ಮೈಸೂರು: ರಮ್ಮನಹಳ್ಳಿಯಲ್ಲಿರುವ ಸಂತ ಜೋಸೆಫರ ಮಹಿಳಾ ಕಾಲೇಜಿನ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಗುರುಗಳಾದ ಎಡ್ವರ್ಡ್ ವಿಲಿಯಂ ಸಲ್ಡನ ಅವರು ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿದರು.
ಶಾಲೆಯ ಸಾಂಸ್ಕೃತಿಕ ವೇದಿಕೆ ಮತ್ತು ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಚಾಲನೆ ನೀಡಿ ನಂತರ ಮಾತನಾಡಿದ ಮೈಸೂರಿನ ಎಂ.ಡಿ.ಇ.ಎಸ್ ಕಾರ್ಯದರ್ಶಿಯವರಾದ ಎಡ್ವರ್ಡ್ ವಿಲಿಯಂ ಸಲ್ಡನ ಅವರು, ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.
ವಿದ್ಯಾರ್ಥಿಗಳು ತಮಗೆ ಸಿಗುವಂತಹ ಪ್ರತಿಯೊಂದು ಅವಕಾಶವನ್ನೂ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ನೂತನ ವಿದ್ಯಾರ್ಥಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.
ವಿದುಷಿ ಪೃಥ್ವಿ ಭಾಸ್ಕರ್ ಅವರು ಮಾತನಾಡುತ್ತ ಈ ಕಾರ್ಯಕ್ರಮಕ್ಕೆ ಇರಿಸಿರುವ ಆರೋಹಣ ಎಂಬ ಹೆಸರು ಸಂಗೀತ ಕ್ಷೇತ್ರಕ್ಕೆ ಅತೀ ಹತ್ತಿರವಾದದ್ದು, ನಮ್ಮ ಬದುಕಿಗೂ ಕೂಡ ಅಷ್ಟೇ ಮಹತ್ವವಾದದ್ದು. ಸಮಯಪ್ರಜ್ಞೆ, ಶ್ರಮ ವಹಿಸಿದ ದುಡಿಮೆ, ತಲ್ಲೀನತೆ, ತೊಡಗಿಸಿಕೊಳ್ಳುವಿಕೆ, ಸಂಘಟನೆ ಇವೆಲ್ಲವನ್ನು ತನ್ನೊಳಗೆ ಅಡಗಿಸಿಕೊಂಡಿದೆ. ನಮ್ಮ ಬದುಕಿನೊಳಗೆ ಇವನ್ನೆಲ್ಲ ಅತ್ಯಂತ ಪ್ರಾಮಾಣಿಕತೆ ಮತ್ತು ನಿಷ್ಠೆವಹಿಸಿ ತಂದುಕೊಂಡದ್ದೇ ಆದರೆ ಅಲ್ಲಿಂದಲೇ ನಮ್ಮೊಳಗಿನ ಆರೋಹಣ ಆರಂಭವಾಗುತ್ತದೆ. ಇದರೊಟ್ಟಿಗೆ ಚಾರಿತ್ಯ ಕೂಡ ಬಹುಮುಖ್ಯವಾದದ್ದು, ಅದು ನಮ್ಮ ಬದುಕನ್ನು ಮತ್ತಷ್ಟು ವರ್ಣರಂಜಿತಗೊಳಿಸುತ್ತದೆ. ನನ್ನ ಇವತ್ತಿನ ಬೆಳವಣಿಗೆ ಕಲಿಸುವುದರೊಟ್ಟಿಗೆ ನನ್ನ ಸಾಧನೆಗೆ ಬೆಂಬಲವಾಗಿ ನಿಂತು ಬೆನ್ನುತಟ್ಟಿ ಪ್ರೋತ್ಸಾಹಿಸಿದವರಲ್ಲಿ ಸಂತ ಜೋಸೆಫರ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಕರಿದ್ದಾರೆ ಎನ್ನುವುದು ನನಗೆ ಅತ್ಯಂತ ವಿನಯ ಮತ್ತು ಹೆಮ್ಮೆಯ ಸಂಗತಿ ಎಂದರು. ತಮ್ಮ ಕಂಠಸಿರಿಯ ಮೂಲಕ ಗೀತೆಗಳನ್ನು ಹಾಡಿ ರಂಜಿಸಿದ್ದಲ್ಲದೆ, ವೈಯಲಿನನ್ನು ನುಡಿಸಿ ವಿದ್ಯಾರ್ಥಿಗಳ ಕರ್ಣಾರವಿಂದಗಳನ್ನು ಆನಂದಗೊಳಿಸಿ, ತನುಮನವನ್ನು ರಂಜಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಅಧ್ಯಾಪಕಿಯರಾದ ಶ್ರೀಮತಿ ರಚನಾ ಪ್ರದೀಪ್,ಸಹಾಯಕ ಪ್ರಾಧ್ಯಾಪಕಿ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ಅವರ “ಮಾನವ ಸಂಪನ್ಮೂಲ ನಿರ್ವಹಣೆ” ಹಾಗೂ ಶ್ರೀಮತಿ ನಗ್ಮಾ ಸುಲ್ತಾನ, ಸಹಾಯಕ ಪ್ರಾಧ್ಯಾಪಕಿ, ವಾಣಿಜ್ಯ ವಿಭಾಗದ ಅವರ “ಅಂತರರಾಷ್ಟ್ರೀಯ ಮಾರುಕಟ್ಟೆ” ವಿಷಯ ಕುರಿತ ಎರಡು ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಂದನೀಯ ಗುರುಗಳು ಹಾಗೂ ಎಂ.ಡಿ.ಇ.ಎಸ್, ಖಜಾಂಚಿಯವರಾದ ನವೀನ್ ಕುಮಾರ್, ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಪೂರ್ಣಿಮ ಎನ್, ಸಾಂಸ್ಕೃತಿಕ ವೇದಿಕೆ ಮತ್ತು ಕ್ರೀಡಾ ವಿಭಾಗಗಳ ಸಂಚಾಲಕರಾದ ಶ್ರೀಮತಿ ಯಶಸ್ವಿನಿ, ಡಾ. ವಾಣಿ ಕ್ರಿಸ್ಟೋಫರ್ ರವರು ಉಪಸ್ಥಿತರಿದ್ದರು.
ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಮೈತ್ರಿ ಜೋಸೆಫ್ ಮತ್ತು ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಅತೀಬಾ ಕಾರ್ಯಕ್ರಮದ ನಿರೂಪಣೆ ಮಾಡಿದರೆ, ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಜೋಹರಾ ನೆರವೆರಿಸಿದರು, ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಪೂಜಾ ಎಲ್ಲರಿಗೂ ವಂದಿಸಿದರು.