ಚಾಮರಾಜನಗರ ವನಸಿರಿ ಪ್ರಕೃತಿ ಮಾತೆಯ ತವರೂರು. ವನ್ಯ ಸಂಪತ್ತಿನ ತಾಣ ಹಾಗೂ ಭುವನೇಶ್ವರಿ ತಾಯಿಯ ಪದತಲ. ಅಪ್ರತಿಮ ನೈಸರ್ಗಿಕ ಸಂಪತ್ತು ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಬೆನ್ನಿಗಿರುವ ಜೀವಂತ ಸಂಸ್ಕೃತಿಯ ಜಾನಪದ ಕಲೆಗಳ ಕಣಜ.
ಮೂಲತಹ ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರದ ಪುರಾತನ ಹೆಸರು ಅರಿಕೊಠಾರ. ಮೈಸೂರು ಸಂಸ್ಥಾನದ ಮಹಾರಾಜ ಚಾಮರಾಜ ಒಡೆಯರ್ ಅವರ ಜನ್ಮಸ್ಥಳವಿದು. ಕ್ರಿಸ್ತಶಕ 1774ರಲ್ಲಿ ಚಾಮರಾಜ ಒಡೆಯರ್ ಇಲ್ಲಿ ಜನಿಸಿದ್ದರಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ತಂದೆಯ ಸ್ಮರಣಾರ್ಥ ಈ ನಗರಕ್ಕೆ ಚಾಮರಾಜನಗರ ಎಂದು ನಾಮಕರಣ ಮಾಡಿದರು.
ಈ ಪ್ರದೇಶವು ತನ್ನದೇ ಆದ ಐತಿಹಾಸಿಕ ವಿಚಾರವನ್ನು ಒಳಗೊಂಡಿದೆ. ಗಂಗರು, ಕದಂಬರು, ಚಾಲುಕ್ಯರು, ಹೊಯ್ಸಳರು ಯದುವಂಶದ ರಾಜರು ಈ ರಾಜ್ಯವನ್ನಾಳಿರುವ ಬಗ್ಗೆ ಅನೇಕ ಶಾಸನಗಳಲ್ಲಿ ನಾವು ಇಂದಿಗೂ ಕಾಣಬಹುದಾಗಿರುತ್ತದೆ. ಚಾಮರಾಜನಗರ ಹೃದಯ ಭಾಗವಾದ ಚಾಮರಾಜೇಶ್ವರನೇ ಈ ಜಿಲ್ಲೆಯ ಅಧಿದೇವತೆ. ಶತಮಾನಗಳ ಇತಿಹಾಸವಿರುವ ಅರಿಕೊಠಾರ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಈ ನಗರದ ನೈರುತ್ಯ ದಿಗ್ಬಾಗದಲ್ಲಿ ಕರಿವರದ ವೆಂಕಟನಾರಾಯಣ ಸ್ವಾಮಿಗೆ ಅಂದಿನ ಅರಿಕೊಠಾರದ ಪ್ರಭುವಾಗಿ ರಾಜ್ಯಭಾರ ನಡೆಸುತ್ತಿದ್ದ ಹಿರಿ ಚೆನ್ನರಾಜ ಶಾಲಿವಾಹನ ಶಕ 1688 ರಲ್ಲಿ ಅಲ್ಲಿನ ಪಾಕಶಾಲೆಯ ಶಾಸನ ಒಂದರಲ್ಲಿ ಅರಿಕೊಠಾರ ಎಂಬ ಸ್ಥಳದ ಬಗ್ಗೆ ಉಲ್ಲೇಖವಿದೆ. ಇಲ್ಲಿನ ವೀರಭದ್ರಸ್ವಾಮಿ ದೇವಾಲಯದಲ್ಲಿರುವ ಕ್ರಿಸ್ತಶಕ 1527 ರ ಶಾಸನವೊಂದರಲ್ಲಿ ವೀರ ವೆಂಕಟಪತಿ ಮಹದೇವರಾಯರು ಈ ಅರಿಕೊಠಾರದ ರಾಜರಾಗಿದ್ದು , ಈ ದೇವಾಲಯಕ್ಕೆ ದತ್ತಿ ನೀಡಿದ ವಿಚಾರವಿರುವ ಶಾಸನದಲ್ಲಿ ಅರಿ ಕೊಠಾರ ಎಂಬ ಶಬ್ದ ಉಲ್ಲೇಖವಿರುವುದನ್ನು ನಾವು ಗಮನಿಸಬಹುದು ಅರಿ ಎಂದರೆ ಧಾನ್ಯ ಗಳೆಂದೂ, ಕೊಠಾರ ಎಂದರೆ ರಾಶಿ ಎಂದು ಅರ್ಥ ಇರುವುದರಿಂದ ಅರಿಕೊಠಾರ ಎಂದರೆ ಧಾನ್ಯಗಳನ್ನು ಒಕ್ಕಣೆ ಮಾಡುವ ಜಾಗ ಎಂಬ ಅರ್ಥ ಇದೆ.
ಯದು ವಂಶದ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು 1799 ರಿಂದ 1868 ರ ವರೆಗೆ ರಾಜ್ಯಭಾರ ಮಾಡಿದ ಅವಧಿಯಲ್ಲಿ, ತಮ್ಮ ತಂದೆ ತಾಯಿಯವರ ಹೆಸರುಗಳಲ್ಲಿ ಶ್ರೀ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಾಲಯ ವನ್ನು ಜನನ ಮಂಟಪದ ಪೂರ್ವ ಭಾಗದಲ್ಲಿ 5 ಎಕರೆಗೂ ಮಿಗಿಲಾದ ವಿಶಾಲ ಪ್ರದೇಶದಲ್ಲಿ ಶೈವಾಗಮಾನುಸಾರ ದ್ರಾವಿಡ ಶೈಲಿಯನ್ನುನುಸರಿಸಿ ನವ ಬೇರಯುಕ್ತವಾದ ಶಿವ ದೇವಾಲಯವನ್ನು ನಿರ್ಮಿಸಿ, ಶೃಂಗೇರಿ ಮಠದಲ್ಲಿದ್ದ ಒಂದು ರಕ್ತವರ್ಣದ ಲಿಂಗವನ್ನು ತರಿಸಿ ಕ್ರಿ.ಶ 1826 ನೇ ಇಸವಿಯಲ್ಲಿ ಪ್ರತಿಷ್ಠಾಪಿಸಿ ಅದಕ್ಕೆ ಚಾಮರಾಜೇಶ್ವರ ಎಂಬ ಹೆಸರಿನಿಂದ ನಾಮಕರಣ ಮಾಡಿದರು. ನಂತರ ಅರಿಕೊಠಾರವು ಚಾಮರಾಜನಗರ ಎಂದು ಪರಿವರ್ತನೆಗೊಂಡಿತು. ಸುಂದರ ವಿಶಾಲ ಪ್ರಾಂಗಣ, ನಯನ ಮನೋಹರ 75 ಅಡಿಗಳ ಪಂಚ ಸ್ಪರ್ಶಾಯುಕ್ತ ರಾಜ ಗೋಪುರ ವೈವಿಧ್ಯಮಯ ಕಲಾಕುಸುರಿಗಳು ಆಂತರಿಕ ಗರ್ಭಗುಡಿಗಳು ಈ ದೇವಾಲಯದ ವೈಶಿಷ್ಟ್ಯಗಳು.
ಈ ದೇವಾಲಯದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವವು ಜ್ಯೇಷ್ಠ ಆಷಾಡ ಮಾಸದಲ್ಲಿ 5-6 ದಿವಸಗಳು ವಿಶೇಷವಾಗಿ ಹಲವಾರು ಆಕರ್ಷಣೀಯ ಉತ್ಸವಗಳು, ಅನೇಕ ಸಾಂಸ್ಕೃತಿಕ ಚಟುವಟಿಕೆಗಳು ಎಡೆಬಿಡದೆ ನಡೆದುಕೊಂಡು ಬರುತ್ತಿವೆ.
ಶ್ರೀ ಚಾಮರಾಜೇಶ್ವರ ಸ್ವಾಮಿ ರಥೋತ್ಸವವು ಪ್ರತಿ ವರ್ಷವೂ ಆಷಾಡ ಮಾಸದ ಪೂರ್ವಾಷಾಡ ನಕ್ಷತ್ರದಂದು ನಡೆಯುತ್ತದೆ.
ನಾಡಿನಲ್ಲಿಯೇ ಆಷಾಢಮಾಸದಲ್ಲಿ ನಡೆಯುವ ಏಕೈಕ ಜಾತ್ರಾ ಮಹೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀ ಚಾಮರಾಜೇಶ್ವರ ಸ್ವಾಮಿ ಮಹಾ ರಥೋತ್ಸವದಲ್ಲಿ, ಹೊಸದಾಗಿ ಮದುವೆಯಾದ ಸಾವಿರ – ಸಾವಿರಾರು ಸಂಖ್ಯೆಯ ನವದಂಪತಿಗಳು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹಣ್ಣು ಜವನವನ್ನು ರಥಕ್ಕೆ ಎಸೆದು ಪ್ರಾರ್ಥನೆ ಮಾಡುವುದು ವಿಶೇಷವಾಗಿದೆ.
ಒಟ್ಟಿನಲ್ಲಿ ರಥೋತ್ಸವ ಸಾರ್ವತ್ರಿಕ ಜಾನಪದ ಸಾಂಸ್ಕೃತಿಕ ವಿಶಿಷ್ಟವಾದ ಸಂಪ್ರದಾಯವಾಗಿದೆ.
ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಾಲಯದ ಒಳಗೆ ಇರುವ ಶಿಲಾಶಾಸನದಲ್ಲಿ ಇರುವ ಮಹತ್ವದ ಬರಹವನ್ನು ಸಾರ್ವಜನಿಕರು ಗಮನಿಸಬಹುದು.
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯವನ್ನು ಬಿಟ್ಟರೆ ನಮ್ಮ ನಾಡಿನಲ್ಲಿ ಈ ಬೃಹದಾಕಾರವುಳ್ಳ ದ್ರಾವಿಡ ಶೈಲಿಯ ದೇವಾಲಯವು ಎರಡನೆಯದೆಂದು ಚಾಮರಾಜನಗರ ಪಟ್ಟಣದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಾಲಯವನ್ನು ಪರಿಗಣಿಸಬಹುದು.
ಚಾಮರಾಜನಗರದಲ್ಲಿ 2026 ಜುಲೈ 28 ರಂದು 200ನೇ ವರ್ಷದ ಶ್ರೀ ಚಾಮರಾಜೇಶ್ವರ ಸ್ವಾಮಿ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಿ.

ಸಿ.ಎಂ.ನರಸಿಂಹಮೂರ್ತಿ
ಅಂತರಾಷ್ಟ್ರೀಯ ಹಾಡುಗಾರ