ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿಸಿಕೊಳ್ಳಬೇಕು: ಹನೂರು ವೆಂಕಟೇಶ್ ಕರೆ

ಹನೂರು: ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಹನೂರು ವೆಂಕಟೇಶ್ ಕರೆ ನೀಡಿದರು.

ಹನೂರು ಪಟ್ಟಣದ ಹೊರವಲಯದ ಎಂ.ಆರ್ ರೆಸಿಡೆನ್ಸಿಯಲ್ಲಿ ಆಯೋಜಿಸಿದ್ದ ಎಸ್‌ಐಆರ್ ಪ್ರಗತಿ ಪರಿಶೀಲನೆ ಮತ್ತು ಬಿಎಲ್‌ಒ-2 ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

“ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಮುಂದಿಟ್ಟುಕೊಂಡು ನಾವು ಈಗಿನಿಂದಲೇ ಸಜ್ಜಾಗಬೇಕು. ನಾನು ಕೂಡ ನಿಮ್ಮಂತೆ ಪಕ್ಷದ ಒಬ್ಬ ಸಿಪಾಯಿ. ಮುಂದಿನ ದಿನಗಳಲ್ಲಿ ಪ್ರತಿ ಬೂತ್‌ಗೂ ನಾನೇ ಖುದ್ದಾಗಿ ಭೇಟಿ ನೀಡಿ ನಿಮ್ಮ ಜೊತೆ ಕುಳಿತು ಕೆಲಸ ಮಾಡುತ್ತೇನೆ” ಎಂದು ಹೇಳಿದರು.

“ನವೆಂಬರ್ ತಿಂಗಳಲ್ಲಿ ಬರಲಿರುವ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬರಲು ನಾನು ಸಿದ್ಧನಿದ್ದೇನೆ. ನೀವು ನನ್ನನ್ನು ಯಾವ ರೂಪದಲ್ಲಾದರೂ ಬಳಸಿಕೊಳ್ಳಬಹುದು” ಎಂದರು.

“2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ. ಈ ಸರ್ಕಾರವನ್ನು ಕಿತ್ತೊಗೆದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಪ್ರತಿಯೊಬ್ಬರೂ ಶ್ರಮಿಸಬೇಕು. ಹನೂರು ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ಸನ್ನದ್ಧರಾಗಬೇಕು” ಎಂದು ಕರೆ ನೀಡಿದರು.

ಪರಿಷತ್ ಮಾಜಿ ಶಾಸಕ ಪ್ರೊ. ಮಲ್ಲಿಕಾರ್ಜುನಪ್ಪ ಮಾತನಾಡಿ, ಬಿಟ್ಟುಹೋದವರನ್ನು ನಮೂನೆ ಸಂಖ್ಯೆ 6ರಲ್ಲಿ, 18 ವರ್ಷ ತುಂಬಿದ ಹೊಸ ಮತದಾರರನ್ನು ನಮೂನೆ ಸಂಖ್ಯೆ 7ರಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು. ಹೊರರಾಜ್ಯ ಹಾಗೂ ಹೊರದೇಶದಿಂದ ಬಂದು ಇಲ್ಲಿ ಮತದಾನದ ಹಕ್ಕು ಪಡೆದಿದ್ದರೆ ಅಂತಹವರನ್ನು ಪಟ್ಟಿಯಿಂದ ಕೈಬಿಡಬೇಕು ಎಂದು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ SIR ವಿಭಾಗ ಉಸ್ತುವಾರಿ ಅಶ್ವಿನಿ ಶಂಕರ್, ಮಾಜಿ ವಿಧಾನಪರಿಷತ್ ಸದಸ್ಯ ಪ್ರೊ. ಮಲ್ಲಿಕಾರ್ಜುನಪ್ಪ, ವಿಭಾಗ ಉಸ್ತುವಾರಿ ನಂಜುಂಡ ಮರುಳಾರಾಧ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಪ್ರಸಾದ್, SIR ಪ್ರಭಾರಿ ಬಾಲಸುಬ್ರಮಣ್ಯಂ, ಜಿಲ್ಲಾ ಉಪಾಧ್ಯಕ್ಷ ರೇವಣ್ಣ, ಹನೂರು ಮಂಡಲ ಅಧ್ಯಕ್ಷ ವೃಷಬೇಂದ್ರ ಸ್ವಾಮಿ, ಮಹದೇಶ್ವರ ಮಂಡಲ ಅಧ್ಯಕ್ಷ ಮುರುಗೇಶ್, ಮಾಜಿ ಅಧ್ಯಕ್ಷ ಜಗನ್ನಾಥ್ ಗಾಯಕ್ವಾಡ್, ಮಂಡಲ ಪ್ರಧಾನ ಕಾರ್ಯದರ್ಶಿ ಮಾರ್ತಾಂಡ್, ಹಿರಿಯ ಮುಖಂಡ ಅನಂತ ಪದ್ಮನಾಭಗುಪ್ತ, BLA-1 ಲೋಕೇಶ್ ಜತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *