ಕಲಾಪ್ರಕಾರಗಳಿಗೆ ಜೀವತುಂಬಿ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರದ್ದು : ಡಿ.ವೈ.ಎಸ್.ಪಿ ಸ್ನೇಹರಾಜ್

ಚಾಮರಾಜನಗರ: ಬಹಳ ವೈವಿಧ್ಯಮಯ ಹಾಗೂ ವಿಭಿನ್ನವಾಗಿರುವ ಸಂಗೀತ, ನೃತ್ಯ, ನಾಟಕ, ಗಮಕ, ಕಥಾಕೀರ್ತನದಂತಹ ಕಲಾ ಪ್ರಕಾರಗಳಿಗೆ ಜೀವ ತುಂಬಿ ಉಳಿಸಿ ಬೆಳೆಸುವ ಗುರುತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಡಿ.ವೈ.ಎಸ್.ಪಿ ಸ್ನೇಹರಾಜ್ ಅವರು ತಿಳಿಸಿದರು.

  ನಗರದ ಚಾಮರಾಜೇಶ್ವರ ದೇವಸ್ಥಾನದ ಅವರಣದಲ್ಲಿಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸಹಯೋಗದೊಂದಿಗೆ 2 ದಿನಗಳ ಕಾಲ ಆಯೋಜಿಸಿದ್ದ ಮಾಧುರ್ಯ-2026 ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ನಮ್ಮ ಭಾರತ ಕಲೆ, ಸಾಹಿತ್ಯ, ಸಂಸ್ಕøತಿಯಲ್ಲಿ ಶ್ರೀಮಂತ ದೇಶವಾಗಿದೆ. ಇಂತಹ ಶ್ರೀಮಂತ ಪರಂಪರೆಯ ಅರಿವು ನಮ್ಮ ಮಕ್ಕಳಿಗೆ ಇಲ್ಲದಿರುವುದು ಕಂಡುಬರುತ್ತಿದೆ. ಮೊಬೈಲ್ ಗೀಳಿಗೆ ಒಳಗಾಗಿ ಮಕ್ಕಳು ಕೇವಲ ರೀಲ್ಸ್ ನೋಡುವುದರಲ್ಲೇ ಕಾಲ ಕಳೆಯುತ್ತಿರುವುದು ಇಂದಿನ ವಿಪರ್ಯಾಸವಾಗಿದೆ. ನಶಿಸುತ್ತಿರುವ ಕಲಾಪ್ರಕಾರಗಳನ್ನು ಆಸ್ವಾದಿಸುವ ಮೂಲಕ ಪೋಷಕರು ತಮ್ಮ ಮಕ್ಕಳಿಗೆ ದಿನಕ್ಕೆ ಒಂದೊಂದು ಕಲಾಪ್ರಕಾರ ಹೇಳಿಕೊಟ್ಟರೆ ಸಾಕು. ಕಲೆಗಳಿಗೆ ಜೀವ ಬರಲಿದೆ ಎಂದರು. 

  ನಮ್ಮ ದೇಶದ ಭರತನಾಟ್ಯ ಕಲೆಯನ್ನು ಇಂದು ಅನೇಕ ದೇಶಗಳಲ್ಲಿ ಕಲಿಯಲು ಜನರು ಅಸಕ್ತಿ ತೋರುತ್ತಿದ್ದಾರೆ. ವೀಣೆ, ತಬಲ, ಗೀಟಾರ್, ಹಾರ್ಮೋನಿಯಂ ಗಳಿಂದ ನಾವಿಂದು ದೂರವಾಗುತ್ತಿದ್ದೇವೆ. ದೈನಂದಿನ ಒತ್ತಡ ಕಳೆಯಲು, ಶಾಂತಿ, ನಮ್ಮೆದಿ ಜೀವನಕ್ಕೆ  ಸಂಗೀತ, ನೃತ್ಯದಂತಹ ಕಲಾಪ್ರಕಾರಗಳು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಲು ನಾವೆಲ್ಲರೂ ದೃಢನಿರ್ಧಾರ ಮಾಡಬೇಕಿದೆ ಎಂದು ಡಿ.ವೈ.ಎಸ್.ಪಿ ಸ್ನೇಹರಾಜ್ ಅವರು ಹೇಳಿದರು.

  ಸಮಾರೋಪ ನುಡಿಗಳನ್ನಾಡಿದ ಹಿರಿಯ ಕೀರ್ತನಕಾರರು, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಕಲಾಶ್ರೀ ಪುರಸ್ಕøತರಾದ ತುಮಕೂರಿನ ಡಾ. ಲಕ್ಷ್ಮಣದಾಸ್ ಅವರು ಮಾಧುರ್ಯ ಶೀರ್ಷಿಕೆಯಲ್ಲಿ ಅಮೃತ ಸಿಂಚನವಿದೆ.  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಸಂಗೀತ, ನೃತ್ಯ, ಗಮಕ, ಕಥಾಕೀರ್ತನ ಸೇರಿದಂತೆ 6 ಬಗೆಯ ಕಲಾಪ್ರಕಾರಗಳನ್ನು ನಾಡಿನ ಉದ್ದಗಲಕ್ಕೂ ಪ್ರಸ್ತುತಪಡಿಸುತ್ತಿದೆ. ಕಥಾಕೀರ್ತನವು ಭಾರತೀಯ ಸಂಸ್ಕøತಿ ಹಾಗೂ ಆಧ್ಯಾತ್ಮದ ಸಂಕೀರ್ಣವಾಗಿದೆ. ಎಲ್ಲಾ ದೇವಮಾನವರಿಂದ ಪ್ರಭಾವಿತರಾಗಿದ್ದ ಕಥಾ ಕೀರ್ತನ(ಹರಿಕಥೆ) ಕಲೆಗೆ ಯುಗಯುಗಗಳ ಇತಿಹಾಸವಿದೆ ಎಂದರು.  

  ಕಥಾಕೀರ್ತನ ಕಲೆ ನಶಿಸಿ ಅದನ್ನು ಪ್ರಸ್ತುತಪಡಿಸುವ ಕಲಾವಿದರ ಬದುಕು ಶೋಚನೀಯವಾಗಿದೆ. ಕಥಾಕೀರ್ತನೆ ಮತ್ತು ಗಮಕ ಕಲೆಗಳನ್ನು ಹೆಚ್ಚು ಹೆಚ್ಚು ಪಸರಿಸಿ ಜೀವ ತುಂಬುವ ಅನಿವಾರ್ಯತೆ ಇದೆ. ಕಥಾಕೀರ್ತನಾ ಅಸ್ತಿತ್ವಕ್ಕೆ ಅದರ ಕಲಾವಿದರು ಸದೃಢರಾಗಬೇಕು. ಕಥಾಕೀರ್ತನೆಯನ್ನು ಸಮರ್ಪಕವಾಗಿ ಎಲ್ಲರಿಗೂ ಉಣಬಡಿಸಿ ಅದನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕು. ಕರ್ನಾಟಕ ಸಂಗೀತದಂತೆ ಹರಿಕಥೆಗೂ ಸಾಕಷ್ಟು ಮಹನೀಯರು ಹೊಸ ರೂಪ ಕೊಟ್ಟಿದ್ದಾರೆ. ಹರಿಕಥೆಯ ವಿಶಿಷ್ಟ ಪರಂಪರೆ ಉಳಿಸಲು ಕಥೆ ಹೇಳುವ ಕಲೆಯನ್ನು ಉತ್ತಮವಾಗಿ ವೃದ್ಧಿಸಿಕೊಳ್ಳಬೇಕಿದೆ. ತಾಯಿ ವಾಗೇಶ್ವರಿ ಎಲ್ಲರ ನಾಲಿಗೆಯಲ್ಲಿಯೂ ನಲಿಯಬೇಕಿದೆ ಎಂದು ಡಾ. ಲಕ್ಷ್ಮಣದಾಸ್ ಅವರು ತಿಳಿಸಿದರು.

  ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಎನ್. ಮುನಿರಾಜು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ ಸಂಚಾಲಕರಾದ ಪದ ದೇವರಾಜು, ಅಕಾಡೆಮಿ ಸದಸ್ಯರಾದ ಡಿ.ಆರ್. ರಾಜಪ್ಪ, ನಿರ್ಮಲಾಶಾಸ್ತ್ರಿ, ಡಾ. ಮದ್ದೇರಿ ಮುನಿರೆಡ್ಡಿ, ಸಾಹಿತಿ ಡಾ. ಮಹೇಶ್ ಚಿಕ್ಕಲ್ಲೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

  ಬಳಿಕ ಮಕ್ಕಳಿಂದ ಭರತನಾಟ್ಯ ಸೇರಿದಂತೆ ಜಾನಪದ ಕಲಾವಿದರಾದ ಸಿ.ಎಂ. ನರಸಿಂಹಮೂರ್ತಿ, ತಂಡದಿಂದ ಭಕ್ತಿ ಭಾವ ಗಾಯನ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಗಣ್ಯರು ಕಲಾವಿದರಿಗೆ ಪ್ರಮಾಣಪತ್ರ ವಿತರಣೆ ಮಾಡಿದರು.

Leave a Reply

Your email address will not be published. Required fields are marked *