ಚಾಮರಾಜನಗರ: ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಸರ್ಕಾರದ ಮಾರ್ಗಸೂಚಿ ಪ್ರಕಟವಾಗುವವರೆಗೆ ಸಾರ್ವಜನಿಕರು ಅನಗತ್ಯ ಗೊಂದಲಗಳಿಗೆ ಒಳಗಾಗುವ ಅಗತ್ಯವಿಲ್ಲ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿಂದು ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಮುಖವಾಗಿದ್ದು, ಇತ್ತೀಚೆಗೆ ಯೋಜನೆಯ ಮಹಿಳಾ ಫಲಾನುಭವಿಗಳು ಹೊಸದಾಗಿ ಅರ್ಜಿ ಹಾಕಲು ಕಚೇರಿಗಳಿಗೆ ಅಲೆದಾಡುತ್ತಿರುವುದು ಕಂಡುಬಂದಿದೆ. ಸರ್ಕಾರದ ಮಟ್ಟದಲ್ಲಿ ಯೋಜನೆಯ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಹೊಸ ಮಾರ್ಗಸೂಚಿ ಬರುವವರೆಗೆ ಯೋಜನೆ ಹೇಗಿದೆಯೋ ಹಾಗೇಯೇ ಮುಂದುವರಿಯಲಿದೆ. ಈ ಬಗ್ಗೆ ಸಾರ್ವಜನಿಕರು ಅನಗತ್ಯ ಗೊಂದಲ ಬೇಡ ಎಂದರು.
ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ನಾಗಮ್ಮ ಎಂಬುವವರು ನಿಧನ ಹೊಂದಿದ್ದು, ಮತ್ತೊಬ್ಬ ನಾಗಮ್ಮ ಎಂಬ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗೆ ಇದರಿಂದ 2 ಸಾವಿರ, ಪಡಿತರ, ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ. ಇದನ್ನು ಸರಿಪಡಿಸುವಂತೆ ಸಭೆಯಲ್ಲಿ ಸದಸ್ಯರು ಗಮನಕ್ಕೆ ತಂದರು. ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದ ಅಧ್ಯಕ್ಷರು ಸಿ.ಡಿ.ಪಿ.ಒ ಹಾಗೂ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ಪಡೆದು ಸ್ಥಳ ಪರಿವೀಕ್ಷಣೆ ನಡೆಸಿ ಸಮಸ್ಯೆ ಸರಿಪಡಿಸುವಂತೆ ತಿಳಿಸಿದರು.
ಜಿಲ್ಲೆಯ ಯಾವುದೇ ಭಾಗದಲ್ಲಿ ಸೌಲಭ್ಯದಿಂದ ವಂಚಿತರಾಗಿರುವ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಆದ್ಯತೆ ಮೇರೆಗೆ ಜಮೆ ಮಾಡಬೇಕು. 2500 ಮಂದಿ ಜಿ.ಎಸ್.ಟಿ ಪಾವತಿದಾರರಲ್ಲಿ 435 ಜನ ಮಾತ್ರ ಕ್ಲಿಯರೆನ್ಸ್ ಸಲ್ಲಿಸಿದ್ದಾರೆ. ಉಳಿದ ಫಲಾನುಭವಿಗಳ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು. ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿಯಿರುವ ಅರ್ಹ ಫಲಾನುಭವಿಗಳಿಗೆ ತಾಂತ್ರಿಕ ಸಮಸ್ಯೆ ಪರಿಹರಿಸಿ ಖಾತೆಗಳಿಗೆ ಹಣ ವರ್ಗಾಯಿಸುವ ಸಂಬಂಧ ಆಹಾರ ಇಲಾಖೆ ಅಧಿಕಾರಿಗಳು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧ್ಯಕ್ಷರು ಸೂಚಿಸಿದರು.
ಶಕ್ತಿ ಯೋಜನೆಯಡಿ ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ನಿಗದಿತ ವೇಳೆಗೆ ಸರಿಯಾಗಿ ಸಂಚರಿಸುವ ಮೂಲಕ ಅನುಕೂಲ ಮಾಡಿಕೊಡಬೇಕು. ವಿದ್ಯಾರ್ಥಿಗಳನ್ನು ಬಸ್‍ಪಾಸ್‍ಗಾಗಿ ಗಂಟೆಗಟ್ಟಲೆ ಕಾಯಿಸಬಾರದು. ಗೃಹಜ್ಯೋತಿ ಯೋಜನೆಯಡಿ ದೂರುಗಳು ಬರದಂತೆ ನೋಡಿಕೊಳ್ಳಬೇಕು. ಯುವನಿಧಿ ಯೋಜನೆಯಡಿ ಅರ್ಹರಿಗೆ ನೆರವಾಗುವಂತೆ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು ಅವರು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಸೋಮೇಶ್ವರ, ಬಿ.ಪಿ. ನಾಗರಾಜಮೂರ್ತಿ, ರವಿ, ಎನ್. ಸಿದ್ದರಾಜು, ಸದಸ್ಯರಾದ ಎಸ್. ಪ್ರಭುಪ್ರಸಾದ್, ಕೆ.ಬಿ. ಚಿನ್ನಸ್ವಾಮಿ, ಎಚ್.ಜಿ. ಉಮಾಪತಿ, ಎಂ. ರಾಚಯ್ಯ, ಆರ್. ರಾಜೇಂದ್ರ, ಎಚ್.ಎನ್. ಜಯರಾಜು, ಭಾಗ್ಯ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿ ಮಂಜುಳ, ಜಿಲ್ಲಾ ಉದ್ಯೋಗಾಧಿಕಾರಿ ಮಹಮದ್ ಅಕ್ಬರ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.