
ಯಳಂದೂರು: ತಾಲೂಕಿನ ಗೌಡಹಳ್ಳಿ ಹೊಸಹಳ್ಳಿ ಡ್ಯಾಂಗೆ ನೀರು ತುಂಬಿಸುವಂತೆ ಗೌಡಹಳ್ಳಿ ಗ್ರಾಮದಲ್ಲಿ ರೈತರು ಆಗ್ರಹಿಸಿದರು.
ಗೌಡಹಳ್ಳಿ, ಮಲಾರಪಾಳ್ಯ, ಆಲ್ಕೆರೆ ಅಗ್ರಹಾರ ಗ್ರಾಮಗಳಿಂದ ಆಗಮಿಸಿದ್ದ ರೈತರು ಗೌಡಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಭೆ ಸೇರಿ ಗೌಡಹಳ್ಳಿ, ವಡಗೆರೆ, ಮಲಾರಪಾಳ್ಯ, ಆಲ್ಕೆರೆ ಅಗ್ರಹಾರ, ಬೂದಿತಿಟ್ಟು ಗ್ರಾಮಗಳ ರೈತರಿಗೆ ಸೇರಿದ ಸುಮಾರು ಎಂಟು ನೂರು ಎಕರೆಗೆ ಹೆಚ್ಚು ಒಣಭೂಮಿ ಇದ್ದು, ಸಕಾಲಕ್ಕೆ ಮಳೆಯಾಗದಿದ್ದರೆ ಸಂಪೂರ್ಣ ಬರದಿಂದ ಬಳಲುವಂತಾಗಿದೆ. ಸುಮಾರು ನಲವತ್ತು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಗೌಡಹಳ್ಳಿ ಹೊಸಹಳ್ಳಿ ಡ್ಯಾಂ ನಲ್ಲಿ ನೀರು ಸಂಗ್ರಹವಾದರೆ ಈ ಭಾಗದ ರೈತರ ಪರಿಸ್ಥಿತಿ ಸುಧಾರಣೆಯಾಗುತ್ತದೆ. ಈ ಡ್ಯಾಂಗೆ ಸಮೀಪದಲ್ಲಿರುವ ಆಮೆಕೆರೆ ಬಳಿ ದೊಡ್ಡದಾದ ದಿಬ್ಬವಿದ್ದು, ಅದರ ಸಮೀಪದಲ್ಲಿ ಮಳೆಗಾಲದಲ್ಲಿ ಹಳ್ಳವು ತುಂಬಿ ಹರಿಯುತ್ತದೆ. ಆ ನೀರು ಡ್ಯಾಂಗೆ ತುಂಬಲು ದಿಬ್ಬವು ಅಡ್ಡಲಾಗಿದ್ದು, ಅದನ್ನು ಒಡೆದರೆ ನಿರಾಯಾಸವಾಗಿ ಜಲಾಶಯಕ್ಕೆ ನೀರು ಹರಿದು ಬರಲಿದೆ. ಇದನ್ನು ಹೊರತುಪಡಿಸಿದರೆ ಕಬಿನಿ ಜಲಾಶಯದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ನಮ್ಮೂರಿನ ಡ್ಯಾಂ ಗೂ ನೀರು ತುಂಬಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯಗಳು ರೈತರಿಂದ ವ್ಯಕ್ತವಾದವು.
ಇದೇ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರ ಕೂಡ್ಲೂರು ಶ್ರೀಧರಮೂರ್ತಿ, ರೈತರ ಹಿತದೃಷ್ಟಿಯಿಂದ ಪೂರ್ಣಪ್ರಮಾಣದಲ್ಲಿ ಹೋರಾಟದಲ್ಲಿ ತೊಡಗಿಸಿಕೊಳ್ಳಲಾಗುವುದು. ಅರಣ್ಯದೊಳಗಿನ ದಿಬ್ಬ ಒಡೆದು ಹಳ್ಳದ ನೀರು ಡ್ಯಾಂನತ್ತ ಹರಿಸಬೇಕೇ ಅಥವಾ ಕಬಿನಿಯಿಂದ ಕೆರೆಗೆ ನೀರು ತುಂಬಿಸುವ ಯೋಜನೆಯಡಿ ಡ್ಯಾಂಗೆ ನೀರು ತುಂಬಿಸಬೇಕೇ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಭೆಗಳನ್ನು ನಡೆಸಿ ರೈತರಿಗೆ ಅನುಕೂಲವಾಗುವಂತಹ ರೀತಿಯಲ್ಲಿ ಸರಣಿ ಸಭೆಗಳು, ಧರಣಿಗಳನ್ನು ಕೈಗೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸಬೇಕೆಂದು ಮನವಿ ಮಾಡಿದರು.
ವಕೀಲ ಗೌಡಹಳ್ಳಿ ಮಹೇಶ್ ಮಾತನಾಡಿ, ಹೊಸಹಳ್ಳಿ ಡ್ಯಾಂ ಬಿಆರ್ ಟಿ ಹುಲಿರಕ್ಷಿತಾರಣ್ಯ ವ್ಯಾಪ್ತಿಯಲ್ಲಿದ್ದು, ಅರಣ್ಯದೊಳಗಿನ ದಿಬ್ಬ ಒಡೆದು ಡ್ಯಾಂಗೆ ನೀರು ಹರಿಸಲು ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಅನುಮತಿ ನೀಡದಿರುವ ಸಾಧ್ಯತೆಗಳೂ ಇವೆ. ಹೊಸಹಳ್ಳಿ ಡ್ಯಾಂ ನಿಂದ ಕೇವಲ ಒಂದು ಕಿ.ಮೀ ಅಂತರದಲ್ಲಿ ಕಬಿನಿ ನಾಲೆಯಿದ್ದು, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿಯಲ್ಲಿಯೇ ಡ್ಯಾಂಗೆ ನೀರು ತುಂಬಿಸುವಂತೆ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಬಹುದು. ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಗದಿದ್ದರೆ ರೈತರು ಕಾನೂನಾತ್ಮಕವಾಗಿ ಹೋರಾಟ ಕೈಗೆತ್ತಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಪ್ಪ, ಚಿನ್ನಸ್ವಾಮಿ, ಸಿದ್ದಪ್ಪ, ಗೋವಿಂದಶೆಟ್ಟಿ, ನಾಗರಾಜು, ಮಹದೇವಶೆಟ್ಟಿ, ಕೊಂಡೇಗೌಡ, ಮಲ್ಲಿಕಾರ್ಜುನ, ಗಣಿಗನೂರು ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.