ಚಾಮರಾಜನಗರ : ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಯನ್ನು ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜೀರವರ ಅಮೃತ ಹಸ್ತದಿಂದ ಮಾಡಿಸುವಂತೆ ಕೋರಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರ ಮುಖಾಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡ ಮಹಾಸಭಾದ ಅಧ್ಯಕ್ಷ ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಶ್ರೀರೂಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮೈಸೂರು ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಪ್ರಪಂಚದ ಮೂಲೆ ಮೂಲೆಗಳಿಂಲೂ ಲಕ್ಷಾಂತರ ಜನರು ಆಗಮಿಸುತ್ತಾರೆ ಮತ್ತು ಈ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಹಿಂದೆ ನಮ್ಮ ದೇಶದ ಅತ್ಯುನ್ನತ ವ್ಯಕ್ತಿಗಳು ಮತ್ತು ನಮ್ಮ ನಾಡಿನ ಅತ್ಯುನ್ನತ ವ್ಯಕ್ತಿಗಳು ಉದ್ಘಾಟಿಸಿ ಅದಕ್ಕೆ ಒಂದು ಮೆರಗನ್ನು ತಂದಿದ್ದಾರೆ ಮತ್ತು ಈ ಹಿಂದೆ ಈ ದಸರಾ ಉದ್ಘಾಟನೆಯನ್ನು ಸಾಮಾನ್ಯ ರೈತರೊಬ್ಬರು ಉದ್ಘಾಟನೆ ಮಾಡಿರುವುದು ಇತಿಹಾಸವೇ ಸರಿ. ಅದರಂತೆಯೆ ಈ ಸಾರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಯನ್ನು ಬಹಳಷ್ಟು ವರ್ಷಗಳಿಂದ ಈ ನಾಡಿನ ಸರ್ವತೋನ್ಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮತ್ತು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಇಡೀ ದೇಶದಲ್ಲೇ ಇತಿಹಾಸವನ್ನು ನಿರ್ಮಿಸಿ ನಮ್ಮ ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದರ ಮೂಲಕ ಕೋಟ್ಯಾಂತರ ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ನಿರ್ಮಿಸಿರುವ ಮತ್ತು ಅನ್ನದಾಸೋಹ, ಆರೋಗ್ಯ, ಇನ್ನೀತರ ಸಮಾಜಮುಖಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದಾ ಜನರೊಡನೆ ಇರುವ ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿಗಳವರ ಅಮೃತ ಹಸ್ತದಿಂದ ಉದ್ಘಾಟನೆ ಮಾಡಿಸಬೇಕಾಗಿ ನಾಡಿನ ಸಮಸ್ತ ಜನತೆಯ ಪರವಾಗಿ ಮುಖ್ಯಮಂತ್ರಿ ಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು, ಕೃಷ್ಣಕುಮಾರ್, ಶಿವಣ್ಣ ಹೊಸೂರು, ರವಿಚಂದ್ರಪ್ರಸಾದ್ ಕಹಳೆ,
ಆಟೋ ಲಿಂಗರಾಜು, ಅರುಣಕುಮಾರ್ ಗೌಡ, ಸುಬ್ಬಯ್ಯ, ಮಹೇಶ್, ಅಮಚವಾಡಿ ರಾಜು, ತಾಂಡವಮೂರ್ತಿ, ವೀರಭದ್ರ, ರಾಚಪ್ಪ, ಚಾ.ಸಿ.ಸಿದ್ದರಾಜು, ರಂಗಸ್ವಾಮಿ ಇತರರು ಹಾಜರಿದ್ದರು.