ಚಾಮರಾಜನಗರ: ವಿಶ್ವಭೂಪಟದಲ್ಲಿ ಬೆಂಗಳೂರಿಗೆ ಜಾಗತಿಕ ಸ್ಥಾನಮಾನ ದೊರಕಿಸಿಕೊಡುವ ಮೂಲಕ ವೈಜ್ಞಾನಿಕ ನಗರ ನಿರ್ಮಾಣಕ್ಕೆ ನಾಡಪ್ರಭು ಕೆಂಪೇಗೌಡರು ಅಡಿಗಲ್ಲು ಹಾಕಿದರು ಎಂದು ಮೈಸೂರಿನ ಸಾಹಿತಿಗಳಾದ ಟಿ. ಸತೀಶ್ ಜವರೇಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ಅವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಭಾಷಣ ಮಾಡಿ ಅವರು ಮಾತನಾಡಿದರು.
ಬೆಂಗಳೂರನ್ನು ಹೊರತುಪಡಿಸಿ ಕರ್ನಾಟಕವನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಮೈಸೂರು ಸಾಂಸ್ಕøತಿಕ ನಗರಿಯಾದರೇ ಬೆಂಗಳೂರು ಉದ್ಯಾನ ನಗರಿಯಾಗಿದೆ. ಅಲ್ಲದೆ ರಾಜ್ಯದ ಶಕ್ತಿಕೇಂದ್ರವು ಹೌದು. ಐ.ಟಿ.ಬಿ.ಟಿ ಸಿಟಿಯಾಗಿರುವ ಬೆಂಗಳೂರು ರಾಷ್ಟ್ರೀಯ, ಅಂತರಾಷ್ಟ್ರೀಯ ವಾಣಿಜ್ಯ, ವ್ಯಾಪಾರ ಕೇಂದ್ರವಾಗಿ ಬೆಳೆಯಲು ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಪರಿಕಲ್ಪನೆ ಕೆಂಪೇಗೌಡರದ್ದೇ ಆಗಿದೆ. ನಾಡಿನ ಎಲ್ಲಾ ಜನಾಂಗದ ಏಳಿಗೆಗಾಗಿ ಅವರವರ ಕುಲಕಸುಬನ್ನಾಧರಿಸಿದ ವೃತ್ತಿ ಕಟ್ಟಿಕೊಳ್ಳಲು ನೆರವು ನೀಡಿದ್ದಾರೆ ಎಂದರು.
ಅಧಿಕಾರ ವಿಕೇಂದ್ರಿಕರಣ ಹಾಗೂ ಉತ್ತಮ ಗ್ರಾಮಸಮಾಜ ನಿಮಾಣದ ಕನಸು ಕಂಡಿದ್ದ ಕೆಂಪೇಗೌಡರು ಸಣ್ಣಸಣ್ಣ ಕೈಗಾರಿಕೆಗಳು, ವ್ಯಾಪಾರಿಗಳನ್ನು ಪ್ರೋತ್ಸಾಹಿಸಿ ಅವರ ಕಾರ್ಯವೈಖರಿಗಳ ವಿಸ್ತಾರಕ್ಕೆ ಕಾರಣರಾದರು. ಮಳೆಯಾಶ್ರಿತ ಬೆಂಗಳೂರಿಗೆ ಸುತ್ತಮುತ್ತಲೂ ಸಾಕಷ್ಟು ಕೆರೆಕಟ್ಟೆ, ಕಲ್ಯಾಣಿಗಳನ್ನು ನಿರ್ಮಿಸುವ ಮೂಲಕ ರೈತರಿಗೆ, ಜಾನುವಾರುಗಳಿಗೆ ಅನುಕೂಲ ಕಲ್ಪಿಸಿದ್ದರು. ಕುಡಿಯುವ ನೀರಿಗಾಗಿ ನೀರಿನ ಸೆಲೆಗಳನ್ನು ಸ್ಥಾಪಿಸಿ ನಾಡಿನ ಜನರಿಗೆ ಶುದ್ಧ ನೀರು ಒದಗಿಸಲು ಸಂಕಲ್ಪ ಮಾಡಿದ್ದರು. ಬೆಂಗಳೂರಿನಲ್ಲಿ ನೆಲೆನಿಂತ ಎಲ್ಲಾ ವರ್ಗಗಳ ಜನರಿಗೂ ಮೂಲ ಸೌಲಭ್ಯ ಕಲ್ಪಿಸುವ ಮೂಲಕ ಕೆಂಪೇಗೌಡರು ವಿಶ್ವಮಾನವ ಪ್ರಜ್ಞೆವುಳ್ಳವರಾಗಿದ್ದರು ಎಂದು ತಿಳಿಸಿದರು.
ದಕ್ಷಿಣಭಾರತದ ಎಲ್ಲಾ ರಾಜ್ಯದ ರಾಜಧಾನಿಗಳು ಸಾಮಾನ್ಯವಾಗಿ ಸಮುದ್ರತೀರದಲ್ಲಿವೆ. ಯಾವುದೇ ಅತಿವೃಷ್ಠಿ, ಅನಾವೃಷ್ಠಿ, ಭೂಕಂಪ ಸಂಭವಿಸಿದರೆ ರಾಜ್ಯ ದುಸ್ಥಿತಿಗೀಡಾಗಲಿದೆ. ಅದನ್ನು ಅಂದಿನ ಕಾಲದಲ್ಲಿಯೇ ಮನಗಂಡಿದ್ದ ಕೆಂಪೇಗೌಡರು ಪ್ರಕೃತಿ ವಿಕೋಪಗಳಿಂದ ಸಂರಕ್ಷಣೆ ಸದುದ್ದೇಶದಿಂದ ರಾಜ್ಯದ ಮಧ್ಯಭಾಗದ ಬೆಂಗಳೂರನ್ನು ರಾಜಧಾನಿ ಮಾಡಿಕೊಳ್ಳ್ಳುವ ಮೂಲಕ ಪ್ರಪಂಚದ ನಗರ ಯೋಜನಾ ತಜ್ಞರಿಗೆ ಮಾದರಿಯಾಗಿದ್ದಾರೆ. ಇದನ್ನು ಮಾದರಿಯಾಗಿಸಿಕೊಂಡು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಕೆಂಪೇಗೌಡರ ಹೆಸರಿನಲ್ಲಿ ನಗರ ಯೋಜನಾ ಕಾಲೇಜು ಸ್ಥಾಪನೆ ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಸಂವಿಧಾನ ರೂಪುಗೊಳ್ಳುವ ಮೊದಲೇ ಸಂವಿಧಾನದ ಆಶಯಗಳನ್ನು ಮೈಗೂಡಿಸಿಕೊಂಡಿದ್ದ ಕೆಂಪೇಗೌಡರು ಇಂದಿನ ಎಲ್ಲಾ ನಾಯಕರಿಗೂ ಆದರ್ಶಪ್ರಾಯರಾಗಿದ್ದಾರೆ. ನಗರನಿರ್ಮಾಣದಲ್ಲಿ ವೈಜ್ಞಾನಿಕ ದೃಷ್ಠಿಕೊನ ಅಳವಡಿಸಿಕೊಂಡಿದ್ದ ಕೆಂಪೇಗೌಡರು ನಾಡಿನ ಸುರಕ್ಷತೆಗಾಗಿ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿಯೂ ರಾಜಗೋಪುರಗಳನ್ನು ನಿರ್ಮಿಸಿದರು. ದೇಶದ ಮಹಾನಗರಗಳಲ್ಲಿ ಬೆಂಗಳೂರು ಒಂದಾಗಿದೆ. ಇಂದು ಬೆಂಗಳೂರು ಸಾಕಷ್ಟು ಸಮಸ್ಯೆಗಳ ಅಗರವಾಗಿದೆ. ಮಾದಕ ವ್ಯಸನಿಗಳ ನಾಡಗುತ್ತಿದೆ. ಬೆಂಗಳೂರನ್ನು ಕೆಂಪೇಗೌಡರ ಮಾದರಿ ಬೆಂಗಳೂರಾಗಿಯೇ ಉಳಿಸಿಕೊಳ್ಳುವ ಅನಿವಾರ್ಯತೆ ಇಂದು ಎದುರಾಗಿದೆ ಎಂದು ಸಾಹಿತಿ ಟಿ. ಸತೀಶ್ ಜವರೇಗೌಡ ಅವರು ತಿಳಿಸಿದರು.