ಟಿ. ಸತೀಶ್ ಜವರೇಗೌಡರಿಗೆ ಹೃದಯಸ್ಪರ್ಶಿ ಅಭಿನಂದನಾ ಕಾರ್ಯಕ್ರಮ

ಮೈಸೂರು : ದೀಪ್ತಿ ಸಾಂಸ್ಕೃತಿಕ ವೇದಿಕೆ ಹಾಗೂ ಗೋವಿಂದರಾವ್ ಮೆಮೋರಿಯಲ್ ಪಿಯು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಭಾಜನರಾಗಿರುವ ಸಾಹಿತಿ ಹಾಗೂ ಸಂಘಟಕ ಟಿ. ಸತೀಶ್ ಜವರೇಗೌಡ ಅವರಿಗೆ ಹೃದಯಸ್ಪರ್ಶಿ ಅಭಿನಂದನಾ ಕಾರ್ಯಕ್ರಮವು ನಗರದ ಶ್ರೀರಾಂಪುರದಲ್ಲಿರುವ ಕಾಲೇಜಿನ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.


ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಾಹಿತಿ ಟಿ. ಸತೀಶ್ ಜವರೇಗೌಡ ‘ಹೆತ್ತವರು ತಮ್ಮ ಮಕ್ಕಳಿಗೆ ಆಸ್ತಿ ಮತ್ತು ಆಭರಣ ಸಂಗ್ರಹಿಸಿಕೊಡುವದಕ್ಕೆ ನೀಡುವಷ್ಟೇ ಹೆಚ್ಚಿನ ಮುತುವರ್ಜಿಯನ್ನು, ಅವರಿಗೆ ಸಾಹಿತ್ಯದ ಉತ್ತಮ ಪುಸ್ತಕಗಳನ್ನು ಸಂಗ್ರಹಿಸಿಕೊಡುವ ದಿಕ್ಕಿನಲ್ಲಿಯೂ ವಹಿಸಬೇಕಾದ ಅಗತ್ಯ ತುಂಬಾ ಇದೆ’ ಎಂದರು.
‘ಪುಸ್ತಕಗಳಲ್ಲಿ ಒಂದು ತಲೆಮಾರಿನ ಅನುಭವ ಮತ್ತು ಜ್ಞಾನ ಹುದುಗಿರುತ್ತದೆ. ಜೀವನ ದರ್ಶನವೂ ಇರುತ್ತದೆ. ‌ವಿದ್ಯಾರ್ಥಿಗಳು, ಯುವಜನರು ಇಂತಹ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ, ಅವರ ಜೀವನದ ದೃಷ್ಟಿಕೋನ ಬದಲಾಗುತ್ತದೆ. ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಲು ಬೇಕಾದ ವ್ಯಕ್ತಿತ್ವ ಸಹ ಬೆಳೆಯುತ್ತದೆ’ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ. ರವಿ ಮಾತನಾಡಿ ‘ವಿದ್ಯಾರ್ಥಿಗಳಿಗೆ ಸೇವೆ ಮತ್ತು ಸಾಧನೆ ಮಾಡಲು ತುಂಬಾ ಅವಕಾಶಗಳಿವೆ. ಅವುಗಳನ್ನು ಬಳಸಿಕೊಂಡು ಬೆಳೆಯಬೇಕು. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿರುವ ಸತೀಶ್ ಜವರೇಗೌಡ ಅವರು ಕನ್ನಡದ ಆಸ್ತಿ. ಬಹುಮುಖಿ ವ್ಯಕ್ತಿತ್ವ ಹೊಂದಿರುವ ಅವರು ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ’ ಎಂದು ಶ್ಲಾಘಿಸಿದರು.
ಕೆ.ಆರ್. ನಗರ ತಾಲ್ಲೂಕು ಪಂಚಾಯಿತಿಯ ವ್ಯವಸ್ಥಾಪಕ ಕೆ.ಎಸ್. ಸತೀಶ್ ಕುಮಾರ್ ಮಾತನಾಡಿ ‘ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ನಾವು ತೊಡಗಿಸಿಕೊಳ್ಳುವುದರಿಂದ ಸಮಾಜಮುಖಿಯಾಗಬಹುದು. ಅದರೊಟ್ಟಿಗೆ ಸ್ನೇಹ ವಲಯದ ವಿಸ್ತರಣೆ ಕೂಡ ಆಗುತ್ತದೆ. ಕವಿ ಸತೀಶ್ ಜವರೇಗೌಡ ಅವರ ಒಡನಾಟದಿಂದ ನಾನು ಸಹ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಮಾಡಲು ಸಾಧ್ಯವಾಯಿತು. ಅವರಿಗೆ ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ ಲಭಿಸಿರುವುದು ಸೂಕ್ತವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಲೇಖಕ ಹಾಗೂ ಸಂಘಟಕ ಕಾಳಿಹುಂಡಿ ಶಿವಕುಮಾರ್ ರವರು ಪ್ರಾಸ್ತಾವಿಕ ಮತ್ತು ಸ್ವಾಗತ ಭಾಷಣದಲ್ಲಿ ನಮ್ಮ ಸಂಸ್ಥೆಯು ಸಾಧಕರನ್ನ ಗುರುತಿಸುತ್ತಿದ್ದು, ಸತೀಶ್ ರವರಿಗೆ ಪ್ರಶಸ್ತಿ ಬಂದ ಸಂದರ್ಭದಲ್ಲಿ ಅವರನ್ನ ಸನ್ಮಾನಿಸಲಾಗುತ್ತಿದೆ ಎಂದರು.
ಹಿರಿಯ ಲೇಖಕ ಕೊಕ್ಕಡ ವೆಂಕಟರಮಣ ಭಟ್ ಅವರು ‘ಶ್ರೀ ವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಭಾಜನಾಗಿರುವ ಕವಿ ಸತೀಶ್ ಜವರೇಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ದೀಪ್ತಿ ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳಾದ ಕಲಾ ಪ್ರಸಾದ್ ಅಭಿನಂದಿತರಾದ ಸಜಗೌ ಅವರ ಪರಿಚಯ ಮಾಡಿಕೊಟ್ಟರು. ನಿವೃತ್ತ ಹಿರಿಯ ಶುಶ್ರೂಷಕ ಕಣ್ಣೂರು ವಿ. ಗೋವಿಂದಾಚಾರಿ, ರಂಗಕರ್ಮಿ ಚಂದ್ರು ಮಂಡ್ಯ, ಕವಯತ್ರಿ ಅನಿತಾ ಅಶೋಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *