ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಮಾಹಿತಿ, ದಾಖಲೆ ಸಂಗ್ರಹಣೆ : ಸಹಕರಿಸಲು ಮನವಿ

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ (ಜಿಜೆವೈ) ಯೋಜನೆಯ ಫಲಾನುಭವಿಗಳ ಮನೆ-ಮನೆ ಭೇಟಿ ಮೂಲಕ ಮಾಹಿತಿ ಹಾಗೂ ದಾಖಲೆಗಳ ಸಂಗ್ರಹಣೆ ಕಾರ್ಯವು ಜುಲೈ 1 ರಿಂದ ಆರಂಭಿಸಲಾಗಿದೆ.

2023ರ ಜುಲೈ ತಿಂಗಳಿನಿಂದ ಜಾರಿಗೆ ಬಂದಿರುವ ಗೃಹ ಜ್ಯೋತಿ ಯೋಜನೆಯಡಿ ಫಲಾನುಭವಿಗಳ ವಿವರಗಳನ್ನು ನವೀಕರಣ, ದಾಖಲಾತಿಗಳ ಪರಿಶೀಲನೆ ಹಾಗೂ ಯೋಜನೆಯ ಮಾಹಿತಿಯನ್ನು ಸಮರ್ಪಕವಾಗಿ ದೃಢೀಕರಿಸುವ ಉದ್ದೇಶದಿಂದ ಈ ವಿಶೇಷ ಮಾಹಿತಿ ಸಂಗ್ರಹಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. 

ಈ ಕಾರ್ಯದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ (ಸೆಸ್ಕ್) ಅಧಿಕೃತ ಮೀಟರ್ ರೀಡರ್‍ಗಳು ಹಾಗೂ ಸಿಬ್ಬಂದಿ ಗ್ರಾಹಕರ ಮನೆಗಳಿಗೆ ನೇರವಾಗಿ ಭೇಟಿ ನೀಡಿ ಫಲಾನುಭವಿಗಳ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಹಿತಿಯನ್ನು ದಾಖಲಿಸಿ, ಅಗತ್ಯವಿರುವ ಘೋಷಣಾ ಪತ್ರಗಳನ್ನು ಭರ್ತಿ ಮಾಡಿಸುವ ಮೂಲಕ ಮಾಹಿತಿ ಸಂಗ್ರಹಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ.

ಮನೆ-ಮನೆ ಭೇಟಿ ಸಂದರ್ಭದಲ್ಲಿ ಫಲಾನುಭವಿಗಳು ಆಧಾರ್ ಕಾರ್ಡ್, ಫಲಾನುಭವಿಯ ಪಾಸ್‍ಪೆÇೀರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರ (ಅನ್ವಯಿಸುವ ಸಂದರ್ಭಗಳಲ್ಲಿ ಮಾತ್ರ), ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ (ಅನ್ವಯಿಸುವ ಸಂದರ್ಭಗಳಲ್ಲಿ ಮಾತ್ರ)ಗಳನ್ನು ಸಲ್ಲಿಸಬೇಕು. 

ಗೃಹ ಜ್ಯೋತಿ ಯೋಜನೆಯಡಿ ಫಲಾನುಭವಿಗಳ ಮಾಹಿತಿಯನ್ನು ನಿಖರವಾಗಿ ಪರಿಶೀಲಿಸಿ ದಾಖಲಿಸುವ ಉದ್ದೇಶದಿಂದ ಈ ಸ್ಥಳ ಪರಿಶೀಲನೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಈ ಪ್ರಕ್ರಿಯೆಯನ್ನು ಅಧಿಕೃತ ಮೀಟರ್ ರೀಡರ್‍ಗಳ ಮೂಲಕ ಸ್ಥಳದಲ್ಲಿಯೇ ನಡೆಸುವುದು ಕಡ್ಡಾಯವಾಗಿದೆ. ಆದ್ದರಿಂದ ಸೆಸ್ಕ್ ವ್ಯಾಪ್ತಿಯ ಎಲ್ಲಾ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಹಾಗೂ ಗ್ರಾಹಕರು ಮನೆಗೆ ಭೇಟಿ ನೀಡುವ ಸಿಬ್ಬಂದಿಯ ಅಧಿಕೃತ ಗುರುತಿನ ಚೀಟಿಯನ್ನು ಪರಿಶೀಲಿಸಿದ ನಂತರ ಅಗತ್ಯ ದಾಖಲೆಗಳನ್ನು ಒದಗಿಸಬೇಕು. ಸಾರ್ವಜನಿಕರು ಮಾಹಿತಿ ಸಂಗ್ರಹಣೆ ಹಾಗೂ ಪರಿಶೀಲನಾ ಕಾರ್ಯವನ್ನು ಸುಗಮವಾಗಿ ಪೂರ್ಣಗೊಳಿಸಲು ಸಂಪೂರ್ಣ ಸಹಕಾರ ನೀಡುವಂತೆ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *