ಚಾಮರಾಜನಗರ: ಮಕ್ಕಳು ಓದುವುದರ ಜೊತೆಗೆ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಅವರು ತಿಳಿಸಿದರು.
ತಾಲೂಕಿನ ಮರಿಯಾಲದ ಶ್ರೀ ಮುರುಗ ರಾಜೇಂದ್ರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನುಗಳ ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ ಹಾಗೂ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಇಂದು ನಡೆದ ‘ಮಕ್ಕಳಲ್ಲಿ ಕಾನೂನು ಅರಿವು ಮತ್ತು ಕ್ರೀಡೆ ಮಹತ್ವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚು ಹೊತ್ತು ನೀಡಬೇಕು. ಕ್ರೀಡೆ ಎಂದರೆ ಸಂಘಟಿತ ಹಾಗೂ ಸ್ಪರ್ಧಾತ್ಮಕ ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆ. ಕ್ರೀಡೆಯ ಮನುಷ್ಯನ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯ ಕಾಪಾಡುತ್ತದೆ. ಕ್ರೀಡೆಯಿಂದ ಶಿಸ್ತು, ಏಕಾಗ್ರತೆ ಬರುತ್ತದೆ ಇದರಿಂದ ಹೆಚ್ಚು ಹೆಚ್ಚು ಓದುವ ಕಡೆ ಗಮನ ಬರುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ,ಒತ್ತಡ ಕಡಿಮೆಯಾಗುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನ ಎದುರಿಸುವ ಸಾಮರ್ಥ್ಯ ಬರುತ್ತದೆ. ಮಕ್ಕಳು ಟೀನೇಜ್ ಸಮಯದಲ್ಲಿ ಮನಸ್ಸಿಗೆ ಕಡಿವಾಣ ಹಾಕಿ ಓದುವ ಕಡೆ ಗಮನ ಹರಿಸಬೇಕು ಅಲ್ಲದೆ ಸಂಸ್ಕಾರ ಕಲಿಯಬೇಕು.ಬಾಲ್ಯ ವಿವಾಹ ಅಪರಾಧ ಇದನ್ನು ಎಲ್ಲಾ ಮಕ್ಕಳು ಖಂಡಿಸಬೇಕು.ಮಕ್ಕಳ ಹಕ್ಕುಗಳ ಹಾಳಾಗುತ್ತಿದೆ ಅದನ್ನು ಕಾಪಾಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ರಾಮಸಮುದ್ರ ಅವರು ಮಾತನಾಡಿ, ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚು ಹೆಚ್ಚು ಮಹತ್ವ ನೀಡಬೇಕು.ಕ್ರೀಡೆಯು ಪ್ರಪಂಚವೇ ಗುರುತಿಸುವ ಕೆಲಸ ಮಾಡುತ್ತದೆ, 18 ವರ್ಷದ ಒಳಗಿನ ಮಕ್ಕಳು ಬೈಕ್ ಗಳನ್ನು ಓಡಿಸಿದರೆ ಕಾನೂನು ಶಿಕ್ಷೆಗೆ ಒಳಗಾಗುತ್ತಾರೆ. ಇದರಿಂದ ನಿಮ್ಮ ಜೀವನ ಹಾಳಾಗುತ್ತದೆ ಆದ್ದರಿಂದ ಎಲ್ಲರೂ ಓದುವ ಗಮನಹರಿಸಿ ಉತ್ತಮ ಸಾಧನೆ ಮಾಡಿ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ನ ಅಧ್ಯಕ್ಷ ಎಲ್. ಸುರೇಶ್ ಮಾತನಾಡಿ, ಮಕ್ಕಳು ವಿದ್ಯೆಯ ಜೊತೆಗೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಇಂತಹ ಕಾರ್ಯಕ್ರಮಗಳನ್ನು ನಾವು ಅನೇಕ ಬಾರಿ ಮಾಡಿದ್ದೇವೆ. ಮೊಬೈಲ್ ಬಳಕೆ ಕಡಿಮೆ ಮಾಡಿ ಓದಿನ ಕಡೆ ಗಮನ ಹರಿಸಿ ಉತ್ತಮ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮಕ್ಕಿಂತ ಮುಂಚೆ ಶ್ರೀ ಮುರುಘರಾಜೇಂದ್ರ ಸ್ವಾಮೀಜಿಗಳ ಮಠಕ್ಕೆ ಭೇಟಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ನ ಅಧ್ಯಕ್ಷ ಎಲ್. ಸುರೇಶ್, ಶ್ರೀ ಮುರುಗ ರಾಜೇಂದ್ರ ಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪಿ.ಮಹದೇವಸ್ವಾಮಿ, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ನ ದೈಹಿಕ ಶಿಕ್ಷಕರಾದ ಎನ್ ಜೋಸೆಫ್, ರಾಷ್ಟ್ರೀಯ ಫುಟ್ಬಾಲ್ ತರಬೇತುದಾರ ಜೋಸೆಫ್ ಇದ್ದರು.