ಚಾಮರಾಜನಗರ: ಪ್ರತಿಯೊಂದು ಹೆಣ್ಣುಮಗುವಿನ ರಕ್ಷಣೆ, ಜವಾಬ್ದಾರಿ ಪ್ರಜ್ಞಾವಂತ ನಾಗರಿಕ ಸಮಾಜದಲ್ಲಿರುವ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ ಅವರು ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕೇಂದ್ರ ಪುರಸ್ಕøತ ಯೋಜನೆ ಬೇಟಿ ಬಚಾವೋ-ಬೇಟಿ ಪಡಾವೋ ಅಭಿಯಾನದಡಿ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳು, ಮಹಿಳೆಯರು ಅಡುಗೆಮನೆಗೆ ಮಾತ್ರ ಸೀಮಿತವಾಗಿದ್ದರು. ಸಾಕಷ್ಟು ದೌರ್ಜನ್ಯಗಳನ್ನು ಅನುಭವಿಸುತ್ತಿದ್ದರು. ಲಿಂಗ ತಾರತಮ್ಯ, ಲೈಂಗಿಕ ದೌರ್ಜನ್ಯ, ಹೆಣ್ಣುಮಕ್ಕಳು ಕುಟುಂಬಕ್ಕೆ ಭಾರ, ಸಾಮಾಜಿಕ ತಾತ್ಸಾರಕ್ಕೆ ಒಳಗಾಗಿದ್ದ ಹೆಣ್ಣುಮಕ್ಕಳು ಬದಲಾದ ಕಾಲಘಟ್ಟದಲ್ಲಿ ಸಂವಿಧಾನ ಜಾರಿಯಾದ ಬಳಿಕ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಕ್ಷೇತ್ರಗಳು ಸೇರಿದಂತೆ ಎಲ್ಲಾ ರಂಗದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಸಂವಿಧಾನದಡಿ ಹೆಣ್ಣುಮಕ್ಕಳ ರಕ್ಷಣೆಗೆ ಹಲವಾರು ಕಾನೂನುಗಳು ಜಾರಿಯಾಗಿದ್ದು, ಉನ್ನತ ವಿದ್ಯಾಭ್ಯಾಸ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಹೆಣ್ಣುಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಬೇಕು. ಮಕ್ಕಳ ರಕ್ಷಣೆಗೆ 54 ಹಕ್ಕುಗಳಿದ್ದು, ಅವುಗಳಲ್ಲಿ ಬದುಕುವ ಹಕ್ಕು, ಅಭಿವೃದ್ಧಿ ಹೊಂದುವ, ಭಾಗವಹಿಸುವ ಹಕ್ಕು, ದೌರ್ಜನ್ಯದಿಂದ ರಕ್ಷಣೆ ಹಕ್ಕು, ಮಾನವ ಕಳ್ಳ ಸಾಗಣೆ ತಡೆಯುವ ಹಕ್ಕುಗಳು ಪ್ರಮುಖವಾಗಿವೆ. ಹೆಣ್ಣುಮಕ್ಕಳು ಬಾಲ್ಯವಿವಾಹ ಆಗಬಾರದು. ಮಕ್ಕಳಿಗೆ 18 ವರ್ಷ ತುಂಬಿದ ತಕ್ಷಣವೇ ಪೋಷಕರು ಮದುವೆ ಮಾಡಲು ನಿರ್ಧರಿಸುತ್ತಾರೆ, ಇದು ಸಲ್ಲದು. 18 ವರ್ಷದ ನಂತರವೂ ಉನ್ನತ ಶಿಕ್ಷಣ ಪಡೆದು ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಧೀಶರಾದ ಈಶ್ವರ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ 2018ರಲ್ಲಿ ಬೇಟಿ ಬಚಾವೋ-ಬೇಟಿ ಪಡಾವೋ ಕಾರ್ಯಕ್ರಮ ಜಾರಿಯಾಗಿದೆ. ದೇಶ ಸ್ವಾತಂತ್ರ್ಯನಂತರ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಸರ್ಕಾರವು ಸಾಕಷ್ಟು ಕಾಯ್ದೆಗಳು ಜಾರಿಯಾಗಿದೆ. ಹೆಣ್ಣುಮಕ್ಕಳಿಗೆ ಕಾನೂನಿನ ರಕ್ಷಣೆ ಇದ್ದರೂ ಇನ್ನೂ ರಕ್ಷಣೆ ಮಾಡಬೇಕೆನ್ನುವುದು ವಿಪರ್ಯಾಸವೇ ಆಗಿದೆ. ಯಾವುದು ಸರಿ, ಯಾವುದು ತಪ್ಪು ಎಂಬುದರ ಬಗ್ಗೆ ಹೆಣ್ಣುಮಕ್ಕಳು ಚಿಂತನೆ ಮಾಡಬೇಕು. ಹೆಣ್ಣುಮಕ್ಕಳ ಆಲೋಚನೆ, ಚಿಂತನೆ, ನಿರ್ಧಾರಗಳೇ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿವೆ ಎಂದರು.
ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಹೆಣ್ಣು ಮತ್ತು ಗಂಡುಮಕ್ಕಳಲ್ಲಿನ ವ್ಯತ್ಯಾಸವೆಂದರೇ ಅದು ಜೈವಿಕ ಬದಲಾವಣೆ ಮಾತ್ರವಾಗಿದೆ. ಪುರುಷ, ಮಹಿಳೆಯರಿಬ್ಬರೂ ಸಮಾನರೇ ಆಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಣ್ಣುಮಕ್ಕಳು ಮುಂದಿದ್ದಾರೆ. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವರೆಗೂ ಹೆಣ್ಣುಮಕ್ಕಳು ಉನ್ನತ ರ್ಯಾಂಕಿಂಗ್‍ನಲ್ಲಿದ್ದರೂ ಬಳಿಕ ಕಳೆಗುಂದುತ್ತಿದ್ದಾರೆ. ಈ ಹಂತದಲ್ಲಿ ಚಿಂತನೆ ಅಗತ್ಯವಿದೆ. ಮಕ್ಕಳು ಏನೇ ಸಮಸ್ಯೆಗಳಿದ್ದರೂ ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅವರು ಸಂವಿಧಾನದಡಿ ಎಲ್ಲರಿಗೂ ಸಮಾನ ಅವಕಾಶಗಳಿವೆ. ಹೆಣ್ಣುಮಕ್ಕಳು ತಮ್ಮ ಹಕ್ಕುಗಳ ಅರಿವನ್ನು ಪಡೆದುಕೊಳ್ಳಬೇಕು. ಬಾಲ್ಯ ವಿವಾಹವನ್ನು ಹೆಣ್ಣುಮಕ್ಕಳೆ ವಿರೋಧಿಸಬೇಕು. ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸಿದ್ದವಿದೆ. ಇಲಾಖೆಯಿಂದ ಎಲ್ಲಾ ಅಗತ್ಯ ನೆರವನ್ನು ನೀಡಲಾಗುವುದು ಎಂದರು.
ಇದೇ ವೇಳೆ ಗಣ್ಯರು ಹೆಣ್ಣುಮಕ್ಕಳ ರಕ್ಷಣೆ ಕುರಿತ ಭಿತ್ತಿಪತ್ರ ಬಿಡುಗಡೆ ಮಾಡಿದರು. ಅಲ್ಲದೆ ಪ್ರತಿಭಾವಂತ ಕ್ರೀಡಾಪಟುಗಳಿಗೆ ಗೌರವಧನ ಚೆಕ್ ವಿತರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಎಚ್.ಆರ್. ಸುರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಕೃಷಿ ಇಲಾಖೆ ಉಪನಿರ್ದೇಶಕರಾದ ಸುಷ್ಮಾ, ಪದವಿಪೂರ್ವ ಇಲಾಖೆಯ ಉಪನಿರ್ದೇಶಕರಾದ ಪುಟ್ಟಗೌರಮ್ಮ, ಸಣ್ಣ ಉಳಿತಾಯ ಇಲಾಖೆ ಸಹಾಯಕ ನಿರ್ದೇಶಕರಾದ ತ್ರಿವೇಣಿ, ಮಕ್ಕಳ ಕಲ್ಯಾಣ ಸಮಿತಿಯ ಲತಾ, ಸ್ವಯಂ ಸೇವಾ ಸಂಸ್ಥೆಯ ಗಂಗಾಧರ್, ಜಿಲ್ಲಾ ನಿರೂಪಣಾಧಿಕಾರಿ ಮಂಜುಳ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.