ಚಾಮರಾಜನಗರ: ಹವಾಮಾನ ವೈಪರೀತ್ಯಕ್ಕೆ ಪರ್ಯಾಯ ಬೆಳೆ ಯೋಜನೆಯಡಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆ ಕೊರತೆ ಕಂಡು ಬರಲಿದ್ದು, ಜಿಲ್ಲೆಯ ರೈತ ಭಾಂದವರು ಮುಂಗಾರಿನಲ್ಲಿ ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳ ಆಯ್ಕೆ ಮಾಡಿ ಬಿತ್ತನೆ ಮಾಡುವುದು ಅಗತ್ಯವಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಜಿಲ್ಲೆಯಲ್ಲಿ ಮುಂಗಾರು ಮತ್ತು ಪೂರ್ವ ಮುಂಗಾರಿನಲ್ಲಿ ಸುಮಾರು 95 ಸಾವಿರ ಹೆಕ್ಟೇರ್‍ಗಿಂತ ಹೆಚ್ಚು ಪ್ರದೇಶದಲ್ಲಿ ವಿವಿಧ ಕೃಷಿ ಬೆಳೆಗಳು ಬಿತ್ತನೆಯಾಗುವುದು ವಾಡಿಕೆಯಾಗಿದೆ. ಪೂರ್ವ ಮುಂಗಾರು ಬೆಳೆಗಳಾದ ಜೋಳ, ಸೂರ್ಯಕಾಂತಿ, ಹತ್ತಿ, ದ್ವಿದಳ ಧಾನ್ಯ ಬೆಳೆಗಳು ಈಗಾಗಲೇ ಬಿತ್ತನೆಯಾಗಿದ್ದು, ತೇವಾಂಶದ ಕೊರತೆಯಿಂದ ಬೆಳೆಗಳು ಬಾಡುತ್ತಿರುವುದು ಸಹಜವಾಗಿ ಕಂಡು ಬಂದಿದೆ.
ಜುಲೈ ಮಾಹೆಯಿಂದ ಸಾಮಾನ್ಯವಾಗಿ ರಾಗಿ, ಮುಸುಕಿನ ಜೋಳ, ಭತ್ತ ಮುಂತಾದ ಕೃಷಿ ಬೆಳೆಗಳನ್ನು ಬೆಳೆಯುವುದು ವಾಡಿಕೆ. ಈಗಾಗಲೇ ಮುಂಗಾರು ಹಂಗಾಮಿಗೆ ಮಳೆ ಕೊರತೆಯಾಗುವ ಸಂಭವದ ಬಗ್ಗೆ ಹವಾಮಾನ ಇಲಾಖೆಯು ತಿಳಿಸಿರುವುದರಿಂದ ಮುಂಗಾರಿನಲ್ಲಿ ಅಲ್ಪಾವಧಿ ತಳಿಗಳು ಹಾಗೂ ಬರ ಸಹಿಷ್ಣ್ಣುವಿಕೆಗೆ ತಕ್ಕ ಬೆಳೆಗಳನ್ನು ಬೆಳೆಯುವುದು ಉತ್ತಮವಾಗಿದೆ. ಈಗಾಗಲೇ ಬೆಳವಣಿಗೆ ಹಂತದಲ್ಲಿರುವ ಬೆಳೆಗಳಿಗೆ ವಿವಿಧ ಬೇಸಾಯ ಕ್ರಮಗಳನ್ನು ಅಳವಡಿಸಿ ಬೆಳೆಗಳನ್ನು ಉಳಿಸಿಕೊಳ್ಳುವುದು ಹಾಗೂ ತಕ್ಕಮಟ್ಟಿನ ಇಳುವರಿ ಪಡೆಯುವುದು ಅವಶ್ಯಕವಾಗಿರುತ್ತದೆ.
ನೀರಾವರಿ ಪ್ರದೇಶಗಳಲ್ಲಿ ಹೆಚ್ಚು ನೀರು ಅವಶ್ಯಕವಿರುವ ಭತ್ತ ಮತ್ತು ಕಬ್ಬುಬೆಳೆಯದೆ ಪರ್ಯಾಯವಾಗಿ ಕಡಿಮೆ ನೀರನ್ನು ಬಳಸಿಕೊಳ್ಳುವ ಬೆಳೆ ಬೆಳೆಯುವುದು ಸೂಕ್ತವಾಗಿದೆ. ಪ್ರಮುಖವಾಗಿ ಮುಂಗಾರಿನಲ್ಲಿ ಅಲ್ಪಾವಧಿ ಬೆಳೆ ಮತ್ತು ತಳಿಗಳು ಹಾಗೂ ತಡ ಮುಂಗಾರಿನಲ್ಲಿ ಹುರುಳಿ ಮತ್ತು ಅವರೆ ಹಾಗೂ ಜಾನುವಾರುಗಳಿಗೆ ಅವಶ್ಯಕವಿರುವ ಮೇವಿಗಾಗಿ ಮೇವಿನ ಮುಸುಕಿನ ಜೋಳ ಹಾಗೂ ಮೇವು ಬೆಳೆಯಬಹುದಾಗಿದೆ. ಮುಂಗಾರು ಹಂಗಾಮಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಇಲಾಖೆ ತಿಳಿಸಿರುವ ಬೆಳೆ ಮತ್ತು ಬೇಸಾಯ ಕ್ರಮಗಳನ್ನು ರೈತರು ಅನುಸರಿಸುವಂತೆ ಸಲಹೆ ನೀಡಲಾಗಿದೆ.ರೈತರು ಕಡ್ಡಾಯವಾಗಿ ಅನುಸರಿಸಬೇಕಾದ ಬೆಳೆ ನಿರ್ವಹಣಾ ಕ್ರಮಗಳು:-
ಮಳೆಯ ಅನಿಶ್ಚತತೆ ಹಾಗೂ ಆರಂಭಿಕ ಬರದ ಒತ್ತಡವನ್ನು ತಡೆಗಟ್ಟಲು ನೀರು ಅಥವಾ ಪೋಷಕಾಂಶ ದ್ರಾವಣವನ್ನು ಉಪಯೋಗಿಸಿ ಬೀಜ ಗಟ್ಟಿಗೊಳಿಸುವಿಕೆ ಮಾಡಬೇಕು. ಕಡಿಮೆ ನೀರು ಅಗತ್ಯವಿರುವ ಮೆಕ್ಕೆಜೋಳ, ಜೋಳ, ರಾಗಿ, ಎಳ್ಳು, ಹುಚ್ಚೆಳ್ಳು ಬೆಳೆಗಳಿಗೆ ಆದ್ಯತೆ ನೀಡಬೇಕು. ಅಲ್ಪಾವಧಿ ಮತ್ತು ಬರ ಸಹಿಷ್ಣುತೆ ತಳಿಗಳನ್ನು ಬಿತ್ತನೆ ಮಾಡಬೇಕು. ಮುಸುಕಿನ ಜೋಳದಲ್ಲಿ 65-70 ದಿನಗಳ ಬೆಳೆಯನ್ನು ಮೇವಿಗಾಗಿ ಬಳಸಬೇಕು. ಕಳೆ ನಿಯಂತ್ರಣ ಹಾಗೂ ಮಣ್ಣಿನ ತೇವಾಂಶ ಸಂರಕ್ಷಣೆಗಾಗಿ ಆಗಾಗ್ಗೆ ಅಂತರ ಬೇಸಾಯ ಮಾಡಬೇಕು. ಸಾಲುಗಳ ನಡುವೆ ಕೃಷಿ ತ್ಯಾಜ್ಯಗಳನ್ನು ಹೊದಿಕೆಯಾಗಿ ಬಳಸಬೇಕು. ಶಿಫಾರಸ್ಸು ಪ್ರಮಾಣದ ಸಾರಜನಕ, ರಂಜಕ, ಪೊಟ್ಯಾಷ್ ರಸಗೊಬ್ಬರಗಳನ್ನು ಬಳಸಬೇಕು.
ಮಧ್ಯಂತರ ಬರ ಪರಿಸ್ಥಿತಿಯಲ್ಲಿ ಮಳೆಯ ನಂತರ ಬೆಳೆ ಚೇತರಿಕೆಗೆ ಎಲೆಗಳ ಮೇಲೆ ಶೇ. 2ರ ಯುರಿಯಾ/ ಡಿ.ಎ.ಪಿ/ 13:0:45 ಹಾಗೂ ಶೇ.1ರ 19:19:19 ದ್ರಾವಣ ಸಿಂಪರಣೆ ಮಾಡಬೇಕು. ಸ್ಥಿರ ಇಳುವರಿಗಾಗಿ ಧಾನ್ಯ/ ಸಿರಿಧಾನ್ಯ/ ಹರಳು ಬೆಳೆಗಳನ್ನು ದ್ವಿದಳ ಧಾನ್ಯಗಳು/ ಎಣ್ಣೆ ಕಾಳು ಬೆಳೆಗಳೊಂದಿಗೆ ಅಂತರ ಬೆಳೆಯಾಗಿ ಬೆಳೆಯಬೇಕು. ತಡ ಮುಂಗಾರಿನಲ್ಲಿ ಹುರುಳಿ ಮತ್ತು ಸಿರಿಧಾನ್ಯ ಬೆಳೆಗಳನ್ನು ರೈತರ ಬಳಿ ಇರುವ ಬಿತ್ತನೆ ಬೀಜಗಳನ್ನು ಬಿತ್ತಬೇಕು. ಬೆಳೆಯ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿಯನ್ನು ತುಂತುರು ಅಥವಾ ಹನಿ ನೀರಾವರಿ ಮೂಲಕ ಒದಗಿಸಬೇಕು.
ಈ ಬಾರಿ ಮಳೆಯ ಕೊರತೆ ಉಂಟಾಗುವುದರಿಂದ ಬಿತ್ತನೆ ಮಾಡುವ ಎಲ್ಲಾ ಬೆಳೆಗಳಿಗೂ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ತಮ್ಮ ಪ್ರದೇಶಕ್ಕೆ ಅನುಗುಣವಾದ ಹವಾಮಾನ ಮುನ್ಸೂಚನೆಗಳು ಮತ್ತು ಆಗಿಂದಾಗ್ಗೆ ನೀಡುವ ಕೃಷಿ ಸಲಹೆಗಳನ್ನು ರೈತರು ಅನುಸರಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ