ನಾಡಪ್ರಭು ಕೆಂಪೇಗೌಡರ ಜನಪರ ಆಡಳಿತ ಇಂದಿಗೂ ಮಾದರಿಯಾಗಿದೆ : ಶಾಸಕ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ, ಜೂನ್ 30 (ಕರ್ನಾಟಕ ವಾರ್ತೆ):- ನವಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಜನಪರ ಆಡಳಿತ ಇಂದಿಗೂ ಮಾದರಿಯಾಗಿದೆ ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು

  ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ಅವರ 517ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

  ಇಡೀ ವಿಶ್ವದಲ್ಲೇ ಪ್ರಸಿದ್ಧಿಯಾಗಿರುವ ಬೆಂಗಳೂರು ಕೆಂಪೇಗೌಡ ಅವರ ಕನಸಿನ ನಗರವಾಗಿದೆ. ಆಗಿನ ಕಾಲದಲ್ಲಿ ಅತ್ಯಂತ ಸುಭಿಕ್ಷತೆಯಿಂದ ಕೂಡಿದ್ದ ವಿಜಯನಗರ ಸಾಮ್ರಾಜ್ಯದ ಮಾದರಿಯಲ್ಲಿ ಬೆಂಗಳೂರನ್ನು ಕಟ್ಟುವ ಕನಸು ಕಂಡು ಎಲ್ಲಾ ವರ್ಗಗಳ ಜನರಿಗೂ ಅವರವರ ಕುಲಕಸುಬಿಗೆ ಅನುಗುಣವಾಗಿ ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟ ನಾಡಪ್ರಭು ಕೆಂಪೇಗೌಡರ ಜನಪರ ಆಡಳಿತ ಇಂದಿಗೂ ಮಾದರಿಯಾಗಿದೆ ಎಂದು ಶಾಸಕರಾದ ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

  ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್ ಅವರು ಮಾತನಾಡಿ ಅಭಿವೃದ್ಧಿಗೆ ಅನೇಕ ದೂರದೃಷ್ಠಿ ಯೋಜನೆಗಳನ್ನು ಅನುಷ್ಟಾನ ಮಾಡಿದ ಕೆಂಪೇಗೌಡ ಅವರು ಬೆಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರೇರಣಾಶಕ್ತಿಯಾಗಿದ್ದಾರೆ. ಸಮಾನ ನೀರು ಹಂಚಿಕೆ ಯೋಜನೆ ಇಂದಿಗೂ ಪ್ರಸ್ತುತವಾಗಿದೆ. ಅವರ ಜೀವನಾದರ್ಶಗಳನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ ಎಂದು ತಿಳಿಸಿದರು.     

  ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಮಾತನಾಡಿ ಕೆಂಪೇಗೌಡ ಅವರು ಚಿಕ್ಕ ವಯಸ್ಸಿನಲ್ಲಿಯೇ 64 ವಿದ್ಯೆಗಳನ್ನು ಕರಗತ ಮಾಡಿಕೊಂಡ ಪರಾಕ್ರಮಯಾಗಿದ್ದರು. ವಿಜಯನಗರ ಸಾಮಂತ ರಾಜರಾಗಿದ್ದ ಕೆಂಪೇಗೌಡ ಅಲ್ಲಿನ  ವೈಭವವನ್ನು ಕಂಡು ಅಂತಹುದೇ ಸಮೃದ್ಧ ನಾಡು ಕಟ್ಟುವ ಇರಾದೆ ಹೊಂದಿದ್ದರು. ಅಭಿವೃದ್ಧಿಪರ ಆರ್ಥಿಕ ನೀತಿ ಜಾರಿ ಮಾಡಿದ್ದ ಕೆಂಪೇಗೌಡ ಅವರು ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಅನುಕೂಲವಾಗುವಂತೆ ಕೆರೆ-ಕಟ್ಟೆ ಕಟ್ಟಿಸಿ ನೀರಾವರಿ ಯೋಜನೆಗಳನ್ನು ಅನುಷ್ಟಾನಗೊಳಿಸಿ ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.

  ಸಮಾಜದ ಎಲ್ಲಾ ವರ್ಗಗಳ ಏಳಿಗೆಗಾಗಿ ಆಯಾ ಜನಾಂಗದ ವೃತ್ತಿಗನುಗುಣವಾಗಿ ಚಿಕ್ಕಪೇಟೆ, ಅಕ್ಕಿಪೇಟೆ, ದೊಡ್ಡಪೇಟೆ, ಕಾಟನ್ ಪೇಟೆ, ಚಾಮರಾಜಪೇಟೆ ಹೀಗೆ ವ್ಯಾಪಾರಕ್ಕಾಗಿ ಪೇಟೆಗಳನ್ನು ಬೆಂಗಳೂರಿನ ಸುತ್ತಲೂ ಸ್ಥಾಪಿಸಿ ಮಾರುಕಟ್ಟೆ ಸೌಲಭ್ಯ ಒದಗಿಸಿದರು. ಇಂದು ಎಲ್ಲಾ ಜಾತಿ, ಧರ್ಮ, ಭಾಷೆಯ ಜನರು ನೆಲೆ ನಿಂತು ಸರ್ವಜನಾಂಗದ ಶಾಂತಿಯ ತೋಟವಾಗಿರುವ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ವಿಶ್ವಪ್ರಸಿದ್ಧವಾಗಿದೆ. ನ್ಯಾಯಸಮ್ಮತ ಆಡಳಿತ ಪರಿಕಲ್ಪನೆಗೆ ನಾಡಪ್ರಭು ಕೆಂಪೇಗೌಡರು ಅಡಿಗಲ್ಲು ಹಾಕಿದ್ದರು ಎಂದು ಮರಿಸ್ವಾಮಿ ಹೇಳಿದರು.

  ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ ಅತ್ಯಂತ ವ್ಯವಸ್ಥಿತವಾಗಿ ಆಧುನಿಕ ಮಾದರಿಯಲ್ಲಿ ನಗರ ನಿರ್ಮಾಣ ಮಾಡುವಲ್ಲಿ ಕೇಂಪೇಗೌಡ ಅವರು ಅವೀಸ್ಮರಣೀಯ ವ್ಯಕ್ತಿಯಾಗಿದ್ದಾರೆ. ಯಾವುದೇ ಜಾತಿ, ಭೇದವಿಲ್ಲದೇ ಧರ್ಮಸಹಿಷ್ಣು ಆಡಳಿತ ನೀಡಿ ಎಲ್ಲರಿಗೂ ಸಮಾನವಕಾಶ ಕಲ್ಪಿಸಿದ್ದರು. ಅವರ ಆಡಳಿತ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು. 

  ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಹಾಗೂ ಸಮಾಜದ ಮುಖಂಡರಾದ ಪುಟ್ಟಸ್ವಾಮಿಗೌಡ ಅವರು ಮಾತನಾಡಿ ನಾಡಪ್ರಭು ಕೆಂಪೇಗೌಡರ ಜೀವನ ಸಾಧನೆಗಳನ್ನು ಸ್ಮರಿಸಿದರು.

  ಇದೇ ವೇಳೆ ನಾಡಪ್ರಭು ಕೆಂಪೇಗೌಡರ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.

  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜು, ಮೈಸೂರಿನ ಸಾಹಿತಿಗಳಾದ ಟಿ. ಸತೀಶ್ ಜವರೇಗೌಡ, ಸಮಾಜದ ಮುಖಂಡರಾದ ಚಿನ್ನಮುತ್ತು, ಪಣ್ಯದಹುಂಡಿ ರಾಜು, ಸೋಮಶೇಖರ್, ನಾಗೆಂದ್ರ, ಮಹೇಶ್‍ಗೌಡ, ಚಿನ್ನತಾಯಮ್ಮ, ಚಾ.ರಂ. ಶ್ರೀನಿವಾಸಗೌಡ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *