ಚಾಮರಾಜನಗರ: ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಹುಲಿ ದಾಳಿಗೆ ರೈತ ಬಸವಣ್ಣ ಬಲಿಯಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇವೇಳೆ ಅವರು ಮೃತ ರೈತನ ಕುಟುಂಬಕ್ಕೆ ಸರ್ಕಾರದ ವತಿಯಿಂದ 5 ಲಕ್ಷ ಪರಿಹಾರದ ಚೆಕ್ ವಿತರಿಸಿದರು. ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಉಳಿದ 15 ಲಕ್ಷ ಪರಿಹಾರವನ್ನು ಕೊಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಇಂದಿನ ಪರಿಸ್ಥಿತಿಯಲ್ಲಿ 20 ಲಕ್ಷ ಪರಿಹಾರವೂ ಸಾಕಾಗುವುದಿಲ್ಲ. ಮೃತ ರೈತನ ಕುಟುಂಬದ ಪರಿಸ್ಥಿತಿಯನ್ನು ಪರಿಗಣಿಸಿ ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ರೈತನನ್ನು ಬಲಿತೆಗೆದುಕೊಂಡ ಹುಲಿಯನ್ನು ಸೆರೆಹಿಡಿಯಲು ಇಂದಿನಿಂದಲೇ ಸಾಕಾನೆಗಳನ್ನು ಹಾಗೂ ಅರವಳಿಕೆ ತಜ್ಞರನ್ನು ಕರೆಸಿ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದರು.
ಮೃತ ರೈತನ ಪತ್ನಿಗೆ ಪ್ರತಿ ತಿಂಗಳು ೪ ಸಾವಿರ ಮಾಶಾಸನ ನೀಡುವ ವ್ಯವಸ್ಥೆ ಮಾಡಲಾಗುವುದು. ಮೃತ ರೈತನಿಗೆ ನಾಲ್ವರು ಮಕ್ಕಳಿದ್ದು, ಅವರಲ್ಲಿ ಒಬ್ಬರಿಗೆ ಪಶುಸಂಗೋಪನೆ ಇಲಾಖೆಯಲ್ಲಿ ಡಿ-ಗ್ರೂಪ್ ನೌಕರಿ ಹಾಗೂ ಮತ್ತೊಬ್ಬ ಮಗನಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದರು.
