್ಳಬಾರದು. ಬದಲಾಗಿ ಮಳೆ ಆಧಾರಿತ, ಕಡಿಮೆ ನೀರು ಅಗತ್ಯವಿರುವ ಅಥವಾ ಅಲ್ಪಾವಧಿಯ ಬೆಳೆಗಳನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆಯಂತೆ ಆಯ್ಕೆ ಮಾಡಿಕೊಂಡು ಬೆಳೆ ಬೆಳೆಯಬೇಕು. ಹೆಚ್ಚಿನ ಮಾಹಿತಿಗಾಗಿ ಹಾಗೂ ಸೂಕ್ತ ಬೆಳೆ ಆಯ್ಕೆ ಕುರಿತು ತಮ್ಮ ವ್ಯಾಪ್ತಿಯ ಕೃಷಿ ಅಥವಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.

  ಸರ್ಕಾರವು ಜಲಾಶಯದ ನೀರಿನ ಮಟ್ಟ, ಮಳೆಯ ಪ್ರಮಾಣ ಹಾಗೂ ಒಳಹರಿವಿನ ಸ್ಥಿತಿಗತಿಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ಪರಿಸ್ಥಿತಿಯಲ್ಲಿ ಅನುಕೂಲಕರ ಬದಲಾವಣೆಯಾದಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ನೀರಿನ ಸಂಪನ್ಮೂಲಗಳ ಸುಸ್ಥಿರ ಬಳಕೆ ಹಾಗೂ ರೈತರ ಹಿತದೃಷ್ಟಿಯಿಂದ ಎಲ್ಲಾ ರೈತರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *