2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ, ಡಿ.ಕೆ.ಶಿ. ರಾಜ್ಯದ ಮುಖ್ಯಮಂತ್ರಿ – ಸಚಿವ ಎನ್. ಚಲುವರಾಯಸ್ವಾಮಿ ಭವಿಷ್ಯ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ರಾಜಕೀಯವಾಗಿ ಮಹತ್ವದ ಹೇಳಿಕೆ ನೀಡಿದ್ದಾರೆ.

ಕನ್ಯಾಘಟ್ಟ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ವೇದಿಕೆಯಲ್ಲಿ ಮಾತನಾಡಿದ ಅವರು, “ನಮ್ಮ ಮುಂದೆ ಬರಗಾಲ ಬಂದಿದೆ. ಅತ್ಯಂತ ತೀವ್ರ ಬರಗಾಲವನ್ನು ಎದುರಿಸುತ್ತಿದ್ದೇವೆ. 2023 ರಲ್ಲಿ ಕೇಂದ್ರ ಸರ್ಕಾರ ರೈತರಿಗೆ ಕೊಡಬೇಕಾದ ಅನುದಾನವನ್ನು ಕೊಟ್ಟಿಲ್ಲ. ನಾವು ಕೋರ್ಟ್ ಮೂಲಕ ತಂದು ರೈತರಿಗೆ ಕೊಟ್ಟಿದ್ದೇವೆ” ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

“ದೇವರ ಕೃಪೆಯಿಂದ ಮತ್ತೆ ನನಗೆ ಸಚಿವ ಸ್ಥಾನ ಸಿಕ್ಕಿದೆ. ನೀರಾವರಿ ವಿಚಾರದಲ್ಲಿ ಅನೇಕ ಸವಾಲುಗಳಿವೆ. ನಿಮ್ಮ ಆಶೀರ್ವಾದ ಇರಲಿ. ಚುಂಚನಗಿರಿ ಕ್ಷೇತ್ರ ಆಲದಮರದ ರೀತಿ ಬೆಳೆದಿದೆ. ಮಠವನ್ನು ನಿರ್ಮಲಾನಂದನಾಥ ಸ್ವಾಮೀಜಿ ಅವರು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ” ಎಂದು ಹೇಳಿದರು.

ಇದೇ ವೇಳೆ ಮುಂದಿನ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿದ ಸಚಿವರು, “ಸಿದ್ದರಾಮಯ್ಯ ಸಹಕಾರದಿಂದ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೆ ಅಧಿಕಾರ ದೊರಯಲಿದೆ. ಮತ್ತೆ 2028ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಮತ್ತೆ ಡಿ.ಕೆ. ಶಿವಕುಮಾರ್ ರಾಜ್ಯದ ಸಿಎಂ ಆಗ್ತಾರೆ” ಎಂದು ಭವಿಷ್ಯ ನುಡಿದರು.

ಕೊನೆಯಲ್ಲಿ, “ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ” ಎಂದು ಸಚಿವರು ಕರೆ ನೀಡಿದರು.

ವೇದಿಕೆಯಲ್ಲಿ ಪರಮಪೂಜ್ಯ ನಿರ್ಮಲಾನಂದನಾಥ ಸ್ವಾಮೀಜೀ,ಸಚಿವರಾದ ಬೈರತಿ ಸುರೇಶ್,ಶಾಸಕರುಗಳಾದ ಶರತ್ ಬಚ್ಚೇಗೌಡ,ಉದಯ್,ದರ್ಶನ್ ಪುಟ್ಟಣ್ಣಯ್ಯ,ಪುಟ್ಟಸ್ವಾಮಿಗೌಡ,ವಿಶ್ವಾನಾಥ್,ದಿನೇಶ್ ಗೂಳಿಗೌಡ,ಉದ್ಯಮಿ ಸ್ಟಾರ್ ಚಂದ್ರು,ವೆಂಕಟೇಶ್,ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕನ್ಯಾಘಟ್ಟದಲ್ಲಿ 100 ಸಾರಿಗೆ ಬಸ್‌ಗಳ ಭರವಸೆ – ಸಚಿವ ಭೈರತಿ ಸುರೇಶ್ ಘೋಷಣೆ

ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ಸಹೋದರರಾದ ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ಉದ್ಯಮಿ ಸ್ಟಾರ್ ಚಂದ್ರು ಹಾಗೂ ವೆಂಕಟೇಶ್ ಅವರ ಸಹಕಾರದಲ್ಲಿ ಅವರ ಸ್ವಗ್ರಾಮದಲ್ಲಿ ನಿರ್ಮಿಸಲಾದ ನೂತನ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಬಿ.ಎಸ್. ಭೈರತಿ ಸುರೇಶ್ ಅವರು ಮಂಡ್ಯ ಜಿಲ್ಲೆಗೆ 100 ಹೊಸ ಸಾರಿಗೆ ಬಸ್‌ಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, “ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹೊಸ ಬಸ್‌ಗಳನ್ನು ಒದಗಿಸಲಿದೆ. ಮಂಡ್ಯ ಜಿಲ್ಲೆಯ ಗ್ರಾಮೀಣ ಭಾಗಗಳ ಜನರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ” ಎಂದು ತಿಳಿಸಿದರು.

ಸಚಿವರ 100 ಬಸ್‌ಗಳ ಭರವಸೆಯು ಜಿಲ್ಲೆಯ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಇದೇ ವೇಳೆ ಮಾತನಾಡಿದ ಅವರು, “ಆದಿಚುಂಚನಗಿರಿ ಕ್ಷೇತ್ರವು ಜಾತಿ-ಧರ್ಮ ಬೇಧ-ಭಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಜಾತ್ಯತೀತ ಹಾಗೂ ಸರ್ವಜನಾಂಗದ ಶ್ರದ್ಧಾ ಕೇಂದ್ರವಾಗಿ ಗುರುತಿಸಿಕೊಂಡಿದೆ” ಎಂದು ಬಣ್ಣಿಸಿದರು.

ವೇದಿಕೆಯಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *